ಪ್ರತಿಷ್ಠಿತ ದುಲೀಪ್ ಟ್ರೋಫಿಗೆ ಕೊಕ್!

ಅಚ್ಚರಿಯ ಬೆಳವಣಿಗೆಯೊಂದರಲ್ಲಿ 55 ವರ್ಷಗಳಿಂದ ಭಾರತೀಯ ಕ್ರಿಕೆಟ್‍ನ ಅವಿಭಾಜ್ಯ ಟೂರ್ನಿಯಾಗಿದ್ದ ದುಲೀಪ್ ಟ್ರೋಫಿ ಪಂದ್ಯಾವಳಿಗೆ ಪ್ರಸಕ್ತ ವರ್ಷದ ದೇಶೀಯ ಕ್ರಿಕೆಟ್ ವೇಳಾಪಟ್ಟಿಯಿಂದ ಕೊಕ್ ನೀಡಲಾಗಿದೆ ಎಂದು ಬ್ಯೂಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ...
ಕಳೆದ ವರ್ಷ ದುಲೀಪ್ ಟ್ರೋಫಿ ಗೆದ್ದಿದ್ದ ಕೇಂದ್ರ ವಲಯ ತಂಡ
ಕಳೆದ ವರ್ಷ ದುಲೀಪ್ ಟ್ರೋಫಿ ಗೆದ್ದಿದ್ದ ಕೇಂದ್ರ ವಲಯ ತಂಡ

ಮುಂಬೈ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ 55 ವರ್ಷಗಳಿಂದ ಭಾರತೀಯ ಕ್ರಿಕೆಟ್‍ನ ಅವಿಭಾಜ್ಯ ಟೂರ್ನಿಯಾಗಿದ್ದ ದುಲೀಪ್ ಟ್ರೋಫಿ ಪಂದ್ಯಾವಳಿಗೆ ಪ್ರಸಕ್ತ ವರ್ಷದ ದೇಶೀಯ ಕ್ರಿಕೆಟ್ ವೇಳಾಪಟ್ಟಿಯಿಂದ ಕೊಕ್ ನೀಡಲಾಗಿದೆ ಎಂದು ಬ್ಯೂಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ.

2015-16ರ ಕ್ರಿಕೆಟ್ ಋತುವಿನ ವೇಳಾಪಟ್ಟಿಯನ್ನು ಬಿಸಿಸಿಐ ಸೋಮವಾರ ಬಿಡುಗಡೆಗೊಳಿಸಿದ್ದು, ಅದರಲ್ಲಿ ದುಲೀಪ್ ಟ್ರೋಫಿ ಹೆಸರೇ ಇಲ್ಲ. ವೇಳಾಪಟ್ಟಿಯಂತೆ, ಅಕ್ಟೋಬರ್ 1ರಿಂದ ಮುಂದಿನ ವರ್ಷ ಮಾರ್ಚ್ ತಿಂಗಳೊಳಗೆ 900ಕ್ಕೂ ಹೆಚ್ಚು ಪಂದ್ಯಗಳು ನಡೆಯಲಿವೆ. ಇವುಗಳಲ್ಲಿ ಹಲವಾರು ಅಂತರಾಷ್ಟ್ರೀಯ ಟೂರ್ನಿಗಳಲ್ಲಿ ಪಾಲ್ಗೊಳ್ಳಬೇಕಿದೆ. ಈ ಅವಧಿ ಮುಕ್ತಾಯವಾಗುತ್ತಲೇ, ಭಾರತದಲ್ಲಿ ಟಿ20 ಕ್ರಿಕೆಟ್ ನಡೆಯಲಿದೆ. ಹೀಗೆ, ಬಿಡುವಿಲ್ಲದ ಕಾರ್ಯಕ್ರಮಗಳಿಂದಾಗಿಯೇ ದುಲೀಪ್ ಟ್ರೋಫಿಗೆ ಕೊಕ್ ನೀಡಲಾಗಿದೆ ಎನ್ನಲಾಗಿದೆ.

1961-62ರಿಂದ ನಡೆಸಲ್ಪಡುತ್ತಿದ್ದ, ದೇಶೀಯ ಮಟ್ಟದಲ್ಲಿ ತನ್ನದೇ ಆದ ಪರಂಪರೆಯನ್ನು ಹೊಂದಿರುವ ಈ ಟೂರ್ನಿಗೆ ಇದೇ ಮೊದಲ ಬಾರಿಗೆ ಸಂಚಕಾರ ಬಂದೊದಗಿರುವುದು ವಿಷಾದನೀಯ.

ಕ್ರಿಕೆಟಿಗರ ಆಶಾಕಿರಣವಾಗಿದ್ದ ಟೂರ್ನಿ :
ಮಾಜಿ ಕ್ರಿಕೆಟಿಗ ಎಸ್. ದುಲೀಪ್ ಸಿಂಗ್ ಜೀ ಅವರ ನೆನಪಿನಲ್ಲಿ ನಡೆಸಲಾಗುತ್ತಿದ್ದ ಈ ಟೂರ್ನಿಯಿಂದಾಗಿ ಹಲವಾರು ಕ್ರಿಕೆಟಿಗರು ಬೆಳಕಿಗೆ ಬಂದಿದ್ದರು. ಉದಾಹರಣೆಗೆ, ಮಾಜಿ ಕ್ರಿಕೆಟಿಗ ಅಜಿತ್ ವಾಡೇಕರ್ ಅವರು ಇದೇ ಟೂರ್ನಿಯಿಂದಲೇ ಗಮನ ಸೆಳೆದು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದರು. ದುಲಾಪ್ ಟ್ರೋಫಿ ಪಂದ್ಯಾವಳಿಯಲ್ಲಿ ಅವರು ನೀಡಿದ ಪ್ರದರ್ಶನ ಗಮನಿಸಿ, 1971ರಲ್ಲಿ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಭಾರತ ತಂಡಕ್ಕೆ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು. ಆ ಎರಡೂ ಸರಣಿಗಳನ್ನು ಭಾರತ ಗೆದ್ದಿತ್ತಲ್ಲದೆ, ಮೊದಲ ಬಾರಿಗೆ ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಗೆದ್ದ ಹಿರಿಮೆಯನ್ನೂ ಪಡೆದಿತ್ತು. ಕೆ.ಎಸ್.ದುಲೀಪ್ ಸಿಂಗ್ ಜೀ ಅವರ ಸೋದರ ಸಂಬಂಧಿ ಕೆ.ಎಸ್. ರಂಜಿತ್ ಸಿಂಗ್ ಜೀ ಅವರ ನೆನಪಿನಲ್ಲಿ ರಣಜಿ ಟ್ರೋಫಿ ಪಂದ್ಯಾವಳಿಯನ್ನು ನಡೆಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com