ಕೊಚ್ಚಿ ಮರುಸೇರ್ಪಡೆ ಅಸಾಧ್ಯ: ಶುಕ್ಲಾ

ಕೇರಳದ ಕೊಚ್ಚಿ ಟಸ್ಕರ್ಸ್ ಫ್ರಾಂಚೈಸಿಗೆ ಪುನಃ ಐಪಿಎಲ್ ನಲ್ಲಿ ಅವಕಾಶ ನೀಡುವುದಿಲ್ಲ ಎಂದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಧ್ಯಕ್ಷ ರಾಜೀವ್ ಶುಕ್ಲಾ...
ರಾಜೀವ್ ಶುಕ್ಲಾ(ಸಂಗ್ರಹ ಚಿತ್ರ)
ರಾಜೀವ್ ಶುಕ್ಲಾ(ಸಂಗ್ರಹ ಚಿತ್ರ)

ಕೋಲ್ಕತಾ: ಕೇರಳದ ಕೊಚ್ಚಿ ಟಸ್ಕರ್ಸ್ ಫ್ರಾಂಚೈಸಿಗೆ ಪುನಃ ಐಪಿಎಲ್ ನಲ್ಲಿ ಅವಕಾಶ ನೀಡುವುದಿಲ್ಲ ಎಂದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಧ್ಯಕ್ಷ ರಾಜೀವ್ ಶುಕ್ಲಾ ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲದೆ, ಹಿಂದಿನ ಎಲ್ಲಾ ಐಪಿಎಲ್ ಆವೃತ್ತಿಗಳಿಗಿಂತ ವಿಶೇಷವಾಗಿರುತ್ತದೆ ಎಂದು ಹೇಳಿದ್ದಾರೆ.

ಮುಂದಿನ ಎರಡು ಐಪಿಎಲ್ ಟೂರ್ನಿಗಳ ಮಟ್ಟಿಗೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ನಿಷೇಧಕ್ಕೊಳಗಾದ ಹಿನ್ನೆಲೆಯಲ್ಲಿ, ಕೊಚ್ಚಿ ಟಸ್ಕರ್ಸ್ ತಂಡಕ್ಕೆ ಪುನಃ ಅವಕಾಶ ನೀಡುವ ಸಾಧ್ಯತೆಗಳಿತ್ತು ಎಂಬ ಊಹಾಪೋಹಗಳಿಗೆ ಶುಕ್ಲಾ ಸಂಪೂರ್ಣವಾಗಿ ತೆರೆ ಎಳೆದಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಐಪಿಎಲ್‍ನ ಆಡಳಿತ ಮಂಡಳಿಯ ಸಭೆ ಭಾನುವಾರ ನಡೆಯಲಿದೆ. ಅದರಲ್ಲಿ ಮುಂದಿನ ಐಪಿಎಲ್ ಟೂರ್ನಿಯ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿದೆ. ಈ ಸಂದರ್ಭದಲ್ಲಿ, ಹೊಸ ಸಮಿತಿಯೊಂದನ್ನು ರಚಿಸಲಿದ್ದು, ಈ ಸಮಿತಿಯು ಐಪಿಎಲ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ನ್ಯಾ. ಆರ್.ಎಂ. ಲೋಧಾ ಸಮಿತಿ ನೀಡಿದ್ದ ತೀರ್ಪಿನ ಪ್ರತಿಯನ್ನು ಪರಿಶೀಲಿಸಿ, ಮುಂದೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಲೋಧಾ ಅವರ ತೀರ್ಪನ್ನು ಅನುಷ್ಠಾನಗೊಳಿಸುವ ಮಾರ್ಗಗಳ ಬಗ್ಗೆ ಸಲಹೆ ನೀಡಲಿದೆ' ಎಂದು ತಿಳಿಸಿದರು. ಅಲ್ಲದೆ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಎಷ್ಟು ತಂಡಗಳು ಆಡಲಿವೆ ಹಾಗೂ ಅದರ ರೂಪುರೇಷೆಗಳೇನು ಎಂಬುದರ ಬಗ್ಗೆಯೂ ಹೊಸ ಸಮಿತಿಯು ಸಲಹೆ ನೀಡಲಿದೆ ಎಂದು ಶುಕ್ಲಾ ತಿಳಿಸಿದ್ದಾರೆ.

