ಜೊಕೊವಿಚ್‍ಗೆ 50ನೇ ಎಟಿಪಿ ಮುಕುಟ

ವಿಶ್ವದ ನಂಬರ್‍ಒನ್ ಆಟಗಾರ ಹಾಗೂ ಹಾಲಿ ಚಾಂಪಿಯನ್ ಸರ್ಬಿಯಾದ ನೊವಾಕ್ ಜೊಕೊವಿಚ್ ಈ ಬಾರಿಯ ಇಂಡಿಯನ್ ವೆಲ್ಸ್ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ...
ನೊವಾಕ್ ಜೊಕೊವಿಚ್
ನೊವಾಕ್ ಜೊಕೊವಿಚ್

ಇಂಡಿಯನ್ ವೆಲ್ಸ್: ವಿಶ್ವದ ನಂಬರ್‍ಒನ್ ಆಟಗಾರ ಹಾಗೂ ಹಾಲಿ ಚಾಂಪಿಯನ್ ಸರ್ಬಿಯಾದ ನೊವಾಕ್ ಜೊಕೊವಿಚ್ ಈ ಬಾರಿಯ ಇಂಡಿಯನ್ ವೆಲ್ಸ್ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಭಾನುವಾರ ತಡರಾತ್ರಿ ನಡೆದ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ವಿಶ್ವದ 2ನೇ ಶ್ರೇಯಾಂಕದ ಆಟಗಾರ ಸ್ವಿಜರ್ಲೆಂಡ್‍ನ ರೋಜರ್ ಫೆಡರರ್ ಅವರನ್ನು 6-3, 6-7 (5-7), 6-2 ಸೆಟ್‍ಗಳ ಅಂತರದಲ್ಲಿ ಮಣಿಸಿದ ಜೊಕೊವಿಚ್, ಮತ್ತೆ ಚಾಂಪಿಯನ್ ಪಟ್ಟ ಅಲಂಕರಿಸಿದರು.

ಜನವರಿಯಲ್ಲಷ್ಟೇ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದ ಜೊಕೊವಿಚ್‍ಗೆ ಇದು 50ನೇ ಎಟಿಪಿ ಪ್ರಶಸ್ತಿಯಾಗಿದೆ. ಮೊದಲ ಸೆಟ್‍ನಲ್ಲಿ ಆರಂಭದಿಂದಲೇ ಫೆಡರರ್ ವಿರುದ್ಧ ಸಮರ ಸಾರಿದ ಜೊಕೊವಿಚ್ ಸುಲಭ ಜಯ ಸಂಪಾದಿಸಿ ಸಡ್ಡು ಹೊಡೆದರು. ಆದರೆ, ಎರಡನೇ ಸೆಟ್‍ನಲ್ಲಿ ಇವರಿಬ್ಬರ ಸಮಬಲದ ಪೈಪೋಟಿಯಿಂದಾಗಿ ಟೈಬ್ರೆಕರ್‍ಗೆ ಹೋರಾಟ ಬಂದು ನಿಂತಿತು. ಛಲಬಿಡದೇ ಆಡಿದ ಫೆರರ್ ಎರಡನೇ ಸೆಟ್ ಗೆದ್ದು ಎದುರಾಳಿ ಜೊತೆ ಸಮಗೌರವ ಸಾಧಿಸಿದರು.ಮೂರನೇ ಹಾಗೂ ನಿರ್ಣಾಯಕ ಸೆಟ್‍ನಲ್ಲಿ ಫೆಡರರ್ ಮಾಡಿದ ಸತತ ತಪ್ಪುಗಳು, ಜೊಕೊವಿಚ್ ಗೆ ವರದಾನವಾದವು.

ಗುರುವನ್ನೇ ಮೀರಿಸಿದ ಶಿಷ್ಯ!
ಇಂಡಿಯನ್ ವೆಲ್ಸ್ ಸಿಂಗಲ್ಸ್ ಪ್ರಶಸ್ತಿ ಗೆಲ್ಲುವ ಮೂಲಕ ಜೊಕೊವಿಚ್ ತಮ್ಮ ತರಬೇತುದಾರ ಬೋರಿಸ್ ಬೆಕರ್ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಬೋರಿಸ್ ಬೆಕರ್ ಅವರು ತಮ್ಮ ವೃತ್ತಿಜೀವನದಲ್ಲಿ 49 ಎಟಿಪಿ ಟೆನಿಸ್ ಪ್ರಶಸ್ತಿ ಗೆದ್ದಿದ್ದರೆ, ಜೊಕೊ ಅವರು ಇದೀಗ ಇಂಡಿಯನ್ ವೆಲ್ಸ್ 2015ರ ಪ್ರಶಸ್ತಿ ಸೇರಿದಂತೆ ಒಟ್ಟು 50 ಎಟಿಪಿ ಟೆನಿಸ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಸಿಮೊನಾ ಹಾಲೆಪ್‍ಗೆ ಕಿರೀಟ
ವಿಶ್ವದ 3ನೇ ಶ್ರೇಯಾಂಕದ ಆಟಗಾರ್ತಿ ರೊಮೇನಿಯಾದ ಸಿಮೊನಾ ಹಾಲೆಪ್ ಮಹಿಳೆಯರ ಸಿಂಗಲ್ಸ್ ವಿಭಾಗದ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಅವರು, ವಿಶ್ವದ ನಂಬರ್‍ಒನ್ ಆಟಗಾರ್ತಿ ಸರ್ಬಿಯಾದ ಎಲೆನಾ ಯಾಂಕೊವಿಚ್ ವಿರುದ್ಧ 2-6, 7-5, 6-4 ಸೆಟ್‍ಗಳ ಅಂತರದಲ್ಲಿ ಜಯ ಸಾಧಿಸಿ, ಚಾಂಪಿಯನ್ ಪಟ್ಟ ಅಲಂಕರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com