ನಿಷೇಧ ಹಿಂಪಡೆಯಲು ಮನವಿ

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಆರೋಪದಿಂದ ಮುಕ್ತವಾಗಿರುವ ಕ್ರಿಕೆಟಿಗ ಶ್ರೀಶಾಂತ್ ಅವರ ಮೇಲೆ ಈ ಹಿಂದೆ ಹೇರಲಾಗಿರುವ ನಿಷೇಧವನ್ನು ತೆರವುಗೊಳಿಸುವಂತೆ
ಶ್ರೀಶಾಂತ್
ಶ್ರೀಶಾಂತ್

ಕೊಚ್ಚಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಆರೋಪದಿಂದ ಮುಕ್ತವಾಗಿರುವ ಕ್ರಿಕೆಟಿಗ ಶ್ರೀಶಾಂತ್ ಅವರ ಮೇಲೆ ಈ ಹಿಂದೆ ಹೇರಲಾಗಿರುವ ನಿಷೇಧವನ್ನು ತೆರವುಗೊಳಿಸುವಂತೆ ಕೇರಳ ಕ್ರಿಕೆಟ್ ಸಂಸ್ಥೆ (ಕೆಸಿಎ) ಬಿಸಿಸಿಐಗೆ ಮನವಿ ಸಲ್ಲಿಸಲಿದೆ ಎಂದು ಪಿಟಿಐ ವರದಿ ಮಾಡಿದೆ

ಶನಿವಾರ, 2013ರ ಐಪಿಎಲ್ ಫಿಕ್ಸಿಂಗ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ದೆಹಲಿ ನ್ಯಾಯಾಲಯ ಸಾಕ್ಷ್ಯಾಧಾರಗಳಿಂದ ಕೊರತೆಯಿಂದಾಗಿ ಎಲ್ಲಾ 36 ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಹಾಗಾಗಿ, ಆರೋಪಿಗಳಾಗಿದ್ದ ಕ್ರಿಕೆಟಿಗರಾದ ಶ್ರೀಶಾಂತ್, ಅಜಿಂತ್ ಚಾಂಡೀಲ, ಅಂಕಿತ್ ಚವ್ಹಾಣ್ ಅವರು ದೋಷಮುಕ್ತರಾಗಿದ್ದರು.

 ವಿರಸಕ್ಕೆ ನಾಂದಿ?: ದೆಹಲಿ ನ್ಯಾಯಾಲಯದ ತೀರ್ಪು ಹೊರಬಿದ್ದ ಬೆನ್ನಲ್ಲೇ ಸ್ಪಷ್ಟನೆ ನೀಡಿದ್ದ ಬಿಸಿಸಿಐ, ನ್ಯಾಯಾಲಯವು ಶ್ರೀಶಾಂತ್, ಚಾಂಡೀಲ ಹಾಗೂ ಅಂಕಿತ್ ಅವರನ್ನು ದೋಷಮುಕ್ತ ಮಾಡಿದ್ದರೂ ಅವರ ವಿರುದ್ಧ ಹೇರಲಾಗಿರುವ ನಿಷೇಧದ ಶಿಕ್ಷೆ ಮುಂದುವರಿಯಲಿದೆ ಎಂದಿದೆ. ಆದರೂ, ಕೇರಳ ಕ್ರಿಕೆಟ್ ಸಂಸ್ಥೆಯು ಮನವಿ ಸಲ್ಲಿಸುವ ಮಾತುಗಳನ್ನಾಡಿರುವುದು ಮುಂದೆ ಬಿಸಿಸಿಐ, ಕೆಸಿಎ ನಡುವೆ ಕೆಲವು ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಬಹುದಾಗಿದೆ. ಅಲ್ಲದೆ, ಹಾಗೊಂದು ವೇಳೆ ಬಿಸಿಸಿಐ, ಕೆಸಿಎ ಮನವಿಯನ್ನು ಪುರಸ್ಕರಿಸದಿದ್ದರೆ ಶ್ರೀಶಾಂತ್, ಚವ್ಹಾಣ್ ಹಾಗೂ ಚಾಂಡೀಲ ಅವರು ತಮ್ಮ ಮೇಲಿನ ನಿಷೇಧ ತೆರವುಗೊಳಿಸುವಂತೆ ನ್ಯಾಯಾಲಯದ ಮೊರೆ ಹೋಗಬಹುದು.