2010ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಕೊಚ್ಚಿ ಟಸ್ಕರ್ಸ್, 2011ರ ಐಪಿಎಲ್ ಆವೃತ್ತಿಯಲ್ಲಿ ಆಡಿತ್ತು. ಆದರೆ, ಆನಂತರ, ಫ್ರಾಂಚೈಸಿಯ ಮಾಲೀಕತ್ವ ಹೊಂದಿರುವ ಕೊಚ್ಚಿ ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್ ಹಾಗೂ ಬಿಸಿಸಿಐ ನಡುವೆ ಹಣಕಾಸಿನ ವಿಚಾರವಾಗಿ ಎದ್ದ ವ್ಯಾಜ್ಯಗಳಿಂದಾಗಿ ಕೊಚ್ಚಿ ಫ್ರಾಂಚೈಸಿಯೊಂದಿಗಿನ ಒಪ್ಪಂದವನ್ನು ಬಿಸಿಸಿಐ ಕೊನೆಗಾಣಿಸಿತ್ತು. ಈ ಹಿನ್ನೆಲೆಯಲ್ಲಿ, ಕೊಚ್ಚಿ  ನ್ಯಾಯಾಲಯದ ಮೆಟ್ಟಿಲೇರಿತ್ತು. ಇತ್ತೀಚೆಗಷ್ಟೇ ನ್ಯಾಯಾಲಯ ಕೊಚ್ಚಿ ಫ್ರಾಂಚೈಸಿಗೆ ರು. 500 ಕೋಟಿ  ನೀಡುವಂತೆ ಬಿಸಿಸಿಐಗೆ ಸೂಚಿಸಿತ್ತು. ಆದರೆ ಕೊಚ್ಚಿ ಫ್ರಾಂಚೈಸಿ ಹಣಕ್ಕಿಂತಲೂ ಮತ್ತೆ ಐಪಿಎಲ್‍ನಲ್ಲಿ ಭಾಗವಹಿಸುವ ಅಪೇಕ್ಷೆ ವ್ಯಕ್ತಪಡಿಸಿತ್ತು.

ಫೇಸ್‍ಬುಕ್‍ನಲ್ಲಿ ಆಂದೋಲನ: ಐಪಿಎಲ್‍ನಲ್ಲಿ ಕೊಚ್ಚಿಗೆ ಅವಕಾಶವಿಲ್ಲ ಎಂದು ಐಪಿಎಲ್ ಆಯುಕ್ತ ರಾಜೀವ್ ಶುಕ್ಲಾ ಅವರು ಹೇಳುವುದಕ್ಕೂ ಮೊದಲೇ ಫೇಸ್ ಬುಕ್ ನಲ್ಲಿ ಕೊಚ್ಚಿ ಎಂಬ ಆಂದೋಲನ ಆರಂಭಿಸಿದ್ದಾರೆ. ಇದಕ್ಕಾಗಿ ಫೇಸ್‍ಬುಕ್ ನಲ್ಲಿ ಹೊಸ ಪುಟವನ್ನು ತೆರೆಯಲಾಗಿದ್ದು, ಇದರಲ್ಲಿ, 'ಐಪಿಎಲ್ ನಲ್ಲಿ ಕೊಚ್ಚಿ ತಂಡ ಪುನಃ ಕಣಕ್ಕೀಳಿಯುವುದನ್ನು ನಾವು ಬಯಸುತ್ತೇವೆ. ಆದ್ದರಿಂದ ನಮ್ಮನ್ನು ಬೆಂಬಲಿಸಿ. ದಯವಿಟ್ಟು ಈ ಪುಟವನ್ನು ಶೇರ್ ಮಾಡಿ'' ಎಂದು ಫೇಸ್ ಬುಕ್ ಪ್ರಿಯರಲ್ಲಿ ಕೊಚ್ಚಿ ಟಸ್ಕರ್ಸ್ ಅಭಿಮಾನಿಗಳು ಮನವಿ ಮಾಡಿದ್ದಾರೆಂದು ಡೆಕ್ಕನ್ ಕ್ರೋನಿಕಲ್ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com