
ಮೆಲ್ಬರ್ನ್: ವಿಶ್ವಕಪ್ ಪಂದ್ಯಾವಳಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ ಶತಕ ಹಾಗು ಸುರೇಶ್ ರೈನಾ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಭಾರತ ಉತ್ತಮ ಸ್ಕೋರ್ ಪೇರಿಸಿದೆ. ನಿರ್ದಿಷ್ಟ 50 ಓವರ್‌ಗಳಲ್ಲಿ ಭಾರತ 6 ವಿಕೆಟ್ ನಷ್ಟಕ್ಕೆ 302 ರನ್ ಗಳಿಸಿದ್ದು, ಬಾಂಗ್ಲಾದೇಶಕ್ಕೆ 303 ರನ್‌ಗಳ ಗುರಿ ನೀಡಿದೆ.
ಟಾಸ್ ಗೆದ್ದ ಧೋನಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಆರಂಭಿಕ ಬ್ಯಾಟ್ಸ್‌ಮೆನ್‌ಗಳಾದ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಸಮಯೋಜಿತ ಜತೆಯಾಟದ ಮೂಲಕ ಭಾರತಕ್ಕೆ ಉತ್ತಮ ಆರಂಭವನ್ನು ನೀಡಿದರು. ಆದರೆ 17ನೇ ಓವರ್‌ನಲ್ಲಿ 30 ರನ್ ಗಳಿಸಿ ಧವನ್ ಔಟಾದರು. ನಂತರ ಕ್ರೀಸ್‌ಗಿಳಿದ ಕೊಹ್ಲಿ 3 ರನ್ ಗಳಿಸಿ ಹೊಸೈನ್ ಬಾಲ್‌ಗೆ ಕ್ಯಾಚಿತ್ತು ಪೆವಿಲಿಯನ್ ನಡೆದಾಗ ಭಾರತದ ರನ್ ಗತಿ ಕುಸಿದು ಬಿಟ್ಟಿತು.
ಕೊಹ್ಲಿ ನಂತರ ಬಂದ ರೆಹಾನೆ ಕೂಡಾ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. 37 ಬಾಲ್‌ಗಳಲ್ಲಿ 19 ರನ್‌ಗಳಿಸಿದ ರೆಹಾನೆ ತಸ್ಕಿನ್ ಅಹಮದ್ ಬಾಲ್‌ಗೆ ಕ್ಯಾಚಿತ್ತು ಔಟಾದರು. 28ನೇ ಓವರ್‌ನಲ್ಲಿ 3 ವಿಕೆಟ್ ಕಳೆದುಕೊಂಡ ಭಾರತದ ಮೊತ್ತ 115 ಆಗಿತ್ತು. ಆ ಹೊತ್ತಿನಲ್ಲಿ ರೋಹಿತ್ ಶರ್ಮಾಗೆ ಸಾಥ್ ನೀಡಿದ್ದು ಸುರೇಶ್ ರೈನಾ. ಇವರಿಬ್ಬರ ಜತೆಯಾಟ ಭಾರತದ ರನ್ ಗತಿಯನ್ನು ಹೆಚ್ಚಿಸಿತು. ರೈನಾ 57 ಬಾಲ್‌ಗಳಲ್ಲಿ 65ರನ್ ಗಳಿಸಿ ಔಟಾದಾಗ ಸ್ಕೋರ್ 237. ಶತಕ ಗಳಿಸಿ ಕ್ರೀಸ್‌ನಲ್ಲಿ ರೋಹಿತ್ ಶರ್ಮಾ ಒಬ್ಬನೇ ಏಕಾಂಗಿ ಹೋರಾಟಗಾರನಂತೆ ಕಾಣುತ್ತಿರುವ ವೇಳೆ ಅವರಿಗೆ ಸಾಥ್ ನೀಡಿದ್ದು ಕೂಲ್ ಕ್ಯಾಪ್ಟನ್ ಧೋನಿ. ಧೋನಿ ಬಂದ ಕೂಡಲೇ ರೋಹಿತ್ ಶರ್ಮಾ ಒಂದರ ಮೇಲೊಂದು ಬೌಂಡರಿಗಳನ್ನು ಬಾರಿಸಿ ಆಕರ್ಷಕ ಆಟ ಪ್ರದರ್ಶಿಸಿದರು. 47 ನೇ ಓವರ್‌ನಲ್ಲಿ ಟಸ್ಕಿನ್ ಅಹಮದ್ ಬಾಲ್‌ಗೆ ರೋಹಿತ್ ಕ್ಲೀನ್ ಬೌಲ್ಡ್ ಆಗಿ ಬಿಟ್ಟರು. ಇಲ್ಲಿಯವರೆಗೆ ನಡೆದ ಪಂದ್ಯಗಳಲ್ಲಿ ಅಷ್ಟೇನೂ ಉತ್ತಮ ಪ್ರದರ್ಶನ ನೀಡದೆ ಟೀಕೆಗೆ ಗುರಿಯಾಗಿದ್ದ ರೋಹಿತ್ ಈ ಪಂದ್ಯದಲ್ಲಿ 126 ಬಾಲ್‌ಗಳಲ್ಲಿ 137 ರನ್‌ಗಳಿಸಿ ಭಾರತವನ್ನು ಸುದೃಢ ಸ್ಥಿತಿಗೆ ತಲುಪಿಸಿದರು. ರೋಹಿತ್ ನಂತರ ಕ್ರೀಸ್‌ಗಿಳಿದ ರವೀಂದ್ರ ಜಡೇಜಾ ಕೊನೆಯ ಹಂತದಲ್ಲಿ ಹೊಡೆಬಡಿ ಆಟ ಪ್ರದರ್ಶಿಸಿದರು. ಆದರೆ ಅಷ್ಟೊತ್ತಿಗೆ 49ನೇ ಓವರ್‌ನಲ್ಲಿ 6 ರನ್ ಗಳಿಸಿ ಧೋನಿ ಟಸ್ಕಿನ್ ಅಹಮದ್‌ಗೆ ವಿಕೆಟ್ ಒಪ್ಪಿಸಿದರು.
ಪ್ರಸ್ತುತ ಪಂದ್ಯದಲ್ಲಿ 10 ಬಾಲ್‌ಗಳನ್ನೆದುರಿಸಿದ ಜಡೇಜಾ 23 ರನ್ ಗಳಿಸಿದರೆ, ಅಶ್ವಿನ್ 3 ಬಾಲ್‌ಗಳಲ್ಲಿ 3 ರನ್‌ಗಳಿಸಿ ಅಜೇಯರಾಗಿ ಉಳಿದರು.
Advertisement