
ಪ್ಯಾರಿಸ್: 2024ರ ಒಲಿಂಪಿಕ್ಸ್ ಆತಿಥ್ಯ ಪಡೆಯಲು ಈಗಾಗಲೇ ಕೆಲ ರಾಷ್ಟ್ರಗಳು ಪ್ರಯತ್ನ ನಡೆಸಿದ್ದು, ಇದೀಗ ಫ್ರಾನ್ಸ್ ಸಹ ಈ ಸ್ಪರ್ಧೆಯಲ್ಲಿ ಸೇರ್ಪಡೆಗೊಂಡಿದೆ.
ತನ್ನ ರಾಜಧಾನಿ ಪ್ಯಾರಿಸ್ ನಲ್ಲಿ ಒಲಿಂಪಿಕ್ಸ್ ನ ಆತಿಥ್ಯ ವಹಿಸಲು ಸಿದ್ಧವಿರುವುದಾಗಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಮಂಡಳಿ (ಐಒಸಿ) ಮುಂದೆ ತನ್ನ ಅಹವಾಲು ಸಲ್ಲಿಸಿದೆ. ಈ ಹಿಂದೆ 2008, 2012ರ ಒಲಿಂಪಿಕ್ಸ್ ಆತಿಥ್ಯವನ್ನು ಪಡೆಯುವಾಗಲೂ ಏರ್ಪಟ್ಟಿದ್ದ ತುರುಸಿನ ಸ್ಪರ್ಧೆಯಲ್ಲಿ ಫ್ರಾನ್ಸ್ ದೇಶ, ಪ್ಯಾರಿಸ್‍ಗೆ ಆತಿಥ್ಯ ದೊರಕಿಸಲು ಪ್ರಯತ್ನಿಸಿತ್ತು. ಆದರೆ, ಆಗ ಅದಕ್ಕೆ ಸಾಫಲ್ಯ ಸಿಕ್ಕಿರಲಿಲ್ಲ. ಆದರೆ, ಇದೀಗ ಮತ್ತೊಮ್ಮೆ ಅದು ಅಖಾಡಕ್ಕಿಳಿದಿದ್ದು ಅಮೆರಿಕದ ಬೋಸ್ಟನ್, ರೋಮ್ ಹಾಗೂ ಜರ್ಮನಿಯ ಹ್ಯಾಂಬರ್ಗ್ ನಗರಗಳು ನೀಡುತ್ತಿರುವ ಸ್ಪರ್ಧೆಯನ್ನು ಹಿಂದಿಕ್ಕಲು ಸಜ್ಜಾಗಿದೆ.
ಅಂದಹಾಗೆ ಒಲಿಂಪಿಕ್ಸ್ ಆತಿಥ್ಯ ವಹಿಸಲು ಆಸಕ್ತಿ ಹೊಂದಿರುವ ದೇಶಗಳು ತಮ್ಮ ಅಹವಾಲನ್ನು ಐಒಸಿಗೆ ಸಲ್ಲಿಸಲು ಇದೇ ವರ್ಷದ ಸೆ. 15ರವರೆಗೂ ಅವಕಾಶವಿದೆ. ಆದರೆ, ಯಾರಿಗೆ 2017ರ ಒಲಿಂಪಿಕ್ಸ್ ಆತಿಥ್ಯ ದಕ್ಕಲಿದೆ ಎನ್ನುವುದು ಪೆರುವಿನ ರಾಜಧಾನಿ ಲಿಮಾದಲ್ಲಿ ನಡೆಯಲಿರುವ ಐಒಸಿ ಮಹಾಧಿವೇಶನದಲ್ಲಿ ನಿರ್ಧಾರವಾಗಲಿದೆ.
Advertisement