ಎಲ್ಲೆಡೆ ವ್ಯಾಪಕ ಚರ್ಚೆ:
ಸದ್ಯದ ಮಟ್ಟಿಗಂತೂ ಕೇರಳ ಕ್ರಿಕೆಟ್ ಸಂಸ್ಥೆಯಲ್ಲಿ ತಲ್ಲಣ ಉಂಟು ಮಾಡಿದೆ. ಶ್ರೀಶಾಂತ್ ಅವರನ್ನು ಪುನಃ ವೃತ್ತಿಪರ ಕ್ರಿಕೆಟ್‍ಗೆ ಮರಳಿಸುವುದರ ಬಗ್ಗೆ ಚರ್ಚೆಗಳು ಆರಂಭಗೊಂಡಿವೆ. ಖುದ್ದು ಬಿಸಿಸಿಐ ಉಪಾಧ್ಯಕ್ಷರೂ ಆಗಿರುವ ಕೆಸಿಎ ಅಧ್ಯಕ್ಷರಾಗಿರುವ ಟಿ.ಸಿ. ಮ್ಯಾಥ್ಯೂ, ಬಿಸಿಸಿಐ ಅಧ್ಯಕ್ಷರಿಗೆ ಪತ್ರವೊಂದನ್ನು ಬರೆದು ಶ್ರೀಶಾಂತ್ ಮೇಲಿನ ನಿಷೇಧವನ್ನು ಹಿಂಪಡೆಯಲು ಮನವಿ ಮಾಡಲು ನಿರ್ಧರಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆನೀಡಿರುವ ಕೆಸಿಎ ಕಾರ್ಯದರ್ಶಿ ಟಿ.ಎನ್ ಅನಂತ್ ನಾರಾಯಣ್, ``ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಿಂದ ನ್ಯಾಯಾಲಯವೇ ಶ್ರೀಶಾಂತ್ ಅವರನ್ನು ದೋಷಮುಕ್ತರನ್ನಾಗಿಸಿರುವ ಹಿನ್ನೆಲೆಯಲ್ಲಿ, ಅವರ ಮೇಲಿನ ನಿಷೇಧದ ಶಿಕ್ಷೆಯನ್ನು ಹಿಂಪಡೆಯಬೇಕು ಎಂದು ಬಿಸಿಸಿಐ ಅನ್ನು ಪ್ರಾರ್ಥಿಸಲಾಗುವುದು'' ಎಂದು ಅವರು ತಿಳಿಸಿದರು. ಸದ್ಯಕ್ಕೆ ಬೆಂಗಳೂರಿನಲ್ಲಿರುವ ಮ್ಯಾಥ್ಯೂ ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿ, ``ಶ್ರೀಶಾಂತ್ ಮೇಲಿನ ನಿಷೇಧವನ್ನು ತೆರವುಗೊಳಿಸುವಂತೆ ಬಿಸಿಸಿಐಯನ್ನು ಕೇರಳ ಕ್ರಿಕೆಟ್ ಸಂಸ್ಥೆ ಒಕ್ಕೊರಲಿನ ಆಗ್ರಹ ಸಲ್ಲಿಸಲಿದೆ.

ಶೀಘ್ರದಲ್ಲೇ ಕೆಸಿಎಯಿಂದ ಬಿಸಿಸಿಐಗೆ ಈ ಬಗ್ಗೆ ಮನವಿ ಪತ್ರ ಸಲ್ಲಿಸಲಾಗುತ್ತದೆ. ಇದರ ಜೊತೆಯಲ್ಲೇ, ನಾನೂ ಬಿಸಿಸಿಐ   ಅಧ್ಯಕ್ಷರಿಗೆ ಮನವಿ ಸಲ್ಲಿಸುತ್ತೇನೆ.  ಇದರ ಜೊತೆಯಲ್ಲೇ ಕೆಸಿಎನ ನಿಯೋಗವೊಂದು ಬಿಸಿಸಿಐನ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸುತ್ತದೆ'' ಎಂದು ಹೇಳಿದರು.

