
ಆ್ಯಂಟ್ವೆರ್ಪ್: ಪಂದ್ಯದ ಪ್ರತಿ ಕ್ವಾರ್ಟರ್‍ನಲ್ಲೂ ಪ್ರಭುತ್ವ ಸಾಧಿಸಿದ ಭಾರತದ ಪುರುಷರ ಹಾಕಿ ತಂಡ, ವಿಶ್ವ ಹಾಕಿ ಲೀಗ್ ಸೆಮಿಫೈನಲ್ ಪಂದಾವಳಿಯ ತನ್ನ ಎರಡನೇ ಪಂದ್ಯದಲ್ಲಿ ಪೊಲೆಂಡ್ ವಿರುದ್ಧ 3-0 ಗೋಲುಗಳ ಭರ್ಜರಿ ಗೆಲವು ದಾಖಲಿಸಿದೆ.
ಮಂಗಳವಾರ ನಡೆದ ಪುರುಷರ ಗುಂಪು ಹಂತದ ಪಂದ್ಯದಲ್ಲಿ ಭಾರತ ತನ್ನ ಪ್ರತಿಸ್ಪರ್ಧಿ ಪೊಲೆಂಡ್ ಎದುರು ಏಕಪಕ್ಷೀಯ ಆಟವಾಡಿ ಜಯ ಪಡೆಯಿತು. ಪ್ರತಿಯೊಂದು ಹಂತದಲ್ಲೂ ಪಾರಮ್ಯ ಮೆರೆದ ಯುವರಾಜ ವಾಲ್ಮೀಕಿ ಸಹೋದರರ ಜತೆಗೆ ನಾಯಕ ಸರ್ದಾರ್ ಸಿಂಗ್ ಬಾರಿಸಿದ ಗೋಲಿನಿಂದ ಭಾರತ ಟೂರ್ನಿಯಲ್ಲಿ ತನ್ನ ಗೆಲವಿನ ಯಾತ್ರೆಯನ್ನು ಮುಂದುವರಿಸಿದೆ. ಇದೀಗ ತನ್ನ ಮುಂದಿನ ಪಂದ್ಯವನ್ನು ಭಾರತ ಇದೇ 26ರಂದು ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕಿಸ್ತಾನ ವಿರುದಟಛಿ ಆಡಲಿದ್ದು, ಹ್ಯಾಟ್ರಿಕ್ ಗುರಿ ಹೊಂದಿದೆ.
ಭಾರತ ತಂಡದ ಪರ ಯುವರಾಜ್ ವಾಲ್ಮೀಕಿ (23 ನಿ.), ನಾಯಕ ಸರ್ದಾರ್ ಸಿಂಗ್ (42 ನಿ.) ಹಾಗೂ ದೇವಿಂದರ್ ವಾಲ್ಮೀಕಿ 52ನೇ ನಿಮಿಷದಲ್ಲಿ ತಲಾ ಒಂದೊಂದು ಗೋಲು ದಾಖಲಿಸಿ ಜಯದ ರೂವಾರಿಗಳೆನಿಸಿದರು. ಮೊದಲ ಪಂದ್ಯದಲ್ಲಿ ಫ್ರಾನ್ಸ್ ಒಡ್ಡಿದ ಪ್ರಬಲ ಪ್ರತಿರೋಧವನ್ನು 3-2 ಗೋಲುಗಳಿಂದ ಹತ್ತಿಕ್ಕಿದ್ದ ಭಾರತ, ಇಂದು ನಡೆದ ಪಂದ್ಯದಲ್ಲಿ ಇನ್ನಷ್ಟು ಆಕರ್ಷಕ ಆಟವಾಡಿ ಅರ್ಹ ಗೆಲುವು ಪಡೆಯಿತು. ಪಂದ್ಯದಲ್ಲಿ ತನ್ನ ಯೋಜನೆಯನ್ನು ಮೈದಾನದಲ್ಲಿ ಪರಿಣಾಮಕಾರಿಯಾಗಿ ಪ್ರಯೋಗಿಸಿದ ಭಾರತ, ಪೊಲೆಂಡ್ ವಿರುದ್ಧ ಪ್ರಾಬಲ್ಯ ಮೆರೆಯಿತು.
