10 ತಂಡಗಳ ವಿಶ್ವಕಪ್‍ಗೆ ಎಂಸಿಸಿ ಆಕ್ಷೇಪ: 4 ದಿನದ ಟೆಸ್ಟ್ ಗೆಮೂಡದ ಒಮ್ಮತ

ಸಾಂಪ್ರದಾಯಿಕ ಕ್ರಿಕೆಟ್ ಪ್ರಕಾರವೆನಿಸಿರುವ ಐದು ದಿನಗಳ ಟೆಸ್ಟ್ ಪಂದ್ಯವನ್ನು ನಾಲ್ಕು ದಿನಗಳಿಗೆ ಸೀಮಿತಗೊಳಿಸಬೇಕೆಂಬ...
ಎಂಸಿಸಿ ವಿಶ್ವಕಪ್ ಕ್ರಿಕೆಟ್ ಸಮಿತಿ
ಎಂಸಿಸಿ ವಿಶ್ವಕಪ್ ಕ್ರಿಕೆಟ್ ಸಮಿತಿ

ಲಂಡನ್: ಸಾಂಪ್ರದಾಯಿಕ ಕ್ರಿಕೆಟ್ ಪ್ರಕಾರವೆನಿಸಿರುವ ಐದು ದಿನಗಳ ಟೆಸ್ಟ್ ಪಂದ್ಯವನ್ನು ನಾಲ್ಕು ದಿನಗಳಿಗೆ ಸೀಮಿತಗೊಳಿಸಬೇಕೆಂಬ ಕೂಗಿಗೆ ಒಮ್ಮತ ಮೂಡದಾಗಿದೆ. ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಆಸೀಸ್‍ನ ರಿಕಿ ಪಾಂಟಿಂಗ್, ದಕ್ಷಿಣ ಆಫ್ರಿಕಾದ ಶಾನ್ ಪೊಲಾಕ್ ಅವರನ್ನೊಳಗೊಂಡ ಎಂಸಿಸಿ ವಿಶ್ವ ಕ್ರಿಕೆಟ್ ಸಮಿತಿ ಭಾನುವಾರ ಲಾರ್ಡ್ಸ್ನಲ್ಲಿ ಸಭೆ ಸೇರಿ ಪ್ರಮುಖ ಅಂಶಗಳ ಬಗ್ಗೆ ಚರ್ಚೆ ನಡೆಸಿತು.

ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಆಸೀಸ್ ನ ರಿಕಿ ಪಾಂಟಿಂಗ್, ದಕ್ಷಿಣ ಆಫ್ರಿಕಾದ ಶಾನ್ ಪೊಲಾಕ್ ಅವರನ್ನೊಳಗೊಂಡ ಎಂಸಿಸಿ ವಿಶ್ವ ಕ್ರಿಕೆಟ್ ಸಮಿತಿ ಭಾನುವಾರ ಲಾರ್ಡ್ಸ್ ನಲ್ಲಿ ಸಭೆಸೇರಿ ಪ್ರಮುಖ ಅಂಶಗಳ ಬಗ್ಗೆ ಚರ್ಚೆ ನಡೆಸಿತು.ಟೆಸ್ಟ್ ಪಂದ್ಯದಲ್ಲಿ ಐದು ದಿನಗಳ ಬದಲಿಗೆ ಕೇವಲ ನಾಲ್ಕು ದಿನಗಳನ್ನು ಆಡಿಸಬೇಕು ಎಂಬುದರ ಬಗ್ಗೆ ಸರಿಯಾದ ಬೆಂಬಲ ವ್ಯಕ್ತವಾಗಲಿಲ್ಲ. ದೀರ್ಘ ಮಾದರಿಯ ಕ್ರಿಕೆಟ್ ಕ್ರಿಕೆಟ್ ಅಸ್ತಿತ್ವದಲ್ಲಿ ಉಳಿಯಬೇಕಿದೆ.  ಹಾಗಾಗಿ ಅದರಲ್ಲಿ ಹೆಚ್ಚು ಪ್ರಯೋಗಗಳಿಗೆ ಮುಂದಾಗುವ ಬದಲು  ಅದನ್ನು ಹಾಗೇ ಮುಂದುವರಿಸಿಬೇಕೆಂಬ ಮಾತುಗಳು ಕೇಳಿ ಬಂದಿವೆ.

ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಅಂಪೈರ್ ತೀರ್ಪು ಪರಿಶೀಲನೆಯನ್ನು ಕಡ್ಡಾಯವಾಗಿಸುವುದರ ಬಗ್ಗೆಯು ಗಂಭೀರ ಚರ್ಚೆ ನಡೆಯಿತು. ಆರಂಭದಿಂದಲೂ ಈ ವ್ಯವಸ್ಥೆಯನ್ನು ಈ ಸಮಿತಿ ಬೆಂಬಲಿಸುತ್ತಾ ಬಂದಿದೆಯಾದರೂ, ಐಸಿಸಿ ಮುಖ್ಯಸ್ಥ ಎನ್.ಶ್ರೀನಿವಾಸನ್ ಈ ತಂತ್ರಜ್ಞಾನ ಇನ್ನು ಅಬಭಿವೃದ್ಧಿ ಹೊಂದಬೇಕು. ಪೂರ್ಣ ಪ್ರಮಾಣದಲ್ಲಿ ಪಕ್ವವಾದ ನಂತರ ಅದನ್ನು ಬಳಸಬೇಕೆಂದು ಹೇಳಿರುವುದನ್ನು ಸಮಿತಿ ಒಪ್ಪಿಕೊಂಡಿದೆ. ಅಲ್ಲದೆ ಸಮಿತಿ ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ಅಳವಡಿಸುವಂತೆ ಶ್ರೀನಿವಾಸನ್ ಅವರಿಗೆ ಮನವಿ ಮಾಡಿದೆ.

ನಿಯಮದಲ್ಲಿ ಬದಲಾವಣೆ: ಐಸಿಸಿ ಯ 41.7ನೇ ನಿಯಮದಲ್ಲಿ ಎರಡು ದಲಾವಣೆ ಮಾಡಲಾಗಿದ್ದು, ಮೊದಲನೆಯದು ಬ್ಯಾಟ್ಸ್ ಮನ್ ಹೊಡೆಯುವ ಮುನ್ನ ಕ್ಷೇತ್ರ ರಕ್ಷಕ ತನ್ನ ಸ್ಥಾನವನ್ನು ಬದಲಿಸಬಹುದು. ಆದರೆ, ಬೌಲರ್ ಚೆಂಡು ಎಸೆಯುವ ಮುನ್ನ ಸ್ಥಾನ ಬದಲಿಸಲು ಅವಕಾಶವಿಲ್ಲ. ಎರಡನೆಯದು, ವಿಕೆಟ್‍ಕೀಪರ್ ಸಹ ಚೆಂಡು ಎಸೆದ ನಂತರ ಹಾಗೂ ಬ್ಯಾಟ್ಸ್‍ಮನ್ ಹೊಡೆಯುವ ಮುನ್ನ ತಮ್ಮ ಸ್ಥಾನ ಬದಲಿಸಲು ಅವಕಾಶ ನೀಡಲಾಗಿದೆ. ಈ ನಿಯಮ ಮುಂಬರುವ ಸೆಪ್ಟೆಂಬರ್ 1ರಿಂದ ಜಾರಿಯಾಗಲಿದೆ ಎಂದು ಸಮಿತಿ ತಿಳಿಸಿದೆ.

10 ತಂಡಗಳಿಗೆ ಅಸಮಧಾನ: ಮುಂದಿನ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುವ ತಂಡಗಳ ಸಂಖ್ಯೆಯನ್ನು ಕೇವಲ 10ಕ್ಕೆ ಇಳಿಸಬೇಕೆಂಬ ಐಸಿಸಿಯ ನಿರ್ಧಾರ ಕ್ರೀಡೆಯ ಬೆಳವಣಿಗೆಗೆ ಸರಿಯಾದ ನಿರ್ಧಾವವಲ್ಲ ಎಂದು ಎಂಸಿಸಿ ವಿಶ್ವ ಕ್ರಿಕೆಟ್ ಸಮಿತಿ ಅಭಿಪ್ರಾಯ ಪಟ್ಟಿದೆ. ವಿಶ್ವಕಪ್‍ನಲ್ಲಿ ಭಾಗವಹಿಸುವ ತಂಡಗಳ ಸಂಖ್ಯೆಯನ್ನು ಕಡಿಮೆಗೊಳಿಸುವುದು ಕ್ರೀಡೆಯ ಅಭಿವೃದ್ಘಿಗೆ  ಪೂರಕವಲ್ಲ. ಈ ನಿರ್ಧಾರದ ಬಗ್ಗೆ ಐಸಿಸಿ ಮತ್ತೆ ಪರಿಶೀಲನೆ ನಡೆಸಬೇಕು ಎಂದು ತಿಳಿಸಿದೆ. ಅಲ್ಲದೆ ವಿಶ್ವಕಪ್ ಟೂರ್ನಿಗೆ ನಡೆಯುವ ಅರ್ಹತಾ ಸುತ್ತಿನ ಟೂರ್ನಿಗಳಲ್ಲಿ ಸಹ ಸದಸ್ಯ ರಾಷ್ಟ್ರಗಳ 12 ತಂಡಗಳಿಗೆ ಅವಕಾಶ ನೀಡಬೇಕು ಎಂಬ ಶಿಫಾರಸ್ಸನ್ನೂ ಮುಂದಿಟ್ಟಿದೆ. ಇತ್ತ ಐಸಿಸಿ ತನ್ನ ನಿರ್ಧಾರವನ್ನು ವಿಮರ್ಶಿಸುವುದಾಗಿ ತಿಳಿಸಿದೆ ಎಂದು ಶಾನ್ ಪೊಲಕ್ ತಿಳಿಸಿದ್ದಾರೆ. ಒಲಿಂಪಿಕ್ಸ್ ಗೆ

