ವಿಶ್ವಕಪ್: ಟೀಂ ಇಂಡಿಯಾ ಬಗ್ಗೆ ಗವಾಸ್ಕರ್ ಶ್ಲಾಘನೆ

ಮಂಗಳವಾರ ಪ್ರಕಟಗೊಂಡಿರುವ ವಿಶ್ವಕಪ್ ಪಂದ್ಯವನ್ನಾಡಲಿರುವ ಭಾರತೀಯ ಕ್ರಿಕೆಟ್ ತಂಡ ಬಗ್ಗೆ ಸುನಿಲ್ ಗವಾಸ್ಕರ್ ಮೆಚ್ಚುಗೆ ...
ಸುನಿಲ್ ಗವಾಸ್ಕರ್
ಸುನಿಲ್ ಗವಾಸ್ಕರ್

ನವದೆಹಲಿ: ಮಂಗಳವಾರ ಪ್ರಕಟಗೊಂಡಿರುವ ವಿಶ್ವಕಪ್ ಪಂದ್ಯವನ್ನಾಡಲಿರುವ ಭಾರತೀಯ ಕ್ರಿಕೆಟ್ ತಂಡ ಬಗ್ಗೆ ಸುನಿಲ್ ಗವಾಸ್ಕರ್ ಮೆಚ್ಚುಗೆ ಸೂಚಿಸಿದ್ದಾರೆ.

ಪ್ರಸ್ತುತ ವಿಶ್ವಕಪ್ ತಂಡದಲ್ಲಿ ಆಲ್‌ರೌಂಡರ್ ರವೀಂದ್ರ ಜಡೇಜಾ ಮತ್ತು ಸ್ಟುವರ್ಟ್ ಬಿನ್ನಿ ಅವರನ್ನು ಸೇರಿಸಿಕೊಳ್ಳಲಾಗಿದೆ.

ತಂಡದ ಆಯ್ಕೆ ಬಗ್ಗೆ ಮೆಚ್ಚುಗೆ ಸೂಚಿಸಿದ ಗವಾಸ್ಕರ್, ಭಾರತೀಯ ಬ್ಯಾಟ್ಸ್‌ಮೆನ್‌ಗಳು ಹೆಚ್ಚಿನ ರನ್ ಕಲೆ ಹಾಕಲು ಸಮರ್ಥರಾಗಿದ್ದಾರೆ. ಕಳೆದ ಬಾರಿ ನಾವು ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿದ್ದೆವು. ಇದೀಗ ಜಡೇಜಾ, ಬಿನ್ನಿ, ಅಶ್ವಿನ್ ಮೊದಲಾದವರು ಈ ಪಟ್ಟವನ್ನು ಕಾಯ್ದುಕೊಳ್ಳಲು ಮಹತ್ತರ ಪಾತ್ರವನ್ನು ವಹಿಸಬೇಕಾಗಿದೆ ಎಂದಿದ್ದಾರೆ.

ಭಾರತದ ತಂಡದ ಬಗ್ಗೆ ಹೇಳುವುದಾದರೆ ಇಲ್ಲಿ ಬ್ಯಾಟಿಂಗ್ ಶಕ್ತಿಯುತವಾಗಿದೆ. ಅದೇ ವೇಳೆ ಬೌಲರ್ ಗಳು ಆಸ್ಟ್ರೇಲಿಯಾದಲ್ಲಿ ಚೆನ್ನಾಗಿ ಪ್ರದರ್ಶನ ನೀಡಿದರೆ ಒಳ್ಳೆಯ ಫಲಿತಾಂಶ ಸಿಗಬಹುದು ಎಂದು ಟೀವಿ ವಾಹಿನಿಯೊಂದರಲ್ಲಿ ಮಾತನಾಡಿದ ಗವಾಸ್ಕರ್  ಹೇಳಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆರಂಭಿಕ ದಾಂಡಿಗ ಶಿಖರ್ ಧವನ್ ಅಷ್ಟೇನೂ ಉತ್ತಮ ಪ್ರದರ್ಶನ ನೀಡದೇ ಇದ್ದರೂ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಲಾಗಿದೆ. ಲಿಮಿಟೆಡ್ ಓವರ್ ಫಾರ್ಮಾಟ್ ಪಂದ್ಯಗಳಲ್ಲಿ ಮುರಳಿ ವಿಜಯ್ ಅವರನ್ನು ಕೈ ಬಿಟ್ಟು ಧವನ್ ಗೆ ಸ್ಥಾನ ನೀಡಿರುವುದು ಸರಿಯಾದ ಆಯ್ಕೆ. ವಿಶ್ವಕಪ್ 50 ಓವರ್‌ಗಳ ಫಾರ್ಮಾಟ್ ಆಗಿದ್ದು, ಇದು ಧವನ್‌ಗೆ ಸೂಕ್ತ ಎಂದು ಗವಾಸ್ಕರ್ ಅಭಿಪ್ರಾಯ ಪಟ್ಟಿದ್ದಾರೆ.

ಏತನ್ಮಧ್ಯೆ, ಆಯ್ಕೆ ಸಮಿತಿಯಲ್ಲಿ ಭಾರತೀಯ ತಂಡದ ಮಾಜಿ ಆಟಗಾರ ರೋಜರ್ ಬಿನ್ನಿ ಇರುವ ಕಾರಣವೇ ಸ್ಟುವರ್ಟ್ ಬಿನ್ನಿಯನ್ನು ಆಯ್ಕೆ ಮಾಡಲಾಗಿದೆ ಎಂದು ಫೇಸ್‌ಬುಕ್‌ನಲ್ಲಿ ಕೆಲವರು ಆರೋಪ ಮಾಡಿದ್ದಾರೆ.

ಈ  ಬಗ್ಗೆ ಪ್ರತಿಕ್ರಿಯಿಸಿದ ಗವಾಸ್ಕರ್, ರೋಜರ್ ಬಿನ್ನಿ ಅವರು ತನ್ನ ಟೀಂಮೇಟ್ ಆಗದೇ ಇರುತ್ತಿದ್ದರೂ ನಾನು ಸ್ಟುವರ್ಟ್ ಬಿನ್ನಿಯನ್ನು ಆಯ್ಕೆ ಮಾಡುತ್ತಿದ್ದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com