
ಮುಲ್ಹೇಮ್ ಆನ್ ಡೆರ್ ರುಹ್ರ (ಜರ್ಮನಿ): ಭಾರತದ ಭರವಸೆಯ ಶಟ್ಲರ್ ಅರವಿಂದ್ ಭಟ್ 120,000 ಡಾಲರ್ ಬಹುಮಾನ ಮೊತ್ತದ ಜರ್ಮನ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‍ನಲ್ಲಿ ಪ್ರಿಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಹಾಲಿ ಚಾಂಪಿಯನ್ ಆಗಿರುವ ಕರ್ನಾಟಕ ಮೂಲದ ಅರವಿಂದ್ ಭಟ್, ಬುಧವಾರ ನಡೆದ ಪುರುಷರ ವಿಭಾಗದ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಅರ್ಹತಾ ಸುತ್ತಿನ ಆಟಗಾರ ಸ್ಥಳೀಯ ಪ್ಯಾಟ್ರಿಕ್ ಕಯಿಮಿನಿಜ್ ಅವರನ್ನು 21-10, 24-22 ಅಂಕಗಳಿಂದ ಮಣಿಸಿ ಮುನ್ನಡೆದರು. ಒಟ್ಟು 36 ನಿಮಿಷಗಳ ಕಾಲ ನಡೆದ ಎರಡು ಗೇಮಗಳ ರೋಚಕ ಹೋರಾಟದಲ್ಲಿ 35ರ ಭಟ್ ಅದ್ಭುತ ಆಟ ಪ್ರದರ್ಶಿಸಿದರು. ಜ್ವಾಲಾ-ಅಶ್ವಿನಿ 16ರಘಟ್ಟಕ್ಕೆ ಭಾರತದ ಜೋಡಿ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ, ಮಹಿಳೆಯರ ಡಬಲ್ಸ್‍ನಲ್ಲಿ ಪ್ರಿಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಇಂದೇ ನಡೆದ ಪಂದ್ಯದಲ್ಲಿ ಜ್ವಾಲಾ-ಅಶ್ವಿನಿ ಜೋಡಿ ಇಂಡೊನೇಷಿಯಾದ ಸುಸಿ ರಿಜ್ಕಿ ಅಂದಿನಿ ಮತ್ತು ಮಾರೆಟಾ ದಿಯಾ ಜಿಯೋವಾನಿ ಅವರ ವಿರುದ್ಧ 21-17, 21-16 ಅಂಕಗಳಿಂದ ಜಯಗಳಿಸಿತು. ಈ ಮಧ್ಯೆ ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ಅಶ್ವಿನಿ ಪೊನ್ನಪ್ಪ ಮತ್ತು ರಷ್ಯಾದ ವ್ಲಾದಿಮಿರ್ ಇವಾನೊವ್ ಅವರು ಪ್ರಧಾನ ಸುತ್ತಿಗೆ ಅರ್ಹತೆ ಪಡೆದಿದ್ದಾರೆ.
Advertisement