ಚೊಚ್ಚಲ ಪಂದ್ಯದಲ್ಲೇ ವೋಗ್ ಶತಕ ಆಸೀಸ್ ಬಿಗಿ ಹಿಡಿತ

ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಆ್ಯಡಂ ವೋಗ್ಸ್ ತಮ್ಮ ಚೊಚ್ಚಲ ಟೆಸ್ಟ್ ನಲ್ಲಿಯೇ ಶತಕ ಗಳಿಸಿದ್ದಾರೆ.
ಶತಕವೀರ ವೋಗ್ಸ್
ಶತಕವೀರ ವೋಗ್ಸ್

ಡೊಮೆನಿಕಾ: ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಆ್ಯಡಂ ವೋಗ್ಸ್ ತಮ್ಮ ಚೊಚ್ಚಲ ಟೆಸ್ಟ್ ನಲ್ಲಿಯೇ ಶತಕ ಗಳಿಸಿದ್ದಾರೆ.

ವೋಗ್ಸರ ಈ ಶತಕದ ಸಹಾಯದಿಂದ ಆಸ್ಟ್ರೇಲಿಯಾ ತಂಡ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಇನಿಂಗ್ಸ್‍ನಲ್ಲಿ 170 ರನ್‍ಗಳ ಮುನ್ನಡೆ ಸಾಧಿಸಿದೆ. ವಿಂಡ್ಸರ್ ಪಾರ್ಕ್‍ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗುರುವಾರ ಎರಡನೇ ದಿನದಾಟ ನಿಂತಾಗ ವೆಸ್ಟ್ ಇಂಡೀಸ್ ತನ್ನ ಎರಡನೇ ಇನಿಂಗ್ಸ್‍ನಲ್ಲಿ 2 ವಿಕೆಟ್ ನಷ್ಟಕ್ಕೆ 25 ರನ್‍ಗಳಿಸಿ ಸೋಲಿನ ಆತಂಕಕ್ಕೆ ಒಳಗಾಗಿತ್ತು.

ಇದಕ್ಕೆ ಮುನ್ನ ವೆಸ್ಟ್ ಇಂಡೀಸ್‍ನ 148 ರನ್ ಗಳ ಮೊದಲ ಇನಿಂಗ್ಸ್ ಮೊತ್ತಕ್ಕೆ ಉತ್ತರವಾಗಿ ಆಸ್ಟ್ರೇಲಿಯನ್ನರು ತಮ್ಮ ಮೊದಲ ಸರದಿಯಲ್ಲಿ 318 ರನ್‍ಗಳಿಸಿದರು. ಮೊದಲ ದಿನದಾಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 85 ರನ್‍ಗಳಿಸಿದ್ದ ತಂಡಕ್ಕೆ ಎರಡನೇ ದಿನದಾಟದಲ್ಲಿ ಆ್ಯಡಂ ವೋಗ್ಸ್ ಆಕರ್ಷಕ ಶತಕ ಗಳಿಸುವ ಮೂಲಕ ಉತ್ತಮ ಚೇತರಿಕೆ ನೀಡಿದರು. ಕೊನೆಯ ವಿಕೆಟ್ ಅಗಿ ಬಂದ ಜೋಶ್ ಹ್ಯಾಜಲ್‍ವುಡ್ ಸಹ ವೋಗ್ಸ್‍ಗೆ ಉತ್ತಮ ಬೆಂಬಲ ನೀಡಿದರು. ವೋಗ್ಸ್ ಮತ್ತು ಜೋಶ್, 10ನೇ ವಿಕೆಟ್ ಜೊತೆಯಾಟದಲ್ಲಿ 97 ರನ್ ಸೇರಿಸುವ ಮೂಲಕ ಆಸ್ಟ್ರೇಲಿಯಾ ತಂಡ ಉತ್ತಮ ಸ್ಥಿತಿ ತಲುಪಲು ಕಾರಣರಾದರು.

