ಕೂಟ ದಾಖಲೆ ಬರೆದ ಇಂದರ್‍ಜೀತ್‍ಗೆ ಚಿನ್ನ

ಭವ್ಯ ದರ್ಶನ ಮುಂದುವರೆಸಿರುವ ಭಾರತದ ಶಾಟ್‍ಪುಟ್ ತಾರೆ ಹರ್ಯಾಣದ ಇಂದರ್‍ಜೀತ್ 5ನೇ ರಾಷ್ಟ್ರೀಯ ಅಂತರ ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ನಲ್ಲಿ ಚಿನ್ನದ....
ಇಂದರ್ ಜೀತ್ ಸಿಂಗ್
ಇಂದರ್ ಜೀತ್ ಸಿಂಗ್

ಚೆನ್ನೈ: ಭವ್ಯ ದರ್ಶನ ಮುಂದುವರೆಸಿರುವ ಭಾರತದ ಶಾಟ್‍ಪುಟ್ ತಾರೆ ಹರ್ಯಾಣದ  ಇಂದರ್‍ಜೀತ್ 5ನೇ ರಾಷ್ಟ್ರೀಯ ಅಂತರ ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ನಲ್ಲಿ ಚಿನ್ನದ ಪದಕ ಸಂಪಾದಿಸಿದ್ದಾರೆ. ನೆಹರು ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಸ್ಪರ್ಧೆಯಲ್ಲಿ ಇಂದರ್‍ಜೀತ್ 20.44 ಮೀ. ದೂರ ಗುಂಡು ಎಸೆಯುವ ಮೂಲಕ ನೂತನ ಕೂಟ ದಾಖಲೆ ನಿರ್ಮಿಸಿದ್ದಾರೆ. ಈ ಪದಕದೊಂದಿಗೆ ಇಂದರ್‍ಜೀತ್ ಕಳೆದ ಆರು ತಿಂಗಳ ಅವಧಿಯಲ್ಲಿ ವಿವಿಧ ಸ್ಪರ್ಧೆಗಳಿಂದ 8ನೇ ಚಿನ್ನದ ಪದಕ ಗಳಿಸಿದಂತಾಗಿದೆ.

 ಫೆಬ್ರವರಿಯಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮೊದಲ ಚಿನ್ನದ ಪದಕ ಪಡೆದ ಇಂದರ್‍ಜೀತ್, ಮೇ ತಿಂಗಳಲ್ಲಿ ಮಂಗಳೂರಿನಲ್ಲಿ ನಡೆದ ಫೆಡರೇಷ ನ್ ಕಪ್‍ನಲ್ಲಿ, ಚೀನಾದಲ್ಲಿ ನಡೆದ ಏಷ್ಯನ್ ಚಾಂಪಿಯನ್ ಶಿಪ್, ಬ್ಯಾಂಕಾಕ್‍ನಲ್ಲಿ ನಡೆದ ಮೂರು ಗ್ರ್ಯಾನ್ ಪ್ರೀ ಸೀರೀಸ್ ನಲ್ಲಿ ಹ್ಯಾಟ್ರಿಕ್ ಚಿನ್ನದ ಪದಕ ಜಯಿಸಿದ್ದರು.

ಅಂತೆಯೇ ಥಾಯ್ಲೆಂಡ್ ನಲ್ಲಿ ಕಳೆದ ತಿಂಗಳು ನಡೆದ ಸ್ಪರ್ಧೆಯಲ್ಲಿ ಸ್ವರ್ಣ ಸಂಪಾದಿಸಿದ್ದರು. ನಂತರ ವಿಶ್ವ ವಿದ್ಯಾಲಯ ಕ್ರೀಡಾಕೂಟದಲ್ಲಿ ಪದಕ ಗೆದ್ದಿದ್ದರು. ಇದರೊಂದಿಗೆ ಈ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಕೂಟದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎಂಬ ಖ್ಯಾತಿ ಗಳಿಸಿದರು. ಈ ಎಲ್ಲ ಸಾಧನೆಯೊಂದಿಗೆ ಮುಂದಿನ ತಿಂಗಳು ಚೀನಾದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‍ಶಿಪ್‍ಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಪೂವಮ್ಮಗೆ ನಿರಾಸೆ
ಕರ್ನಾಟಕದ ಹೆಸರಾಂತ ಓಟಗಾರ್ತಿ ಎಂ.ಆರ್. ಪೂವಮ್ಮ ತಮ್ಮ ಲಯ ಮುಂದುವರಿಸಿದ್ದು, ಸತತ ಐದನೇ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಮಹಿಳೆಯರ 400 ಮೀ. ಓಟದಲ್ಲಿ 52.78 ಸೆ.ಗಳಲ್ಲಿ ಗುರಿ ಮುಟ್ಟಿದ ಪೂವಮ್ಮ ಸ್ವರ್ಣಕ್ಕೆ ಕೊರಳೊಡ್ಡಿದರು. ಅಲ್ಲದೆ ಪೂವಮ್ಮ ಅವರನ್ನು ಕ್ರೀಡಾಕೂಟದ ಅತ್ಯುತ್ತಮ ಮಹಿಳಾ ಅಥ್ಲೀಟ್ ಎಂದು ಘೋಷಿಸಲಾಯಿತು.

ಇನ್ನು ತಮಿಳುನಾಡಿನ ರಾಜೀವ್ ಆರೋಕ್ಯ ಪುರುಷರ 400 ಮೀ. ಓಟದಲ್ಲಿ 45.72 ಸೆ.ಗಳಲ್ಲಿ ಗುರಿ ಸೇರಿ ಬಂಗಾರದ ಪದಕ ಪಡೆದರು. ಆದರೆ ರಾಜೀವ್ ಮತ್ತು ಪೂವಮ್ಮ ವಿಶ್ವ ಚಾಂಪಿಯನ್‍ಶಿಪ್‍ಗೆ ಅರ್ಹತೆ ಪಡೆಯುವ ಕಾಲಾವಕಾಶ ಮುಟ್ಟುವಲ್ಲಿ ವಿಫಲರಾದದ್ದು ಅವರಲ್ಲಿ ತೀವ್ರ ನಿರಾಸೆ ಮೂಡಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com