ಸಿದ್ಧವಾಯ್ತು ವಿಶ್ವಕಪ್ ಪುಟ್ಬಾಲ್ ಅರ್ಹತಾ ಸುತ್ತಿನ ಪಂದ್ಯಾವಳಿ ಡ್ರಾ

2018 ವಿಶ್ವಕಪ್‍ಗಾಗಿ ಮುಂದಿನ ವರ್ಷ ನಡೆಯಲಿರುವ ಅರ್ಹತಾ ಸುತ್ತಿನ ಪಂದ್ಯಗಳ ವೇಳಾಪಟ್ಟಿಯನ್ನು ಭಾನುವಾರ ಪ್ರಕಟಿಸಲಾಗಿದೆ..
ವರ್ಲ್ಡ್ ಕಪ್ ಫುಟ್ಬಾಲ್
ವರ್ಲ್ಡ್ ಕಪ್ ಫುಟ್ಬಾಲ್

ಸೇಂಟ್ ಪೀಟರ್ಸ್‍ಬರ್ಗ್: 2018 ವಿಶ್ವಕಪ್‍ಗಾಗಿ ಮುಂದಿನ ವರ್ಷ ನಡೆಯಲಿರುವ ಅರ್ಹತಾ ಸುತ್ತಿನ ಪಂದ್ಯಗಳ ವೇಳಾಪಟ್ಟಿಯನ್ನು ಭಾನುವಾರ ಪ್ರಕಟಿಸಲಾಗಿದೆ. ರಷ್ಯಾದಲ್ಲಿ ನಡೆಯಲಿರುವ ಅರ್ಹತಾ ಸುತ್ತಿನ ಪಂದ್ಯಾವಳಿ ನಡೆಯಲಿದ್ದು, ಇಂಗ್ಲೆಂಡ್ ತಂಡ ತನ್ನ ಮೊದಲ ಪಂದ್ಯದಲ್ಲಿ ತನ್ನ ಸಾಂಪ್ರದಾಯಿಕ ಎದುರಾಳಿ ಎಂದೇ ಪರಿಗಣಿಸಲ್ಪಟ್ಟಿರುವ ಸ್ಕಾಟ್ಲೆಂಡ್ ವಿರುದ್ಧ ಸೆಣಸಲಿದೆ. 2006ರಲ್ಲಿ ವಿಶ್ವ ಚಾಂಪಿಯನ್ ಆಗಿದ್ದ ಇಟಲಿಗೆ, ಮೊದಲ ಪಂದ್ಯದಲ್ಲಿ 2010ರ ಚಾಂಪಿಯನ್ ಸ್ಪೇನ್ ಎದುರಾಳಿಯಾಗಲಿದೆ. ಹಾಲಿ ಚಾಂಪಿಯನ್ ಜರ್ಮನಿಗೆ ಮಾತ್ರ ಸುಲಭವಾದ ಡ್ರಾ ಸಿಕ್ಕಿದ್ದು, ಅದು ಸಿ ಗುಂಪಿನಲ್ಲಿ ಸ್ಥಾನ ಪಡೆದಿದೆ ಎಂದು ಬಿಬಿಸಿ ತಿಳಿಸಿದೆ.

