ತವರಿನಲ್ಲಿ ಆರ್‍ಸಿಬಿ ತಾಕತ್ತಿಗೆ ಕೆಕೆಆರ್ ಸವಾಲು
ಬೆಂಗಳೂರು: ವರುಣನ ಅವಕೃಪೆಯಿಂದಾಗಿ ರಾಜಸ್ಥಾನ ರಾಯಲ್ಸ್ ವಿರುದ್ಧ ತವರಿನಲ್ಲಿ ನಡೆದ ತನ್ನ ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗೆಲವಿನ ಅವಕಾಶ ಕೈಜಾರಿ ಹೋಗಿತ್ತು.
ರಾಜಸ್ಥಾನ ವಿರುದ್ಧ ಮೊದಲು ಬ್ಯಾಟ್ ಮಾಡಿದ್ದ ಆರ್‍ಸಿಬಿ 200 ರನ್‍ಗಳ ಬೃಹತ್ ಮೊತ್ತ ಸಂಪಾದಿಸಿತ್ತು. ಈ ಮೊತ್ತ ನೋಡಿದರೆ, ಆತಿಥೇಯ ತಂಡಕ್ಕೆ ಗೆಲವು ನಿಶ್ಚಿತ ಎಂದೇ ಭಾವಿಸಲಾಗಿತ್ತು. ಆದರೆ, ಆರ್‍ಸಿಬಿ ಇನಿಂಗ್ಸ್ ಕೊನೆಗೊಳ್ಳುತ್ತಲೇ ಸುರಿಯಲಾರಂಭಿಸಿದ ಮಳೆರಾಯ ಮುಂದಿನ ಆಟ ನಡೆಯಲು ಅವಕಾಶ ನೀಡದೇ ಪಂದ್ಯ ರದ್ದಿಗೆ ಕಾರಣನಾದ. ಹಾಗಾಗಿ, ತವರಿನಲ್ಲಿ ಮೊದಲ ಜಯದ ನಿರೀಕ್ಷೆಯಲ್ಲಿದ್ದ ಆರ್‍ಸಿಬಿ ಕನಸಿಗೆ ಭಂಗ ಉಂಟಾಗಿತ್ತು.
ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತವರಿನಲ್ಲಿಯೇ ಮತ್ತೊಂದು ಸವಾಲಿಗೆ ಅಣಿಯಾಗುತ್ತಿದೆ. ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಬೆಂಗಳೂರು ತಂಡಕ್ಕೆ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಸವಾಲು ಎದುರಾಗಲಿದೆ. ಈವರೆಗೆ ತವರಿನಲ್ಲಿ ಆಡಿರುವ ಮೂರೂ ಪಂದ್ಯಗಳನ್ನು ಆರ್‍ಸಿಬಿ ಸೋತಿದೆ.
ರಾಜಸ್ಥಾನ ರಾಯಲ್ಸ್ ವಿರುದಟಛಿದ ಪಂದ್ಯ ಮಳೆಯ ಕಾರಣ ಅರ್ಧಕ್ಕೆ ರದ್ದುಗೊಂಡಿತು. ಈಗ ಕೋಲ್ಕತಾ ವಿರುದ್ಧವಾದರೂ ತನ್ನ ನೆಲದಲ್ಲಿ ಆರ್‍ಸಿಬಿ ಮೊದಲ ಜಯಘೋಷ ಮೊಳಗಿಸುವುದೇ ಎಂಬುದನ್ನು ಉತ್ಸುಕತೆಯಿಂದ ಕಾದು ನೋಡಬೇಕಾಗಿದೆ. ಆದರೆ, ಹೊರಸ್ಥಳಗಳಲ್ಲಿ ಆಡಿರುವ ಮೂರೂ ಪಂದ್ಯಗಳನ್ನು ಆರ್‍ಸಿಬಿ ಜಯಿಸಿದೆ. ಅದರಲ್ಲೂ ರಾಜಸ್ಥಾನ ವಿರುದ್ಧ ಅಹ್ಮದಾಬಾದ್‍ನಲ್ಲಿ ಮತ್ತು ದೆಹಲಿಯಲ್ಲಿ ಡೆಲ್ಲಿ ಡೇರ್‍ಡೆವಿಲ್ಸ್ ವಿರುದ್ಧ ಕ್ರಮವಾಗಿ ದಾಖಲಿಸಿರುವ ಸತತ ಎರಡು ಗೆಲವುಗಳು ವಿರಾಟ್ ಕೊಹ್ಲಿ ಸಾರಥ್ಯದ ಪಡೆಯಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ.
