ಐಪಿಎಲ್ ಸ್ಪಾಟ್ ಫಿಕ್ಸಿಂಗ್: ಶ್ರೀಶಾಂತ್ ಸೇರಿ ಇತರರಿಗೆ ಕ್ಲೀನ್ ಚಿಟ್

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದಿಂದ ವೇಗದ ಬೌಲರ್ ಎಸ್,ಶ್ರೀಶಾಂತ್, ಅಜಿತ್ ಚಾಂಡೀಲಾ ಹಾಗೂ ಅಂಕಿತ್ ಚವ್ಹಾಣ್ ಅವರನ್ನು ದೋಷಮುಕ್ತಗೊಳಿಸಿ ದೆಹಲಿ...
ಶ್ರೀಶಾಂತ್, ಅಜಿತ್ ಚಾಂಡೀಲಾ, ಅಂಕಿತ್ ಚವ್ಹಾಣ್(ಸಂಗ್ರಹ ಚಿತ್ರ)
ಶ್ರೀಶಾಂತ್, ಅಜಿತ್ ಚಾಂಡೀಲಾ, ಅಂಕಿತ್ ಚವ್ಹಾಣ್(ಸಂಗ್ರಹ ಚಿತ್ರ)

ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದಿಂದ ವೇಗದ ಬೌಲರ್ ಎಸ್,ಶ್ರೀಶಾಂತ್, ಅಜಿತ್ ಚಾಂಡೀಲಾ ಹಾಗೂ ಅಂಕಿತ್ ಚವ್ಹಾಣ್ ಅವರನ್ನು ದೋಷಮುಕ್ತಗೊಳಿಸಿ ದೆಹಲಿ ನ್ಯಾಯಾಲಯ ಶನಿವಾರ ತೀರ್ಪು ನೀಡಿದೆ.

2013ರ ಐಪಿಎಲ್ 6ನೇ ಆವೃತ್ತಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣ ನಡೆದಿದ್ದು, ಶ್ರೀಶಾಂತ್, ಅಜಿತ್ ಚಾಂಡೀಲಾ ಹಾಗೂ ಅಂಕಿತ್ ಚವ್ಹಾಣ್ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದ್ದವು. ಎರಡು ವರ್ಷಗಳ ಕಾಲ ವಿಚಾರಣೆ ನಡೆಸಿದ ಬಳಿಕ ಇಂದು ಅವರ ವಿರುದ್ಧದ ಮೊಕದ್ದಮೆಯನ್ನು ವಜಾಗೊಳಿಸಿದ  ನ್ಯಾಯಾಲಯ ಇತರ 33 ಮಂದಿ ಆರೋಪಿಗಳಿಗೂ ಕ್ಲೀನ್ ಚಿಟ್ ನೀಡಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ನೀಲ ಬನ್ಸಾಲ್ ಕೃಷ್ಣ, ತೀರ್ಪು ಪ್ರಕಟಿಸಿದರು.
ಆರೋಪಿಗಳ ವಿರುದ್ಧ ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದ 6 ಸಾವಿರ ಪುಟಗಳ ಆರೋಪಪಟ್ಟಿಯಲ್ಲಿ ಬಲವಾದ ಸಾಕ್ಷ್ಯಾಧಾರಗಳು ಇಲ್ಲದ ಕಾರಣ ಕೇಸನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ. ಈ ಮೂಲಕ ದೆಹಲಿ ಪೊಲೀಸರಿಗೆ ಕಾನೂನಿನಲ್ಲಿ ಸೋಲುಂಟಾಗಿದೆ.

ಆಟಕ್ಕೆ ಮರಳುವೆ: ತೀರ್ಪು ಪ್ರಕಟಗೊಂಡ ಕೂಡಲೇ ಅತ್ಯಂತ ಭಾವುಕರಾಗಿ ಅತ್ತ ಎಸ್.ಶ್ರೀಶಾಂತ್, ಮಾಧ್ಯಮಗಳ ಮುಂದೆ ಮಾತನಾಡಿ, ನನ್ನ ಮಗಳು ತುಂಬಾ ಖುಷಿಪಡುತ್ತಾಳೆ. ನಾನು ಈಗ ನಿರಾಳನಾಗಿದ್ದೇನೆ. ನನ್ನ ಮುಗ್ಧತೆ ಸಾಬೀತಾಗಿದೆ. ಕ್ರಿಕೆಟ್ ಆಡಲು ತೀರಾ ಉತ್ಸುಕನಾಗಿದ್ದೇನೆ. ನಾಳೆಯಿಂದಲೇ ಕ್ರಿಕೆಟ್ ಆಟಕ್ಕೆ ಮರಳುವೆ. ಬಿಸಿಸಿಐ ತಮಗೆ ಸಂಪೂರ್ಣ ಸಹಕಾರ ನೀಡಿದೆ ಎಂದು ಹೇಳಿದರು.

ಮಾಧ್ಯಮದೊಂದಿಗೆ ಮಾತನಾಡಿದ ಶ್ರೀಶಾಂತ್ ತಾಯಿ ಸಾವಿತ್ರಿ ದೇವಿ, ದೇವರಿಗೆ ಕೃತಜ್ಞತೆ ಅರ್ಪಿಸುತ್ತೇನೆ.ಎರಡು ವರ್ಷಗಳಲ್ಲಿ ಶ್ರೀಶಾಂತ್ ಅನುಭವಿಸಿದ ನೋವು ಹೇಳಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ಬಹಳ ಸಂತೋಷವಾಗಿದೆ: ನಾನು ಈ ದಿನಕ್ಕಾಗಿ ಎರಡು ವರ್ಷಗಳಿಂದ ಕಾಯುತ್ತಿದ್ದೆ. ಇಂದು ಬಹಳ ಸಂತೋಷವಾಗಿದೆ. ಇದೇ ಖುಷಿಯಲ್ಲಿ ಮನೆಗೆ ಹೋಗುವೆ ಎಂದು ಅಂಕಿತ್ ಚವ್ಹಾಣ್ ಹೇಳಿದರು.

ತೀರ್ಪು ಬಗ್ಗೆ ಪ್ರತಿಕ್ರಿಯಿಸಿದ ದೆಹಲಿ ಪೊಲೀಸ್ ಉಪ ಆಯುಕ್ತ  ಮನಿಶಿ ಚಂದ್ರ, ತೀರ್ಪಿನ ಪ್ರತಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಹೈಕೋರ್ಟ್ ಗೆ ಮೊರೆ ಹೋಗುವ ಕುರಿತು ನಿರ್ಧರಿಸಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com