ಇಲ್ಲಿನ ಐತಿಹಾಸಿಕ ಕಾನ್ಸ್‍ಟಾನಿನ್ ಅರಮನೆಯಲ್ಲಿ ನಡೆದ ಫಿಫಾ ಹಾಗೂ ರಷ್ಯಾ ಪುಟ್ಬಾಲ್ ಸಂಸ್ಥೆಯ ಅಧಿಕಾರಿಗಳ ಸಮ್ಮೇಳನದಲ್ಲಿ ಪಂದ್ಯಾವಳಿಯ ಡ್ರಾ ನಡೆಸಲಾಯಿತು. ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆಯ (ಫಿಫಾ) ಹಂಗಾಮಿ ಅಧ್ಯಕ್ಷರಾಗಿರುವ ಸೆಪ್ ಬ್ಲಾಟರ್ ಹಾಗೂ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಈ ವೇಳೆ ಉಪಸ್ಥಿತರಿದ್ದರು. ಅರ್ಹತಾ ಸುತ್ತಿನ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ಎಲ್ಲಾ 114 ದೇಶಗಳ ಫುಟ್ಬಾಲ್ ತಂಡಗಳನ್ನು ವಿವಿಧ ಗುಂಪುಗಳನ್ನಾಗಿ ಡ್ರಾನಲ್ಲಿ ವಿಂಗಡಿಸಲಾಯಿತು. ಜಾಗತಿಕ ಫುಟ್ಬಾಲ್ ನಲ್ಲಿ ತಮ್ಮದೇ ಛಾಪು ಹೊಂದಿರುವ ಜರ್ಮನಿ, ಇಂಗ್ಲೆಂಡ್, ಬ್ರೆಜಿಲ್, ಸ್ಪೇನ್‍ಗಳಿಗೆ ಎದುರಾಳಿಗಳು ಯಾರು ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಡ್ರಾ ಪ್ರಕಾರ, ಜರ್ಮನಿ, ಉತ್ತರ ಐರ್ಲೆಂಡ್, ಜೆಕ್ ಗಣರಾಜ್ಯ, ನಾರ್ವೆ, ಅಜರ್‍ಬೈಜಾನ್, ಸ್ಯಾನ್ ಮಾರಿನೊ ತಂಡಗಳು ಸಿ ಗುಂಪಿನಲ್ಲಿ ಸೇರ್ಪಡೆಗೊಂಡಿವೆ. ಇನ್ನು, ಡಿ ಗ್ರೂಪ್‍ನಲ್ಲಿ ವೇಲ್ಸ್, ಸರ್ಬಿಯಾ, ಆಸ್ಟ್ರಿಯಾ, ಐರ್ಲೆಂಡ್, ಮಾಲ್ಡೊವಾ, ಜಾರ್ಜಿಯಾ ತಂಡಗಳಿವೆ. ಎಫ್ ಗುಂಪಿನಲ್ಲಿ ಇಂಗ್ಲೆಂಡ್ ತಂಡವಿದ್ದು, ಅದರ ಜೊತೆಗೆ ಸ್ಲೊವೇಕಿಯಾ, ಸ್ಕಾಟ್ಲೆಂಡ್, ಸ್ಲೊವೇನಿಯಾ, ಲಿಥುಯೇನಿಯಾ, ಮಾಲ್ಟಾ ತಂಡಗಳಿವೆ.

ಬ್ಲಾಟರ್ ಬಗ್ಗೆ ಪುಟಿನ್ ಪ್ರಶಂಸೆ
ಡ್ರಾಗಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಫಿಫಾದ ಹಂಗಾಮಿ ಅಧ್ಯಕ್ಷ ಸೆಪ್ ಬ್ಲಾಟರ್ ಅವರನ್ನು ಪ್ರಶಂಸಿದರು. ಇತ್ತೀಚೆಗೆ, ಭ್ರಷ್ಟಾಚಾರ ಆರೋಪದ ಮೇರೆಗೆ ಹಲವಾರು ಪಿಫಾ ಅಧಿಕಾರಿಗಳು ಬಂಧನವಾಗಿದ್ದರು. ಇದರ ಬೆನ್ನಲ್ಲೇ ಪಿಫಾ ಅಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆಯಾಗಿದ್ದ ಬ್ಲಾಟರ್, ಆನಂತರ ತಮ್ಮ ವಿರುದ್ಧ ಎದ್ದ ಬಂಡಾಯದಿಂದಾಗಿ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದರು. ಇದೀಗ ಹಂಗಾಮಿ ಅಧ್ಯಕ್ಷರಾಗಿ ಮುನ್ನಡೆದಿದ್ದಾರೆ. ಈ ಎಲ್ಲವನ್ನೂ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಪುಟಿನ್, ಬ್ಲಾಟರ್ ಒಬ್ಬ ದಕ್ಷ ಆಡಳಿತಗಾರ ಎಂಬರ್ಥದಲ್ಲಿ ಕೊಂಡಾಡಿದರು. ಫಿಫಾದಲ್ಲಿ ಇತ್ತೀಚೆಗೆ ಉಂಟಾದ ಅಲ್ಲೋಲ ಕಲ್ಲೋದ ನಡುವೆಯೂ ಸಂಸ್ಥೆಯ ಅಧಿಕಾರ ಚುಕ್ಕಾಣಿಯನ್ನು ಪುನಃ ಕೈಯ್ಯಲ್ಲಿ ಹಿಡಿದು, ಅದನ್ನು ವ್ಯವಸ್ಥಿತವಾಗಿ ಮುನ್ನಡೆಸಿಕೊಂಡು ಬಂದಿದ್ದು ನಿಜಕ್ಕೂ ಶ್ಲಾಘನೀಯ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com