ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಹೈದರಾಬಾದ್‍ಗೆ ಸೋಲು

ಕಳಪೆ ಬ್ಯಾಟಿಂಗ್ ಪ್ರದರ್ಶನದ ಹಿನ್ನೆಲೆಯಲ್ಲಿ ಸನ್‍ರೈಸರ್ಸ್ ಹೈದರಾಬಾದ್ ತಂಡ, ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತಾ ನೈಟ್‍ರೈಡರ್ಸ್ ವಿರುದ್ಧ 35 ರನ್‍ಗಳ ಹೀನಾಯ ಸೋಲು ದಾಖಲಿಸಿತು.
ಕೋಲ್ಕತಾ ನೈಟ್ ರೈಡರ್ಸ್ ತಂಡ
ಕೋಲ್ಕತಾ ನೈಟ್ ರೈಡರ್ಸ್ ತಂಡ

ಕೋಲ್ಕತಾ: ಕಳಪೆ ಬ್ಯಾಟಿಂಗ್ ಪ್ರದರ್ಶನದ ಹಿನ್ನೆಲೆಯಲ್ಲಿ ಸನ್‍ರೈಸರ್ಸ್ ಹೈದರಾಬಾದ್ ತಂಡ, ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತಾ ನೈಟ್‍ರೈಡರ್ಸ್ ವಿರುದ್ಧ 35 ರನ್‍ಗಳ ಹೀನಾಯ ಸೋಲು ದಾಖಲಿಸಿತು.

ಮೊದಲು ಬ್ಯಾಟ್ ಮಾಡಿದ್ದ ಕೋಲ್ಕತಾ ತಂಡ, 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತ್ತು. ಈ ಮೊತ್ತ ಬೆನ್ನಟ್ಟಿದ ಹೈದರಾಬಾದ್ ತಂಡ, 20 ಓವರ್‍ಗಳಲ್ಲಿ 9 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಲಷ್ಟೇ ಶಕ್ತವಾಯಿತು. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಕೋಲ್ಕತಾ ನೈಟ್ ರೈಡರ್ಸ್ ತಂಡದ ಇನಿಂಗ್ಸ್ ಗೆ ಆರಂಭಿಕರಾದ ರಾಬಿನ್ ಉತ್ತಪ್ಪ ಹಾಗೂ ಗೌತಮ್ ಗಂಭೀರ್ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‍ಗೆ ಈ ಜೋಡಿ 55 ರನ್ ಪೇರಿಸಿತು.

7ನೇ ಓವರ್‍ನಲ್ಲಿ ಗಂಭೀರ್ ಔಟಾಗುವುದರೊಂದಿಗೆ ಈ ಜೋಡಿ ಮುರಿದರೂ ನಂತರ ಬಂದ ಮನೀಶ್ ಪಾಂಡೆ, ಉತ್ತಮ ಪ್ರದರ್ಶನ ನೀಡಿ ಉತ್ತಮ ಕಾಣಿಕೆ ನೀಡಿದರು. ಆದರೆ, ತಂಡದ ಮೊತ್ತ 81 ರನ್ ಆಗಿದ್ದಾಗ ಉತ್ತಪ್ಪ ವಿಕೆಟ್ ಉರುಳಿದರೆ, ಅವರ ನಂತರ ಬಂದಿದ್ದ ಆಂಡ್ರೆ ರಸೆಲ್ ಸಹ ಹೆಚ್ಚು ಆಡದೇ ಬೇಗನೇ ನಿರ್ಗಮಿಸಿದರು. ಆಗ, ಡಾಶ್ಕೆಟ್ ಜೊತೆ ಸೇರಿದ ಮನೀಶ್ ಪಾಂಡೆ, ತಂಡದ ಮೊತ್ತವನ್ನು 100 ರನ್ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಆದರೆ, ತಂಡದ ಮೊತ್ತ 105 ರನ್ ಆಗಿದ್ದಾಗ ಅವರು ನಿರ್ಗಮಿಸಿದರು. ಆನಂತರ, ಕೆಲವೇ ನಿಮಿಷಗಳ ಅಂತರದಲ್ಲಿ ಡಾಶ್ಕೆಟ್ ಸಹ ವಿಕೆಟ್ ಒಪ್ಪಿಸಿದರು.

ಈ ಹಂತದಲ್ಲಿ ಕೋಲ್ಕತಾ ತಂಡ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಆವರಿಸಿತ್ತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಯೂಸುಫ್ ಪಠಾಣ್ ಇದಕ್ಕೆ ಅವಕಾಶ ನೀಡಲಿಲ್ಲ. ಮನೀಶ್ ವಿಕೆಟ್ ಪತನದ ನಂತರ ಕ್ರೀಸ್‍ಗೆ ಕಾಲಿಟ್ಟ ಅವರು ಬಿರುಸಿನ ಬ್ಯಾಟಿಂಗ್‍ನಿಂದ ಅಬ್ಬರಿಸಿದರು. ಆದರೆ, ಅವರಿಗೆ ಉತ್ತಮ ಸಾಥ್ ಸಿಗಲಿಲ್ಲ. ಕ್ರೀಸ್‍ನ ಒಂದು ತುದಿಯಲ್ಲಿ ಯೂಸುಫ್ ಆರ್ಭಟಿಸುತ್ತಿದ್ದರೆ, ಮತ್ತೊಂದು ತುದಿಯಲ್ಲಿ ವಿಕೆಟ್‍ಗಳು ಉರುಳುತ್ತಾ ಸಾಗಿದವು. ಆದರೂ, ಧೃತಿಗೆಡದ ಯೂಸುಫ್ 19 ಎಸೆತಗಳಲ್ಲಿ 4 ಬೌಂಡರಿ ಸೇರಿದಂತೆ 30 ರನ್ ಸಿಡಿಸಿ ಕೋಲ್ಕತಾ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.

