
ತಿರುವನಂತಪುರಂ: ಜನವರಿ 31ಕ್ಕೆ ಕೇರಳದಲ್ಲಿ ನಡೆಯಲಿರುವ 35ನೇ ನ್ಯಾಷನಲ್ ಗೇಮ್ಸ್‌ನ ಪ್ರಾಯೋಜಿತ ಕಾರ್ಯಕ್ರಮವಾದ 'ರನ್ ಕೇರಳ ರನ್' ಸಾಮೂಹಿಕ ಓಟಕ್ಕೆ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮಂಗಳವಾರ ಬೆಳಗ್ಗೆ ಚಾಲನೆ ನೀಡಿದ್ದಾರೆ.
ನ್ಯಾಷನಲ್ ಗೇಮ್ಸ್‌ನ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ ಸಚಿನ್. ಕೇರಳ ವಿಧಾನಸಭಾ ಕಟ್ಟಡದ ಮುಂದೆ ಸಾಮೂಹಿಕ ಓಟ ಆರಂಭವಾಗಿದ್ದು, ಗವರ್ನರ್ ಪಿ.ಸದಾಶಿವಂ ಓಟಕ್ಕೆ ಚಾಲನೆ ನೀಡಿದ್ದಾರೆ. ಹಲವಾರು ಕ್ರೀಡಾಪಟು ಹಾಗೂ ವಿಶೇಷ ಅತಿಥಿಗಳು ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಮಂದಿಯೊಂದಿಗೆ ಸಚಿನ್ ಓಡಿದ್ದು ವಿಶೇಷವಾಗಿತ್ತು.
ರನ್ ಕೇರಳ ರನ್ ಕಾರ್ಯಕ್ರಮದ ಅಂಗವಾಗಿ ಕೇರಳದ ವಿವಿಧ ಜಿಲ್ಲೆಗಳಲ್ಲಿಯೂ ಇಂದು ಸಾಮೂಹಿಕ ಓಟ ನಡೆದಿದೆ.
ದಾರಿಯ ಇಕ್ಕೆಲಗಳಲ್ಲಿ ಸಚಿನ್ ಓಟ ನೋಡಲು ಜನ ಕಿಕ್ಕಿರಿದು ನಿಂತು, ಮೊಬೈಲ್‌ನಲ್ಲಿ ಫೋಟೋ ಕ್ಲಿಕ್ಕಿಸಿ ಸಂಭ್ರಮಿಸಿದರು.
ಬೆಳಗ್ಗೆ ಸೆಂಟ್ರಲ್ ಸ್ಟೇಡಿಯಂಗೆ ಆಗಮಿಸಿದ ಸಚಿನ್ ಎಲ್ಲರಿಗೂ ನಮಸ್ಕಾರ ಎಂದು ಹೇಳಿ ರನ್ ಕೇರಳ ರನ್ ಓಟದ ಬಗ್ಗೆ ಜನರನ್ನುದ್ದೇಶಿಸಿ ಮಾತನಾಡಿದರು.
"ರನ್ ಕೇರಳ ರನ್ ಎಂಬುದು ಒಳ್ಳೆಯ ಕಾರ್ಯಕ್ರಮ. ಕ್ರೀಡಾಪಟುವಾಗಿರುವುದರಿಂದ ಓಟದ ಪ್ರಾಧಾನ್ಯತೆ ಬಗ್ಗೆ ನನಗೆ ಅರಿವು ಇದೆ. ಭಾರತ ಆರೋಗ್ಯವಂತರ ನಾಡು ಎಂದೇ ಗುರುತಿಸಿಕೊಳ್ಳಬೇಕು ಎಂಬುದು ನನ್ನ ಆಶಯ. ಕೇರಳ ನನಗೆ ನೀಡಿದ ಬೆಂಬಲ ಹಾಗು ಪ್ರೀತಿಗೆ ಧನ್ಯವಾದಗಳು. ಕೇರಳ ಬ್ಲಾಸ್ಟರ್ಸ್‌ಗೆ ಕೇರಳದ ಜನತೆ ನೀಡಿದ ಬೆಂಬಲ ಕ್ರೀಡಾಪಟುಗಳಿಗೇ ಅಚ್ಚರಿ ಮೂಡುವಂತಿತ್ತು. ಬ್ಲಾಸ್ಟರ್ಸ್ ನನ್ನ ಟೀಂ ಅಲ್ಲ, ಅದು ನಮ್ಮ ಟೀಂ. ಅವರಿಗೆ ಪ್ರೋತ್ಸಾಹ ನೀಡಿದಂತೆ ನ್ಯಾಷನಲ್ ಗೇಮ್ಸ್ ನಲ್ಲಿ ಭಾಗವಹಿಸುವ ಎಲ್ಲ ಕ್ರೀಡಾಪಟುಗಳಿಗೂ ನೀಡಿ ಎಂದು ನಾನು ವಿನಂತಿಸುತ್ತೇನೆ. 27 ವರ್ಷಗಳ ನಂತರ ಕೇರಳದಲ್ಲಿ ನಡೆಯಲಿರುವ ನ್ಯಾಷನಲ್ ಗೇಮ್ಸ್‌ನ್ನು 'ಟಿಪಿಕಲ್ ಮಲಯಾಳಿ ಸ್ಟೈಲ್' ನಲ್ಲಿ ನೀವು ಸ್ವಾಗತಿಸುತ್ತೀರಿ ಎಂಬ ಭರವಸೆ ನನಗಿದೆ. ಗೇಮ್ಸ್‌ನಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಅವರ ಜೀವನದುದ್ದಕ್ಕೂ ನೆನಪಿನಲ್ಲಿರಿಸುವಂತ ಸ್ಮರಣೆಗಳನ್ನು ನೀವು ಅವರಿಗೆ ನೀಡಬೇಕು ''ಎಂದು ಸಚಿನ್ ಹೇಳಿದ್ದಾರೆ.
ನ್ಯಾಷನಲ್ ಗೇಮ್ಸ್‌ಗೆ ನೋಡಲು ಮತ್ತೆ ಬಂದೇ ಬರುತ್ತೇನೆ ಎಂದು ಹೇಳಿ ವೇದಿಕೆಯಿಂದ ಕೆಳಗಿಳಿಯುವ ಮುನ್ನ ಸಚಿನ್ ಪ್ರೇಕ್ಷಕರ ಜತೆ ಸೆಲ್ಫಿ ಕ್ಲಿಕ್ಕಿಸಲು ಮರೆಯಲಿಲ್ಲ.
Advertisement