
ಜಕಾರ್ತ: ವಿಶ್ವದ 3ನೇ ಶ್ರೇಯಾಂಕಿತೆ ಸೈನಾ ನೆಹ್ವಾಲ್ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚೀನಾದ ವಾಂಗ್ ಶಿಕ್ಸಿಯಾನ್ ವಿರುದ್ಧ 21-16, 12-21, 18-21 ಗೇಮ್ ಗಳ ಅಂತರ ದಲ್ಲಿ ಸೋಲನುಭವಿಸಿದರು.
ಆರಂಭಿಕ ಗೇಮ್ ನಲ್ಲಿ ಮಿಂಚಿನ ಆಟವಾಡಿದ ಭಾರತದ ಆಟಗಾರ್ತಿ, ಶಿಕ್ಸಿಯಾನ್ ವಿರುದ್ಧ ಒಂದು ಹಂತದಲ್ಲಿ 11-5ರ ಮುನ್ನಡೆ ಪಡೆದರು. ಆನಂತರವೂ ಅದೇ ಮಾದರಿಯ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಅವರು, ಕೇವಲ 30 ನಿಮಿಷಗಳ ಅಂತರದಲ್ಲಿ ಮೊದಲ ಗೇಮ್ ನಲ್ಲಿ ಜಯ ಸಾಧಿಸಿ ಮುನ್ನುಗ್ಗಿದರು. ಆದರೆ, ನಂತರದ ಗೇಮ್ ಗಳಲ್ಲಿ ಸೈನಾರವರ ಆಟ ನಡೆಯಲಿಲ್ಲ. ತಮ್ಮ ದೀರ್ಘಕಾಲದ ಅನುಭವವನ್ನೆಲ್ಲಾ ಧಾರೆಯೆರೆದ ಶಿಕ್ಸಿಯಾನ್ ದ್ವಿತೀಯ ಗೇಮ್ ಅನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುವುದರಲ್ಲಿ ಯಶಸ್ವಿಯಾದರು.
ನಿರ್ಣಾಯಕ ಮೂರನೇ ಗೇಮ್ ತೀವ್ರ ಕುತೂಹಲಕಾರಿಯಾಗಿತ್ತು. ಆರಂಭ ದಲ್ಲಿ ಸೈನಾ 6-3ರ ಮುನ್ನಡೆ ಸಂಪಾದಿಸಿದರು. ಆದರೆ, ಶಿಕ್ಸಿಯಾನ್ ಅವರು ಪಟ್ಟು ಸಡಿಲಿಸದೇ ಅಂತಿಮ ಜಯ ಸಾಧಿಸಿದರು. ಈ ಹಿಂದೆ 2009, 2010 ಹಾಗೂ 2012 ರಲ್ಲಿ ಇಲ್ಲಿ ಚಾಂಪಿಯನ್ ಆಗಿ ಹೊಮ್ಮಿದ್ದ ಸೈನಾ, ಈ ಬಾರಿ ಕ್ವಾರ್ಟರ್ ಫೈನಲ್‍ಗೇ ತಮ್ಮ ಅಬಿsಯಾನವನ್ನು ಮೊಟಕುಗೊಳಿಸಬೇಕಾಯಿತು.
Advertisement