ತವರಲ್ಲಿ ಶ್ರೀಶಾಂತ್‍ಗೆ ಹೃದಯಸ್ಪರ್ಶಿ ಸ್ವಾಗತ
ದೆಹಲಿಯಲ್ಲಿ ಶನಿವಾರ ನ್ಯಾಯಾಲಯ ಕಲಾಪದಲ್ಲಿ ಹಾಜರಾಗಿದ್ದ ಕ್ರಿಕೆಟಿಗ ಶ್ರೀಶಾಂತ್, ಭಾನುವಾರ ಕೊಚ್ಚಿಯಲ್ಲಿನ ತಮ್ಮ ನಿವಾಸಕ್ಕೆ ಆಗಮಿಸಿದರು. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ ಬಂದಿಳಿದಾಗಲೂ ಅವರ ಅಭಿಮಾನಿಗಳು, ಸ್ನೇಹಿತರನ್ನು ಅವರಿಗೆ ಭರ್ಜರಿ ಸ್ವಾಗತ ನೀಡಿದರು. ಅವರ ನಿವಾಸದ ಬಳಿಯೂ ಅವರ ಅಭಿಮಾನಿಗಳು ಅವರನ್ನು ಆದರದಿಂದ ಬರಮಾಡಿಕೊಂಡರು. ಹರ್ಷಚಿತ್ತರಾಗಿದ್ದ ಅವರ ಕುಟುಂಬ  ಸದಸ್ಯರು ಅವರಿಗೆ ಭಾವುಕವಾದ ಸ್ವಾಗತಕೋರಿದರು. ಇದೇ ವೇಳೆ, ಜನರಿಗೆ ತಮ್ಮ ಅಭಿಮಾನ ಅರ್ಪಿಸಿದ ಶ್ರೀಶಾಂತ್, ಸಂಕಷ್ಟದ ಸಮಯದಲ್ಲಿ ತಮ್ಮನ್ನು ಬೆಂಬಲಿಸಿದ ಎಲ್ಲರಿಗೂ, ಅದರಲ್ಲೂ ವಿಶೇಷವಾಗಿ ಕೇರಳದ ಜನತೆಗೆ ತಾವು ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಇದೇ ವೇಳೆ, ಮಾಧ್ಯಮಗಳ ಬಳಿ ತಮ್ಮ ಅನಿಸಿಕೆ ಹಂಚಿಕೊಂಡ ಅವರು, ``ಪ್ರಕರಣದಲ್ಲಿ ನನ್ನನ್ನು ಭೂಗತ ಪಾತಕಿಗಳಾದ ದಾವೂದ್ ಇಬ್ರಾಹೀಂ ಜೊತೆಗೆ ಸಂಪರ್ಕ ಇಟ್ಟುಕೊಂಡಿರುವುದಾಗಿ ಆರೋಪಿಸಲಾಗಿತ್ತು. ಅದು ನಿಜವಾಗಿದ್ದರೆ ನಾನು ಇಲ್ಲಿರುತ್ತಿರಲಿಲ್ಲ. ಅಂಥ ವ್ಯಕ್ತಿಗಳ ಸಂಪರ್ಕ ಇದ್ದಿದ್ದರೆ ನಾನು ಓರ್ವ ಕ್ರಿಕೆಟಿಗನಾಗಿಯೂ ಇರುತ್ತಿರಲಿಲ್ಲ'' ಎಂದರಲ್ಲದೆ, ``ನಾನು ಈವರೆಗೆ ಗಳಿಸಿರುವ ಹಣ ಕಷ್ಟಪಟ್ಟು ಗಳಿಸಿರುವುದು. ಯಾವುದೇ ಅಕ್ರಮಗಳಿಂದ ನಾನು ಆ ಹಣವನ್ನು ಗಳಿಸಿಲ್ಲ. ಕ್ರಿಕೆಟ್‍ಗೆ ನಾನು ಬದ್ಧನಾಗಿದ್ದೇನೆ. ನ್ಯಾಯಾಲಯ ನೀಡಿರುವ ತೀರ್ಪಿನಿಂದ ನನಗೆ ತೃಪ್ತಿಯಾಗಿದೆ'' ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com