ವಿಶ್ವ ಕುಸ್ತಿ: ಹಿಮ್ಮೆಟ್ಟಿದ ಸುಶೀಲ್
ನವದೆಹಲಿ: ಒಲಂಪಿಕ್ಸ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ಅಮೆರಿಕಾದ ಲಾಸ್ ವೇಗಾಸ್ ನಲ್ಲಿ ಸೆಪ್ಟೆಂಬರ್ 7 ರಿಂದ 12 ರವರೆಗೆ ನಡೆಯಲಿರುವ ಪ್ರತಿಷ್ಠಿತ ವಿಶ್ವ ಚಾಂಪಿಯನ್ ಶಿಪ್ ನಿಂದ ಹಿಂದೆ ಸರಿದಿದ್ದಾರೆ.
ಭುಜದ ನೋವಿಗೆ ಸಿಲುಕಿರುವ ಸುಶೀಲ್, ಇದೇ ತಿಂಗಳು 6 -7 ರಂದು ನಡೆಯಲಿರುವ ಆಯ್ಕೆ ಟ್ರಯಲ್ಸ್ ನಲ್ಲಿ ಭಾಗವಹಿಸುತ್ತಿಲ್ಲ. ವಿಶ್ವ ಚಾಂಪಿಯನ್ ಶಿಪ್ ಮುಂದಿನ ವರ್ಷ ನಡೆಯಲಿರುವ ರಿಯೋ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತಾ ಕ್ರೀಡಾಕೂಟವಾಗಿದೆ. ಅಭ್ಯಾಸದ ವೇಳೆ ನನ್ನ ಭುಜದಲ್ಲಿ ನೋವು ಕಾಣಿಸಿಕೊಂಡಿದೆ. ಹಾಗಾಗಿ ಮುಂಬರುವ ಆಯ್ಕೆ ಟ್ರಯಲ್ಸ್ ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಆ ಮೂಲಕ ನಿಯಮದ ಪ್ರಕಾರ ನಾನು ಮುಂದಿನ ವರ್ಷ ನಡೆಯಲಿರುವ ರಿಯೋ ಒಲಂಪಿಕ್ಸ್ ಮೊದಲ ಅರ್ಹತಾ ಕ್ರೀಡಾಕೂಟದಿಂದ ಹೊರಗುಳಿಯಬೇಕಿದೆ ಎಂದು ಸುಶೀಲ್ ಕುಮಾರ್ ತಿಳಿಸಿದ್ದಾರೆ.
ವೈದ್ಯರು ನೀಡಿರುವ ಸಲಹೆ ಮೇರೆಗೆ ವಿಶ್ರಾಂತಿ ಪಡೆಯುತ್ತಿದ್ದು ಸದ್ಯದ ಮಟ್ಟಿಗೆ ಯಾವಾಗ ಚೇತರಿಸಿಕೊಳ್ಳುತ್ತೇನೆ ಎಂಬುದರ ಬಗ್ಗೆ ತಿಳಿದಿಲ್ಲ. ಆದರೆ ಆರೋಗ್ಯದ ಬಗ್ಗೆ ನಿಗಾ ವಹಿಸಿದ್ದೇನೆ ಎಂದು ಸುಶೀಲ್ ತಿಳಿಸಿದರು.
ವಿಶ್ವ ಚಾಂಪಿಯನ್ ಶಿಪ್ ನಂತರ ಮುಂದಿನ ಒಲಂಪಿಕ್ಸ್ ಗೆ ಅರ್ಹತೆ ಪಡೆಯಲು ಇನ್ನು 6 ಸ್ಪರ್ಧೆಗಳು ನಡೆಯಲಿದ್ದು ಈ ಎಲ್ಲಾ ಸ್ಪರ್ಧೆಗಳು ಮುಂದಿನ ವರ್ಷ ಮಾರ್ಚ್ ನಂತರ ನಡೆಯಲಿದೆ. ಗಾಯದ ಸಮಸ್ಯೆ ದೊಡ್ಡದಾಗಿಲ್ಲದಿದ್ದರೂ ಈಗಲೇ ಅರ್ಹತೆ ಪಡೆಯಬೇಕೆಂಬ ಉದ್ದೇಶದಿಂದ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ಮುಂದಾಗುವುದಿಲ್ಲ. ದೈಹಿಕವಾಗಿ ಪೂರ್ಣ ಕ್ಷಮತೆ ಸಾಧಿಸದ ಹೊರತು ಅಖಾಡಕ್ಕಿಳಿಯುವುದು ಉತ್ತಮವಲ್ಲ. ಮುಂದಿನ ವರ್ಷ ನಡೆಯಲಿರುವ ಅರ್ಹತಾ ಸುತ್ತಿನ ಸ್ಪರ್ಧೆಗಳಲ್ಲಿ ಭಾಗವಹಿಸುತ್ತೇನೆ. ಅದಕ್ಕಾಗಿ ಕಠಿಣ ಪರಿಶ್ರಮ ಹಾಕುತ್ತಿದ್ದೇನೆ ಎಂದು ಸುಶೀಲ್ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