ಸನ್‍ರೈಸರ್ಸ್ ಪರ ಭುವನೇಶ್ವರ್ ಅತಿ ದುಬಾರಿ ಬೌಲರ್ (4 ಓವರ್, 44 ರನ್) ಎನಿಸಿದರಾದರೂ, 2 ವಿಕೆಟ್ ಗಳಿಸಿದರು. ಕರ್ಣ್ ಶರ್ಮ ಸಹ 2 ವಿಕೆಟ್ ಪಡೆದರು. ಹೆನ್ರಿಕ್ಸ್ ಹಾಗೂ ಬಿಪುಲ್ ತಲಾ ಒಂದು ವಿಕೆಟ್ ಗಳಿಸಿದರು. ಕುಸಿದ ಹೈದರಾಬಾದ್: ಕೋಲ್ಕತಾ ನೀಡಿದ್ದ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಸನ್ ರೈಸರ್ಸ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕರಾದ ಡೇವಿಡ್ ವಾರ್ನರ್ ಶಿಖರ್ ಧವನ್ ಬೇಗನೇ ವಿಕೆಟ್ ಒಪ್ಪಿಸಿದರು. ಆನಂತರ ಬಂದವರಲ್ಲಿ, ಮಧ್ಯಮ ಕ್ರಮಾಂಕದ ಹೆನ್ರಿಕ್ಸ್ ಬಿಟ್ಟರೆ ಮಿಕ್ಕೆಲ್ಲಾ ಬ್ಯಾಟ್ಸ್ ಮನ್ ಗಳು ಕೇವಲ ಒಂದಂಕಿ ರನ್ ಗಳಿಸಿ ಹೊರನಡೆದಿದ್ದು ತಂಡಕ್ಕೆ ಭಾರೀ ಹಿನ್ನೆಡೆ ತಂದಿತು.

ಇದರ ಹೊರತಾಗಿಯೂ ದಿಟ್ಟತನದ ಬ್ಯಾಟಿಂಗ್ ಪ್ರದರ್ಶಿಸಿದ ಹೆನ್ರಿಕ್ಸ್ (44 ರನ್, 33 ಎಸೆತ, 2 ಬೌಂಡರಿ, 2 ಸಿಕ್ಸರ್) ತಂಡದ ಗೆಲವಿಗಾಗಿ ಶ್ರಮಿಸಿದರು. ಆದರೆ, 15ನೇ ಓವರ್‍ನಲ್ಲಿ ಬ್ರಾಡ್ ಹಾಗ್ ಅವರ ಎಸೆತದಲ್ಲಿ ಪಾಂಡೆಗೆ ಕ್ಯಾಚ್ ನೀಡಿ ಹೆನ್ರಿಕ್ಸ್ ಹೊರನಡೆದರು. ಆದರೆ, 8ನೇ ವಿಕೆಟ್‍ಗೆ ಪ್ರವೀಣ್ ಕುಮಾರ್ ಜೊತೆಯಾದ ಕರ್ಣ್ ಶರ್ಮಾ 18ನೇ ಓವರ್‍ನಲ್ಲಿ ಸತತ 3 ಸಿಕ್ಸರ್ ಸಿಡಿಸಿ ಮಿಂಚು ಹರಿಸಿದರಾದರೂ, ಅದೇ ಓವರ್‍ನ ಕೊನೆಯ ಎಸೆತದಲ್ಲಿ ದೊಡ್ಡ ಹೊಡೆತದಲ್ಲಿ ಕೈ ಹಾಕಿ ಲಾಂಗ್ ಆನ್‍ನಲ್ಲಿ ಕ್ಷೇತ್ರಣೆ ಮಾಡುತ್ತಿದ್ದ ಸೂರ್ಯಕುಮಾರ್ ಯಾದವ್ ಗೆ ಕ್ಯಾಚ್ ನೀಡಿ ಹೊರನಡೆದರು.

ಕೊನೆ ಹಂತದಲ್ಲಿ ಭುವನೇಶ್ವರ್ ಕುಮಾರ್ ಆರ್ಭಟಿಸಿದರೂ, ಅದು ಗೆಲವನ್ನು ತಂದುಕೊಡಲಿಲ್ಲ. ಕೋಲ್ಕತಾ ಪರ ಬೌಲರ್‍ಗಳಲ್ಲಿ 4 ಓವರ್ ಮಾಡಿ, 17 ರನ್ ನೀಡಿ ಶಿಖರ್ ಧವನ್ ಹಾಗೂ ಕ್ರೀಸ್‍ನಲ್ಲಿ ಅಪಾಯಕಾರಿಯಾಗಿ ಪರಿಣಮಿಸಿದ ಹೆನ್ರಿಕ್ಸ್ ವಿಕೆಟ್ ಪಡೆದ ಬ್ರಾಡ್ ಹಾಗ್ ಆ ತಂಡದ ಪರ ಅತ್ಯಂತ ಯಶಸ್ವೀ ಬೌಲರ್ ಎನಿಸಿದರು. ಉಮೇಶ್ ಯಾದವ್ ಸಹ 2 ವಿಕೆಟ್ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com