ಪಂದ್ಯದ ಆರಂಭದಿಂದಲೇ ಚೆಂಡಿನ ಮೇಲೆ ಹೆಚ್ಚು ನಿಯಂತ್ರಣ ಸಾ„ಸಿದ ಸರ್ದಾರ್ ಸಿಂಗ್ ಪಡೆ, ಪೊಲೆಂಡ್ ಮೇಲೆ ಒತ್ತಡ ಹಾಕಿತು. ಮೊದಲ ಕ್ವಾರ್ಟರ್‍ನಲ್ಲಿ ಭಾರತ ಸಂಘಟಿತ ಪ್ರದರ್ಶನ ನೀಡಿತು. ಈ ವೇಳೆ 9ನೇ ನಿಮಿಷದಲ್ಲಿ ಲಲಿತ್ ನೀಡಿದ ಪಾಸ್ ಅನ್ನು ಕರ್ನಾಟಕ ಆಟಗಾರ ನಿಕ್ಕಿನ್ ತಿಮ್ಮಯ್ಯ ಗೋಲಿನತ್ತ ಹೊಡೆದರು. ಆದರೆ ಪೊಲೆಂಡ್ ಗೋಲ್ ಕೀಪರ್ ಎಚ್ಚೆತ್ತು ಅದನ್ನು ತಡೆದರು. ಆದರೆ ಪಂದ್ಯದ ಎರಡನೇ ಕ್ವಾರ್ಟರ್‍ನಲ್ಲೂ ಹಿಡಿತವನ್ನು ಇನ್ನಷ್ಟು ಬಿಗಿಗೊಳಿಸಿದ ಭಾರತ ತನ್ನ ಗೋಲಿನ ಖಾತೆ ತೆರೆಯಿತು. ಪಂದ್ಯದ 23ನೇ ನಿಮಿಷದಲ್ಲಿ ಬಿರೇಂದ್ರ ಲಕ್ರಾ ಚೆಂಡನ್ನು ಡಿ ಬಾಕ್ಸ್ ಒಳಗೆ ಕಳುಹಿಸಿದರು. ಈ ಪಾಸ್ ಅನ್ನು ಪಡೆದ ಯುವರಾಜ್ ವಾಲ್ಮೀಕಿ ಚೆಂಡನ್ನು ಗೋಲುಪೆಟ್ಟಿಗೆಯೊಳಗೆ ಸೇರಿಸಿದರು.
ಈ ಮೂಲಕ ಭಾರತ ಪಂದ್ಯದ ಮೊದಲಾರ್ಧದ ಮುಕ್ತಾಯಕ್ಕೆ 1-0 ಮುನ್ನಡೆ ಕಾಯ್ದುಕೊಂಡಿತು. ಪಂದ್ಯದ ಮೂರನೇ ಕ್ವಾರ್ಟರ್‍ನಲ್ಲೂ ಭಾರತ ಹಿರಿಮೆ ಮೆರೆಯಿತು. ಪಂದ್ಯದ 42ನೇ ನಿಮಿಷದಲ್ಲಿ ಡಿ ಬಾಕ್ಸ್‍ನಲ್ಲಿ ಚೆಂಡು ಹೊಂದಿದ್ದ ಸರ್ದಾರ್, ಎದುರಾಳಿಯ ಇಬ್ಬರು ರಕ್ಷಣಾತ್ಮಕ ಆಟಗಾರರ ನಡುವೆ ಚೆಂಡನ್ನು ಹೊಡೆದು ಗೋಲುಪೆಟ್ಟಿಗೆಗೆ ಸೇರಿಸಿದರು. ಈ ಮೂಲಕ ಭಾರತ ಮುನ್ನಡೆಯನ್ನು ಹೆಚ್ಚಿಸಿಕೊಂಡಿತು. ನಂತರ ಕೊನೆಯ ಕ್ವಾರ್ಟರ್‍ನಲ್ಲಿ ಭಾರತಕ್ಕೆ ದೇವಿಂದರ್ ವಾಲ್ಮೀಕಿ ಮೂರನೇ ಗೋಲು ತಂದುಕೊಟ್ಟರು. ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲೇ ಫ್ರಾನ್ಸ್ ವಿರುದ್ಧ ಗೋಲು ಬಾರಿಸಿ ಮಿಂಚು ಹರಿಸಿದ್ದ ದೇವಿಂದರ್, ಪೊಲೆಂಡ್ ವಿರುದ್ಧವೂ ವಿಜೃಂಭಿಸಿದರು. 52ನೇ ನಿಮಿಷದಲ್ಲಿ ಚಿಕ್ಲೆಸೆನಾ ಸಿಂಗ್ ನೀಡಿದ ಪಾಸ್‍ನಲ್ಲಿ ಚೆಂಡನ್ನು ಗೋಲುಪೆಟ್ಟಿಗೆಯತ್ತ ದೂಡಿದ ದೇವಿಂದರ್ ಆಕರ್ಷಕ ಗೋಲು ದಾಖಲಿಸಿದರು.
Advertisement