ಹಾಗಾಗಿ, ಕೋಲ್ಕತಾ ವಿರುದ್ಧ ವಿಜಯೋತ್ಸವ ಆಚರಿಸುವ ವಿಶ್ವಾಸದಲ್ಲಿ ಆರ್‍ಸಿಬಿ ಪಡೆ ಇದೆ. ಹಾಗೆಂದು ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಹಗುರವಾಗಿ ಕಾಣುವ ಹಾಗಿಲ್ಲ. ಕಳೆದ ಪಂದ್ಯದಲ್ಲಿ ಅದು ಎರಡು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಬಗ್ಗುಬಡಿದು ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದೆ. ಅಲ್ಲದೇ, ಈಗಾಗಲೇ ತನ್ನ ನೆಲದಲ್ಲಿಯೇ ಆಡಿದ್ದ ಮೊದಲ ಸುತ್ತಿನ ಮುಖಾಬಲದಲ್ಲಿ ಆರ್‍ಸಿಬಿ ಎದುರು ಸೋತಿದ್ದು, ಕೋಲ್ಕತಾ ಸಿಟ್ಟು ನೆತ್ತಿಗೇರುವಂತೆ ಮಾಡಿದೆ.
ಈಗ ಬೆಂಗಳೂರು ಪಡೆಯನ್ನು ಅದರದ್ದೇ ನೆಲದಲ್ಲಿ ಸೋಲಿಸಿ ಸೇಡು ತೀರಿಸಿಕೊಳ್ಳಲು ಗೌತಮ್ ಗಂಭೀರ್ ಸೇನೆ, ಹೊಂಚು ಹಾಕಿದೆ. ಹಾಗಾಗಿ ಆರ್‍ಸಿಬಿ ಆಟಗಾರರು ಎಚ್ಚರಿಕೆಯಿಂದಿರಬೇಕಾಗುತ್ತದೆ. ಈ ಮಧ್ಯೆ, ಕೆಕೆಆರ್ ತಂಡದಲ್ಲಿರುವ ರಾಬಿನ್ ಉತ್ತಪ್ಪ ಮತ್ತು ಮನೀಷ್ ಪಾಂಡೆ ಮೂಲತಃ ಕರ್ನಾಟಕದವರು. ಅವರಿಗೆ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಬಗ್ಗೆ ಚೆನ್ನಾಗಿ ಗೊತ್ತು. ಇದೇ ತಂಡದಲ್ಲಿರುವ ಸ್ಪಿನ್ನರ್ ಕೆ.ಸಿ. ಕಾರ್ಯಪ್ಪ ಸಹ ಕರ್ನಾಟಕದವರೇ. ಮುಖ್ಯವಾಗಿ ಆರ್‍ಸಿಬಿ ಬೌಲರ್‍ಗಳಿಗೆ ಉತ್ತಪ್ಪ ಮತ್ತು ಪಾಂಡೆ ದೊಡ್ಡ ಸವಾಲು ಎಂಬುದರಲ್ಲಿ ಎರಡು ಮಾತಿಲ್ಲ. ಅವರನ್ನು ಬೇಗನೆ ಔಟ್ ಮಾಡುವುದು ಬೆಂಗಳೂರು ತಂಡಕ್ಕೇ ಒಳಿತು.
ಒಟ್ಟಿನಲ್ಲಿ ಆರ್‍ಸಿಬಿ ಮತ್ತು ಕೆಕೆಆರ್ ನಡುವಿನ ಈ ಸಮರ ಹೆಚ್ಚು ಕುತೂಹಲದಾಯಕವೆನಿಸಿದೆ. ಈ ಪಂದ್ಯಕ್ಕೂ ಕೂಡ ಮಳೆಯ ಭೀತಿ ಇದೆ. ಆಟದ ವೇಳೆ ಮಳೆ ಸುರಿಯಲಾರಂಭಿಸಿದರೆ, ಪಂದ್ಯ ಪೂರ್ಣಗೊಳ್ಳುವುದು ಅನುಮಾನ. ಆದರೂ, ಮಳೆಯಿಂದ ಮೈದಾನ ರಕ್ಷಿಸಲು ಕೆಎಸ್‍ಸಿಎ, ಉತ್ತಮ ಸೌಲಭ್ಯವನ್ನು ಹೊಂದಿದೆ. ಅಂತೆಯೇ ಪಂದ್ಯಕ್ಕೆ ಮಳೆ ಅಡ್ಡಿಪಡಿಸದು ಎಂಬ ಭರವಸೆಯನ್ನು ಮೈದಾನದ ಸಿಬ್ಬಂದಿ ವ್ಯಕ್ತಪಡಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