
ಆ್ಯಂಟ್‍ವರ್ಪ್: ಅತೀವ ಕೌತುಕ ಕೆರಳಿಸಿದ್ದ ವಿಶ್ವ ಲೀಗ್ ಸೆಮಿಫೈನಲ್ ಹಾಕಿ ಪಂದ್ಯಾವಳಿಯ `ಎ' ಗುಂಪಿನ ಭಾರತ ಹಾಗೂ ಪಾಕಿಸ್ತಾನ ನಡುವಣದ ದಾಯಾದಿ ಕಲಹವು ಸಮಬಲ ಪೈಪೋಟಿಯಲ್ಲಿ ಕೊನೆಕಂಡಿತು.
ಪ್ರತಿಯೊಂದು ಘಟ್ಟದಲ್ಲಿಯೂ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಉಭಯರ ಗೆಲುವಿನ ತಂತ್ರ ಫಲಿಸದೆ ಜಯ ಮರೀಚಿಕೆಯಾಯಿತು. ಆದರೆ ಜಯಕ್ಕಾಗಿ ಕಾದಾಡಿದ ಪರಿಯಂತೂ ಅನನ್ಯವೆನಿಸಿತು. ಜಿದ್ದಾಜಿದ್ದಿನಿಂದ ಕೂಡಿದ್ದ ಹಣಾಹಣಿಯಲ್ಲಿ ಭಾರತದ ಪರ ರಮಣ್‍ದೀಪ್ ಸಿಂಗ್ (13 ಹಾಗೂ 39 ನಿ.) ಎರಡು ಗೋಲು ಬಾರಿಸಿದರೆ, ಪಾಕಿಸ್ತಾನದ ಪರ ಮುಂಪಡೆ ಆಟಗಾರ ಮೊಹಮದ್ ಇಮ್ರಾನ್ (23 ಹಾಗೂ 35ನೇ ನಿ.) ಎರಡು ಗೋಲು ದಾಖಲಿಸಿದರು. ಇದರಿಂದಾಗಿ ಉಭಯರ 162 ಪಂದ್ಯಗಳಲ್ಲಿ ಇದು 30ನೇ ಡ್ರಾ ಎನಿಸಿಕೊಂಡಿತು.
ಬರೋಬ್ಬರಿ ಆರು ತಿಂಗಳ ನಂತರ (ಕಳೆದ ಡಿಸೆಂಬರ್ ನಲ್ಲಿನ ಚಾಂಪಿಯನ್ಸ್ ಟ್ರೋಪಿs ಬಳಿಕ) ಮೊದಲ ಬಾರಿಗೆ ಮುಖಾಮುಖಿಯಾಗಿದ್ದ ಈರ್ವರ ಕಾದಾಟ ನೋಡುಗರನ್ನು ಸೀಟಿನ ಅಂಚಿಗೆ ತಂದು ಕೂರಿಸಿತು. ಒಂದು ಹಂತದಲ್ಲಿ ಭಾರತ ಗೆಲುವು ಸಾಧಿಸುವ ಅವಕಾಶವಿತ್ತಾದರೂ, ಪಾಕಿಸ್ತಾನದ ಗೋಲ್‍ಕೀಪರ್ ಅದಕ್ಕೆ ಅಡ್ಡಿಯಾದರು. ಸತ್ಬೀರ್ ಸಿಂಗ್ ಹಾಗೂ ಯುವರಾಜ್ ವಾಲ್ಮೀಕಿ ಗೋಲಿಗಾಗಿ ನಡೆಸಿದ ಯತ್ನವನ್ನು ಪಾಕ್ ಗೋಲಿ ಇಮ್ರಾನ್ ಬಟ್ ಯಶಸ್ವಿಯಾಗಿ ತಡೆದು ಭಾರತದ ಗೆಲುವಿನ ಆಸೆಯನ್ನು ಚಿವುಟಿದರು. ಆದಾಗ್ಯೂ ಪಾಕಿಸ್ತಾನ ಈ ಪಂದ್ಯದಲ್ಲಿ 4 ಪೆನಾಲ್ಟಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವ ಮೂಲಕ ಗಮನ ಸೆಳೆಯಿತು.
