
ಜೂರಿಚ್: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಪುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಸ್ಥಾನ ತೊರೆದ ಸೆಪ್ ಬ್ಲಾಟರ್ ಅವರು ಶೀಘ್ರದಲ್ಲೇ ಬಂಧನಕ್ಕೊಳಗಾಗಲಿದ್ದಾರೆಂದು ಇಂಗ್ಲೆಂಡ್ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಗ್ರೆಗ್ ಡೈಕ್ ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ಫಿಫಾ ಎದುರಿಸುತ್ತಿರುವ ಹಗರಣಗಳ ಆರೋಪಗಳು ಸೆಪ್ ಬ್ಲಾಟರ್ ಅವರತ್ತಲೂ ಬೆರಳು ಮಾಡಿ ತೋರಿಸುತ್ತಿವೆ. ಫಿಫಾದಲ್ಲಿ ನಡೆದಿರುವ ಎಲ್ಲ ಹಣಕಾಸು ಅಕ್ರಮಗಳಿಗೂ ಬ್ಲಾಟರ್ ಅವರ ನೇರ ನಂಟಿದೆ. ಈ ಬಗ್ಗೆ ಕೂಲಂಕುಷ ತನಿಖೆನಡೆಯುತ್ತಿದ್ದು, ಇದರಲ್ಲ ಬ್ಲಾಟರ್ ಅವರ ತಪ್ಪುಗಳು )ಋಜುವಾತಾಗುವುದು ಖಚಿತ. ಹಾಗಾಗಿ ಅವರ ಬಂಧನ ಶೀಘ್ರದಲ್ಲೇ ಆಗಲಿದೆ ಎಂದು ಅವರು ಹೇಳಿದ್ದರೆಂದು ಪತ್ರಿಕೆಯೊಂದು ವರದಿ ಮಾಡಿದೆ.
ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ವಿಶ್ವಕಪ್ ಪಂದ್ಯಾವಳಿಯ ಸಿದ್ಧತೆಗಾಗಿ ನೀಡಬೇಕಿದ್ದ ಸಹಾಯಧನದಲ್ಲಿ,ಅಂದು ಫಿಫಾದ ಉಪಾಧ್ಯಕ್ಷರಾಗಿದ್ದ ಜ್ಯಾಕ್ ವಾರ್ನರ್ ಅವರ ಖಾತೆಗೆ 63 ಕೋಟಿಯಷ್ಟು ಮೊತ್ತವನ್ನು ಸಂದಾಯ ಮಾಡಿರುವುದು ಬ್ಲಾಟರ್ ಅವರಿಗೆ ತಿಳಿದಿತ್ತು. ಆದರೂ ತೆಪ್ಪಗಿರುವ ಮೂಲಕ ಈ ವ್ಯವಹಾರಕ್ಕೆ ಕುಮ್ಮಕ್ಕು ನೀಡಿದ್ದರು. ಹಾಗಾಗಿ ಆ ಎಲ್ಲಾ ತಪ್ಪುಗಳು ಸಾಬೀತಾಗಿ ಅವರ ಬಂಧನವಾಗುವುದು ಖಚಿತ ಎಂದು ಡೈಕ್ ಹೇಳಿದ್ದಾರೆ.
ಇನ್ನು 2022ರ ಫಿಫಾ ವಿಶ್ವಕಪ್ ಆತಿಥ್ಯ ಪಡೆದಿರುವ ಕತಾರ್ ಗೆ,ಆತಿಥ್ಯ ಕೈ ತಪ್ಪುವ ಸಂದರ್ಭ ಸನ್ನಿಹಿತವಾಗಿದೆ ಎಂದು ಡೈಲಿಮೇಲ್ ವರದಿ ಮಾಡಿದೆ. ಈ ಬಗ್ಗೆ ಒಂದು ವಿಶ್ಲೇಷಣಾತ್ಮಕ ವರದಿ ಡೈಲಿಮೇಲ್ ಜಾಲತಾಣದಲ್ಲಿ ಪ್ರಕಟಗೊಂಡಿದೆ. 2010 ರಲ್ಲಿ ಕತಾರ್ ಗೆ ವಿಶ್ವಕಪ್ ಆತಿಥ್ಯ ದೊರಕಿಸುವ ನಿಟ್ಟಿನಲ್ಲಿ ಅಲ್ಲಿನ ಸರ್ಕಾರ ನೇಮಿಸಿದ್ದ ವಿಶೇಷ ತನಿಖಾ ಸಮಿತಿಯ ಮಾಜಿ ಸದಸ್ಯೆ ಫೇಂದ್ರಾ ಆಲ್ ಮಜಿದ್ ಅವರು ಇದೀಗ ಅಮೆರಿಕಾದ ತನಿಖಾ ಸಂಸ್ಥೆಯಾದ ಎಫ್ ಬಿ ಐ ನ ಬಂಧನದಲ್ಲಿದ್ದು, ಅವರ ಹೇಳಿಕೆಗಳನ್ನು ಆಧರಿಸಿ ಈ ವರದಿ ನೀಡಲಾಗಿದೆ.
ಎಫ್ ಬಿಐ ನ ರಹಸ್ಯ ತಾಣವೊಂದರಲ್ಲಿ ವಿಚಾರಣೆ ಎದುರಿಸುತ್ತಿರುವ ಆಲ್ ಮಜಿದ್ ಅವರು, ಫಿಫಾದ ಅಕ್ರಮಗಳನ್ನು ಬಯಲು ಮಾಡಿದ್ದಾರೆಂದು ಹೇಳಲಾಗಿದೆ. ಅವರ ಹೇಳಿಕೆ ಪ್ರಕಾರ, ಕತಾರ್ ಗೆ 2022 ರ ಫುಟ್ಬಾಲ್ ಆತಿಥ್ಯ ಸಿಕ್ಕಿರುವುದರ ಹಿಂದೆ ಬಾರಿ ಲಾಭಿ ನಡೆದಿದೆ ಎನ್ನಲಾಗಿದೆ. ಇದು ತನಿಖೆಯಿಂದ ಬಯಲುಗೊಳ್ಳುವುದು ಬಹುತೇಕ ನಿಶ್ಚಿತವಾಗಿರುವುದರಿಂದ, ಕತಾರ್ ಬದಲಿಗೆ ಬೇರೊಂದು ದೇಶಕ್ಕೆ ಆತಿಥ್ಯ ನೀಡುವ ಅನಿವಾರ್ಯ ಪರಿಸ್ಥಿತಿಗೆ ಸಿಲುಕಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇದಲ್ಲದೆ, 2018 ಹಾಗೂ 2022ರ ವಿಶ್ವಕಪ್ ಆತಿಥ್ಯಗಳನ್ನು ಕ್ರಮವಾಗಿ ಪಡೆದಿರುವ ರಷ್ಯಾ ಹಾಗೂ ಕತಾರ್ ರಾಷ್ಟ್ರಗಳು ಈ ಅವಕಾಶದಿಂದ ವಂಚಿತವಾಗಬಹುದು ಎಂದು ದ ಗಾರ್ಡಿಯನ್ ಸಹ ಅಭಿಪ್ರಾಯ ವ್ಯಕ್ತಪಡಿಸಿದೆ.
Advertisement