ಹಿರಿಯ ಶತಕವೀರ ವೋಗ್ಸ್
ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಆಗಮಿಸಿದ ವೋಗ್ಸ್ ಟೆಸ್ಟ್ ರಂಗ ಪ್ರವೇಶ  ಮಾಡಿದ ಮೊದಲ ಪಂದ್ಯದಲ್ಲಿಯೇ ಶತಕ ಸಿಡಿಸಿ ಅಚ್ಚರಿ ಮೂಡಿಸಿದರು. ಇಲ್ಲಿ ಮತ್ತೊಂದು ಮಹತ್ವದ ಸಂಗತಿಯೆಂದರೆ, ಅವರು ಟೆಸ್ಟ್ ಶತಕ ಬಾರಿಸಿದ ಹಿರಿಯ ವಯಸ್ಸಿನ ಆಟಗಾರ ಎಂಬ ದಾಖಲೆ ಬರೆದರು. ವೋಗ್ಸ್ 35 ವರ್ಷ 243 ದಿನ ಪೂರೈಸಿದ ಸಂದರ್ಭದಲ್ಲಿ ಈ ಸಾಧನೆ ಮಾಡಿದರು. 247 ಎಸೆತಗಳನ್ನು ಎದುರಿಸಿದ ಅವರು 13 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ 130 ರನ್‍ಗಳಿಸಿ ಅಜೇಯರಾಗುಳಿದರು.

ಬಿಶೂ ಜೀವನಶ್ರೇಷ್ಠ ಬೌಲಿಂಗ್
ವೆಸ್ಟ್ ಇಂಡೀಸ್‍ನ ಯುವ ಸ್ಪಿನ್ನರ್ ದೇವೇಂದ್ರ ಬಿಶೂ, 80 ರನ್ ನೀಡಿ 6 ವಿಕೆಟ್ ಪಡೆಯುವ ಮೂಲಕ ಜೀವನಶ್ರೇಷ್ಠ ಬೌಲಿಂಗ್ ಸಾಧನೆ ಮಾಡಿದರು.ಈ ಮುನ್ನ 90 ರನ್ ನೀಡಿ 5 ವಿಕೆಟ್ ಉರುಳಿಸಿದ್ದು, ಇನ್ನಿಂಗ್ಸ್ ವೊಂದರಲ್ಲಿನ ಅವರ ಶ್ರೇಷ್ಠ ಬೌಲಿಂಗ್ ಸಾಧನೆಯಾಗಿತ್ತು. ಇದರ ಹೊರತಾಗಿ, 13ನೇ ಟೆಸ್ಟ್ ನಲ್ಲಿ ವಿಕೆಟ್ ಗಳಿಕೆಯನ್ನು 50ಕ್ಕೆ ಹೆಚ್ಚಿಸಿಕೊಂಡರು. ಆ ಮೂಲಕ ಒಟ್ಟು 50 ವಿಕೆಟ್ ಗಳನ್ನು ಉರುಳಿಸಿದ ವಿಂಡೀಸ್ ನ ಕೇವಲ ಎರಡನೇ ಲೆಗ್ ಸ್ಪಿನ್ನರ್ ಎಂಬ ಹಿರಿಮೆಗೂ ಅವರು ಪಾತ್ರರಾದರು.

ಸಂಕ್ಷಿಪ್ತ ಸ್ಕೋರ್
ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ 148 ಮತ್ತು ಎರಡನೇ ಇನಿಂಗ್ಸ್ 2 ವಿಕೆಟ್‍ಗೆ 25. ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 318 (ಆ್ಯಡಂ ವೋಗ್ಸ್ ಅಜೇಯ 130, ಜೋಶ್ ಹ್ಯಾಜಲ್‍ವುಡ್ 39, ಸ್ಟೀವನ್ ಸ್ಮಿತ್ 25, ನಾಥನ್ ಲಿಯೊನ್ 22, ದೇವೇಂದ್ರ ಬಿಶೂ 80ಕ್ಕೆ6).

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com