
ಮೆಲ್ಬರ್ನ್: ಫಿಲಿಪ್ ಹ್ಯೂಸ್ ವಿಶ್ವಕಪ್ ಪಂದ್ಯವನ್ನಾಡಲಿಲ್ಲ. ಹೀಗಿದ್ದರೂ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡ ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಆತನ ಸ್ಮರಣೆ ಮಾಡಿ ಕಂಬನಿಗೆರೆಯಿತು. ಎರಡು ವರ್ಷಗಳ ಹಿಂದೆ ಹ್ಯೂಸ್ ಶ್ರೀಲಂಕಾ ವಿರುದ್ಧ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿಯೇ ಆಸ್ಟ್ರೇಲಿಯಾ 5 ನೇ ಬಾರಿ ವಿಶ್ವಕಪ್ ಗೆದ್ದಿದೆ. ವಿಶ್ವಕಪ್ ಗೆದ್ದ ನಂತರ ಮಾತನಾಡಿದ ಆಸ್ಟ್ರೇಲಿಯಾ ತಂಡದ ನಾಯಕ ಮೈಕಲ್ ಕ್ಲಾರ್ಕ್, ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಸಾವಿಗೀಡಾದ ಹ್ಯೂಸ್‌ಗೆ ಈ ವಿಶ್ವಕಪ್ ಸಮರ್ಪಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಹ್ಯೂಸ್ ಸಾವಿಗೀಡಾಗಿ 123 ದಿನಗಳಾದ ನಂತರ ಆಸ್ಟ್ರೇಲಿಯಾ ವಿಶ್ವಕಪ್ ಗೆದ್ದಿದೆ.
ಸಹೋದರ... ನಾವು ನಿನಗಾಗಿ ಈ ಕಪ್ ಗೆದ್ದಿದ್ದೇವೆ. ಈ ಕಪ್ ಮತ್ತು ಈ ಗೆಲುವು ನಿನಗೆ ಸಮರ್ಪಿಸುತ್ತಿದ್ದೇವೆ. ವಿಶ್ವಕಪ್ ವೀಕ್ಷಿಸಿದವರಿಗೆಲ್ಲಾ ಗೊತ್ತಿದೆ, ನಾವು 16 ಮಂದಿ ಈ ವಿಶ್ವಕಪ್ ತಂಡದಲ್ಲಿದ್ದೇವೆ. ಎಲ್ಲರಿಗಿಂತ ಹೆಚ್ಚು ಉತ್ಸುಕರಾಗಿ ಹ್ಯೂಸ್ ಈ ಗೆಲುವನ್ನು ಕೊಂಡಾಡುತ್ತಿದ್ದರು. ಆದ್ದರಿಂದಲೇ ನಾವು ಆ ರಾತ್ರಿ ತುಂಬಾ ಸಂತೋಷದಿಂದ ಆಚರಿಸಲಿದ್ದೇವೆ ಎಂದು ಏಕದಿನ ಪಂದ್ಯಕ್ಕೆ ವಿದಾಯ ಹೇಳುತ್ತಿರುವ ನಾಯಕ ಮೈಕಲ್ ಕ್ಲಾಕ್ ಹೇಳಿದಾಗ ಗ್ಯಾಲರಿಯಲ್ಲಿದ್ದ ಜನರ ಕಣ್ಣಲ್ಲಿ ನೀರು ಜಿನುಗಿತು.
ಪ್ರಸ್ತುತ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿದಾಗ ಕ್ಲಾರ್ಕ್ ನನ್ನ ಎಡಕೈಯಲ್ಲಿ ಪಿ.ಹೆಚ್ ಎಂದು ಬರೆದಿದ್ದ ಬ್ಯಾಂಡ್‌ನ್ನು ಮುಟ್ಟಿ ತನ್ನ ಗೆಳೆಯನನ್ನು ಸ್ಮರಿಸಿದ್ದರು. 74 ರನ್ ಗಳಿಸಿ ಔಟಾದಾಗ ಆ ಬ್ಯಾಂಡ್‌ನ್ನು ಮುಟ್ಟಿಕೊಂಡೇ ಕ್ಲಾರ್ಕ್ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದ್ದರು.
ಕಳೆದ ವರ್ಷ ನವೆಂಬರ್‌ನಲ್ಲಿ ಹ್ಯೂಸ್ ನಿಧನರಾದ ನಂತರ ಕಪ್ಪು ಬಣ್ಣದ ಕೈಪಟ್ಟಿ ಧರಿಸಿಯೇ ಕ್ಲಾರ್ಕ್ ಆಟವಾಡುತ್ತಿದ್ದಾರೆ. ಆದಾಗ್ಯೂ, ಇನ್ನು ಮುಂದಿನ ಪಂದ್ಯಗಳಲ್ಲಿಯೂ ನಾನು ಈ ಕಪ್ಪು ಬಣ್ಣದ ಕೈಪಟ್ಟಿ ಧರಿಸಿಯೇ ಆಟವಾಡುತ್ತೇನೆ ಎಂದು ಕ್ಲಾರ್ಕ್ ಹೇಳಿದ್ದಾರೆ.
ಫಿಲ್ ಹ್ಯೂಸ್‌ನೊಂದಿಗೆ ಮೈಕಲ್ ಕ್ಲಾರ್ಕ್ ಉತ್ತಮ ಸ್ನೇಹ ಹೊಂದಿದ್ದರು ಎಂಬುದಕ್ಕೆ ಇದೇ ಸಾಕ್ಷಿ. ಕ್ಲಾರ್ಕ್ ಮನವಿ ಮಾಡಿದ್ದರಿಂದಲೇ ಕ್ರಿಕೆಟ್ ಆಸ್ಟ್ರೇಲಿಯಾ 64 ನಂಬರ್ ಜೆರ್ಸಿಯನ್ನು ಹೊರಗಿಟ್ಟಿತ್ತು. ಹ್ಯೂಸ್ ಸಾವಿಗೆ ಕಾರಣವಾದ ಬೌನ್ಸರ್ ಎಸೆದ ಶೋನ್ ಅಬೋಟ್ ಗೂ ಕ್ಲಾರ್ಕ್ ಸಹಾಯಹಸ್ತ ಚಾಚಿದ್ದರು. ತರಬೇತಿ ಪಂದ್ಯಗಳಲ್ಲಿ ನೀನು ಬೌಲಿಂಗ್ ಮಾಡಲು ತೊಡಗುವುದಾದರೆ ನಾನು ಬ್ಯಾಟಿಂಗ್ ಮಾಡಲು ಸಿದ್ಧನಿದ್ದೇನೆ ಎಂದು ಹೇಳುವ ಮೂಲಕ ಅಬೋಟ್‌ಗೂ ಕ್ಲಾರ್ಕ್ ಮನೋಧೈರ್ಯ ತುಂಬಿದ್ದರು.
Advertisement