ಟಿ-20 ಸೇರ್ಪಡೆ: ಎಂಸಿಸಿ ಸಭೆಯಿಂದ ನೀಡಲಾದ ಮತ್ತೊಂದು ಮಹತ್ವದ ಶಿಫಾರಸ್ಸೆದರೆ, ಟಿ20 ಮಾದರಿಯ ಕ್ರಿಕೆಟ್ ಅನ್ನು ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಸೇರಿಸಲು ಪ್ರಯತ್ನಿಸಬೇಕು ಎನ್ನುವುದಾಗಿದೆ. ವಿಶ್ವದಲ್ಲಿ ಕ್ರಿಕೆಟ್ ಕ್ರೀಡೆ ತನ್ನ ಛಾಪು ಕಳೆದುಕೊಳ್ಳುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸಮಿತಿ, ವಿಶ್ವದಲ್ಲಿರುವ ಎಲ್ಲ ಕ್ರಿಕೆಟ್ ಆಡಳಿತ ಮಂಡಳಿಗಳು ಕ್ರಿಕೆಟ್ ಅನ್ನು ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಸೇರಿಸಲು ಒಟ್ಟಾಗಿ ಪ್ರಯತ್ನಿಸಬೇಕು ಕ್ರಿಕೆಟ್ ಅನ್ನು ಹೊಸದಾಗಿ ಮಾರುಕಟ್ಟೆ ಮಾಡಿ ವಿಶ್ವದೆಲ್ಲೆಡೆ ಪರಿಚಯಿಸಬೇಕು ಎಂದು ತಿಳಿಸಿದೆ.

ಕ್ರಿಕೆಟ್ ಅನ್ನು ಒಲಿಂಪಿಕ್ಸ್ ಗೆ ಸೇರಿಸುವ ಯೋಚನೆಯನ್ನು ಈ ಹಿಂದೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ತಿರಸ್ಕರಿಸಿತ್ತು. ಆದರೆ ಈಗ ಅದು ಮುಕ್ತ ಚರ್ಚೆಗೆ ಸಿದ್ಧವಾಗಿದೆ ಎಂದು ಸಮಿತಿ ತಿಳಿಸಿದೆ.

ಏನಿದು ಎಂಸಿಸಿ ವಿಶ್ವ ಕ್ರಿಕೆಟ್ ಸಮಿತಿ?
ಈ ಸಮಿತಿ 2007ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಕ್ರಿಕೆಟ್‍ಗೆ ಸಂಬಂಧಿಸಿದ ವಿಚಾರಗಳನ್ನು ಚರ್ಚಿಸಿ ಸಲಹೆ ನೀಡುವ ಸ್ವತಂತ್ರ ಸಮಿತಿಯಾಗಿದೆ. ಈ ಸಮಿತಿಯಲ್ಲಿ ಮೀಜಿ ಹಾಗೂ ಹಾಲಿ ಕ್ರಿಕೆಟ್ ಆಟಗಾರರು, ಅಂಪೈರ್‍ಗಳು ಸೇರಿದಂತೆ ಐಸಿಸಿ ಮುಖ್ಯಸ್ಥ ಎನ್.ಶ್ರೀನಿವಾಸನ್, ಸಿಇಒ ಡೇವಿಡ್ ರಿಚರ್ಡ್ ಸನ್ ಜತೆಗೆ ಇಸಿಬಿ ಅಧ್ಯಕ್ಷ ಮತ್ತು ಸಿಇಒ ಲಿನ್ ಗ್ರೇವ್ಸ್ ಮತ್ತು ಟಾಮ್ ಹ್ಯಾರಿಸನ್ ಸಹ ಇದ್ದಾರೆ. ಈ ಸಮಿತಿ ವರ್ಷಕ್ಕೆ ಎರಡು ಬಾರಿ ಸಭೆ ಸೇರಿ ಪ್ರಸಕ್ತ ಕ್ರಿಕೆಟ್‍ಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸುತ್ತಿದೆ. ಭಾನುವಾರ ನಡೆದ ಸಭೆ ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಹಾಗೂ ಮಾಜಿ ಅಂಪೈರ್ ಸ್ಟೀವ್ ಬಕ್ನರ್ ಅವರ ಪಾಲಿಗೆ ಕೊನೆ ಸಭೆಯಾಗಿದ್ದು, ಸಮಿತಿಯಲ್ಲಿನ ಅವರ ಕಾಲಾವಕಾಶ ಮುಕ್ತಾಯಗೊಳ್ಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com