ಜಿಂಬಾಬ್ವೆಗೆ ಇಂದು ಸರಣಿ ಸವಾಲು
ಹರಾರೆ: ಮೊದಲ ಏಕದಿನ ಪಂದ್ಯದಲ್ಲಿ ಅದೃಷ್ಟದ ಗೆಲುವು ಪಡೆದಿರುವ ಭಾರತ ತಂಡ, ಭಾನುವಾರ ಹರಾರೆಯಲ್ಲಿ ನಡೆಯಲಿರುವ ಜಿಂಬಾಂಬ್ವೆ ವಿರುದ್ಧದ 2 ನೇ ಏಕದಿನ ಪಂದ್ಯವನ್ನು ಜಯಿಸುವ ಮೂಲಕ ಸರಣಿಯನ್ನು 2 -0 ಅಂತರದಿಂದ ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಸಜ್ಜಾಗಿದೆ.
ಮೂರು ಪಂದ್ಯಗಳ ಈ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಇನ್ನೇನು ಸೋತೇಬಿಟ್ಟಿತು ಎಂಬ ಪರಿಸ್ಥಿತಿ ಉಂಟಾಗಿತ್ತು ಆದರೂ ಭುವನೇಶ್ವರ್ ಕುಮಾರ್ ನಡೆಸಿದ ಕರಾರುವಾಕ್ ದಾಳಿಯಿಂದಾಗಿ ಭಾರತ ಕೇವಲ 4 ರನ್ ಅಂತರದಲ್ಲಿ ಗೆಲುವು ಸಾಧಿಸಿತ್ತು.
ಮೊದಲ ಪಂದ್ಯದಲ್ಲಿ ನೆಲಕಚ್ಚಿರುವ ತಮ್ಮ ತಂಡದ ಮಧ್ಯಮ ಕ್ರಮಾಂಕ ಮತ್ತೆ ಎದ್ದು ನಿಲ್ಲುವಂತೆ ಮಾಡಲೇಬೇಕಾದ ಅವಶ್ಯಕತೆ ಎದ್ದು ಕಾಣುತ್ತಿದೆ. ಗುರುವಾರ ನಡೆದ ಪಂದ್ಯದಲ್ಲಿ ಅಂಬಟಿ ರಾಯುಡು ಹಾಗೂ ಸ್ಟುವರ್ಟ್ ಬಿನ್ನಿ ಸಿಡಿಯದೆ ಹೋಗಿದ್ದರೆ ಭಾರತ ಶೋಚನೀಯ ಸೋಲಿಗೆ ಪಕ್ಕಾಗುವುದು ಖಾತ್ರಿಯಾಗಿತ್ತು.
ಮುರುಳಿ ವಿಜಯ್, ಮನೋಜ್ ತಿವಾರಿ ಹಾಗೂ ಖುದ್ದು ನಾಯಕ ಅಜಿಂಕ್ಯ ರಹಾನೆ ಸಹ ಬ್ಯಾಟಿಂಗ್ ನಲ್ಲಿ ವೈಫಲ್ಯ ಅನುಭವಿಸಿರುವುದು ಆತಂಕದ ವಿಚಾರ. ಇನ್ನು ಬೌಲಿಂಗ್ ವಿಭಾಗದಲ್ಲಿ ಸ್ಟುವರ್ಟ್ ಬಿನ್ನಿ ಹಾಗೂ ಅಕ್ಷರ್ ಪಟೇಲ್ ತಮ್ಮ ಸ್ಪಿನ್ ಮೋಡಿಯಿಂದ ತಲಾ 2 ವಿಕೆಟ್ ಕಬಳಿಸಿದರು. ಆದರೆ ತಂಡದಲ್ಲಿನ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರಿನ್ನೂ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಬೇಕಿದೆ. ಮೊದಲ ಏಕದಿನ ಪಂದ್ಯದಲ್ಲಿ ಸೋತಿದ್ದನ್ನು ಹೊರತುಪಡಿಸಿದರೆ ಆತಿಥೇಯರ ವೀರಾವೇಶ ಅಚ್ಚರಿ ಮೂಡಿಸುತ್ತದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