ಇನ್ನು ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಒತ್ತುಕೊಟ್ಟ ಭಾರತ, ಪಾಕಿಸ್ತಾನದ ರಕ್ಷಣಾ ವ್ಯೂಹವನ್ನು ಛಿದ್ರಗೊಳಿಸುವಲ್ಲಿ ಸಫಲವಾಯಿತು. ಪಂದ್ಯದ ಮೊದಲ ಕ್ವಾರ್ಟರ್‍ನ ಅಂದರೆ ಹದಿಮೂರನೇ ನಿಮಿಷದಲ್ಲಿ ಗುರ್ಮೇಲ್ ಸಿಂಗ್ ತಿರುವಿನಲ್ಲಿ ಚಾಣಾಕ್ಷತನದಿಂದ ಪಾಸ್ ಮಾಡಿದ ಚೆಂಡನ್ನು ಕ್ಷಣಾರ್ಧದಲ್ಲಿ ಗೋಲುಪೆಟ್ಟಿಗೆಗೆ ನುಸುಳಿಸುವಲ್ಲಿ ರಮಣ್‍ದೀಪ್ ಯಶ ಕಂಡರು.
ಇದರಿಂದ ಮೊದಲ ಹಂತದ ಸೆಣಸಾಟದಲ್ಲಿ ಭಾರತ 1-0 ಮುನ್ನಡೆ ಪಡೆಯುವಂತಾಯಿತು. ಆದರೆ, ಎರಡನೇ ಕ್ವಾರ್ಟರ್‍ನಲ್ಲಿ ಪಾಕಿಸ್ತಾನ ಭಾರತಕ್ಕೆ ತಿರುಗೇಟು ನೀಡಿತು. ಭಾರತ ತನ್ನ ರಕ್ಷಣಾ ವಲಯವನ್ನು ಸಂರಕ್ಷಿಸುವ ಭರದಲ್ಲಿ ಮಾಡಿದ ಎಡವಟ್ಟಿನಿಂದ ಭಾರತ ಮೊದಲ ಪೆನಾಲ್ಟಿ ಅವಕಾಶವನ್ನು ಪಾಕ್‍ಗೆ ಬಿಟ್ಟುಕೊಟ್ಟಿತು. ಸಿಕ್ಕ ಈ ಭರ್ಜರಿ ಅವಕಾಶವನ್ನು ಮುಹಮದ್ ಇಮ್ರಾನ್ ಕೈಚೆಲ್ಲದ ಫಲವಾಗಿ ಪಾಕಿಸ್ತಾನ ಗೋಲು ಬಾರಿಸಿ ಅಂತರವನ್ನು 1-1ಕ್ಕೆ ಸಮಗೊಳಿಸಿತು. ಆನಂತರವೂ ದಾಳಿಗೆ ಪ್ರತಿದಾಳಿ ನಡೆಸಿದ ಈರ್ವರ ಪೈಕಿ ಯಾರೊಬ್ಬರಿಗೂ ಪ್ರಭುತ್ವ ಮೆರೆಯಲು ಸಾಧ್ಯವಾಗದೆ ಹೋಯಿತು. ಆದಾಗ್ಯೂ 35ನೇ ನಿಮಿಷದಲ್ಲಿ ಇಮ್ರಾನ್ ಬಾರಿಸಿದ ಗೋಲು ಭಾರತದ ಪಾಳೆಯದಲ್ಲಿ ಆತಂಕದ ಛಾಯೆ ತರಿಸಿತು. ಆದರೆ ಅನತಿ ಅಂತರದಲ್ಲೇ ಗೋಲು ಹೊಡೆದ ರಮಣ್‍ದೀಪ್ ಸಿಂಗ್ ಆ ದುಗುಡವನ್ನು ಕೊನೆಗಾಣಿಸಿದರು.
ವಾಲ್ಮೀಕಿ ಅರ್ಧಶತಕ!
ಪಾಕಿಸ್ತಾನ ವಿರುದ್ಧ ಶುಕ್ರವಾರ ನಡೆದ ಪಂದ್ಯವು ಭಾರತದ ಯುವ ಆಟಗಾರ ಯುವರಾಜ್ ವಾಲ್ಮೀಕಿ ಪಾಲಿಗೆ ಸ್ಮರಣೀಯವೆನಿಸಿತು. ಭಾರತ ಹಾಕಿ ತಂಡದ ಈ ಅಪೂರ್ವ ಪ್ರತಿಭೆಗೆ ಈ ಪಂದ್ಯ 10ನೆಯದ್ದಾಗಿದ್ದರ ಹಿನ್ನೆಲೆಯಲ್ಲಿ ಹಾಕಿ ಇಂಡಿಯಾ ಅವರಿಗೆ ಶುಭ ಕೋರಿತಲ್ಲದೆ, ಸಹ ಆಟಗಾರರ ಅಭಿನಂದನೆಗೂ ಅವರು ಪಾತ್ರರಾದರು.
Advertisement