
ನವದೆಹಲಿ: ತಾವೇ ಸೃಷ್ಟಿಸಿ, ಘೋಷಿಸಿದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಯ ಕೀರ್ತಿಗೆ ಚ್ಯುತಿ ತರಲು ಶತಾಯಗತಾಯ ಪ್ರಯತ್ನಿಸುತ್ತಿರುವ ಐಪಿಎಲ್‍ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ಸೋಮವಾರ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಬಾರಿಯ ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‍ಕೆ) ತಂಡದ ನಾಲ್ವರು ಆಟಗಾರರು ಫಿಕ್ಸಿಂಗ್‍ನಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಈ ಎಲ್ಲಾ ಸಂದೇಶಗಳಲ್ಲಿ ಐಪಿಎಲ್ ವಿರುದ್ಧ ಪುಂಖಾನುಪುಂಖವಾಗಿ ಆರೋಪ ಮಾಡಿದ್ದಾರೆ. ಬೆಟ್ಟಿಂಗ್‍ನಲ್ಲಿ ಭಾಗಿಯಾಗಿರುವ ಸಿಎಸ್‍ಕೆ ತಂಡದ ನಾಲ್ವರು ಆಟಗಾರರಲ್ಲಿ ಇಬ್ಬರು ಭಾರತೀಯರಾದರೆ, ಮತ್ತಿಬ್ಬರು ವಿದೇಶಿಯರು. ಅಲ್ಲದೆ, ಪ್ರತಿ
ಪಂದ್ಯದ ಮೇಲೂ ಸಾವಿರಾರು ಕೋಟಿ ರು. ಗಳಷ್ಟು ಬೆಟ್ಟಿಂಗ್ ನಡೆಯುತ್ತಿದೆ. ಪಂದ್ಯವೊಂದರ ಮೇಲೆ ಏನಿಲ್ಲವೆಂದರೂ, ಕನಿಷ್ಠ 9ರಿಂದ 10 ಸಾವಿರ ಕೋಟಿ ರು. ಹಣತೊಡಗಿಸಲಾಗುತ್ತದೆ. ಇದು ಗೊತ್ತಿದ್ದರೂ, ಬಿಸಿಸಿಐ, ಐಪಿಎಲ್ ಹಾಗೂ ಐಸಿಸಿ ಪದಾಧಿಕಾರಿಗಳ ಕಚೇರಿಗಳಲ್ಲಿನ ಅಧಿಕಾರಿಗಳು ಎಂದೆನಿಸಿಕೊಂಡಿರುವ
`ಜೋಕರ್'ಗಳು ಜನರನ್ನು ಮರುಳು ಮಾಡುತ್ತಾ ಅವರನ್ನು ಭ್ರಮಾಲೋಕದಲ್ಲೇ ಸುತ್ತಾಡಿಸುತ್ತಿದ್ದಾರೆ ಎಂದು ಮೋದಿ ಪರೋಕ್ಷವಾಗಿ ಶ್ರೀನಿವಾಸನ್ ವಿರುದ್ಧ ಗುಡುಗಿದ್ದಾರೆ. ಇದರ ಜೊತೆಗೆ ಭಾರತೀಯರಿಗೆ ಕರೆ ನೀಡಿರುವ ಅವರು,ಇಂಥ ಕಣ್ಣಿಗೆ ಮಣ್ಣೆರೆಚುವ ತಂತ್ರಗಳಿಗೆ ಒಳಗಾಗದೇ ಕ್ರಿಕೆಟ್ ಪ್ರೇಮಿಗಳು ಇಂಥ ಮೋಸದಾಟದ ವಿರುದ್ಧ ತಿರುಗಿಬೀಳಬೇಕು.ಐಪಿಎಲ್ ಅನ್ನು ಸಾರಾಸಗಟಾಗಿ ತಿರಸ್ಕರಿಸಬೇಕು ಎಂದಿದ್ದಾರೆ.
ಪಾಕ್ ಬುಕ್ಕಿಗಳ ಬಂಧನ
ಖಚಿತ ಮಾಹಿತಿ ಮೇರೆಗೆ ಲಾಹೋರ್‍ನ ಗಾಜಿಯಾಬಾದ್ ಪ್ರಾಂತ್ಯದ ಮನೆಯೊಂದರ ಮೇಲೆ ಪಾಕಿಸ್ತಾನ ಪೊಲೀಸರು ದಾಳಿ ನಡೆಸಿ, ಐಪಿಎಲ್ ಬೆಟ್ಟಿಂಗ್‍ನಲ್ಲಿ ತೊಡಗಿದ್ದ ಆರು ಮಂದಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಇಲಾಖೆಯ ವಕ್ತಾರ ನಿಯಾಬ್ ಹೈದರ್, `ಐಪಿಎಲ್ ಬೆಟ್ಟಿಂಗ್‍ನಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬಂಧಿಸ ಲಾಗಿರುವ ಆರು ಮಂದಿಯ ಮೇಲೆ ಪ್ರಕರಣ ದಾಖಲಾಗಿದೆ. ಬಂಧಿತ ರಿಂದ ಬೆಟ್ಟಿಂಗ್‍ನಲ್ಲಿ
ತೊಡಗಿಸ ಲಾಗಿದ್ದ ಹಣ, ಏಳು ಮೊಬೈಲ್ ಫೋನ್‍ಗಳು, ಲ್ಯಾಪ್‍ಟಾಪ್ ಹಾಗೂ ಬೆಟ್ಟಿಂಗ್ ಗಿರಾಕಿಗಳ ವಿವರಗಳುಳ್ಳ ರಿಜಿಸ್ಟರ್ ವಶಪಡಿಸಿಕೊಳ್ಳಲಾಗಿದೆ ಎಂದರು.
ಆರೋಪಿಗಳು ಗುಜರಾತ್‍ಗೆ
ಭಾನುವಾರ ದೆಹಲಿಯ ವಿವಿಧೆಡೆ ನಡೆದಿದ್ದ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ದಾಳಿಯಲ್ಲಿ ಬಂಧನಕ್ಕೊಳಗಾಗಿದ್ದ ರಿತೇಶ್ ಬನ್ಸಾಲ್ ಹಾಗೂ ಅಂಕುಶ್ ಬನ್ಸಾಲ್ ಎಂಬುವರನ್ನು ಹೆಚ್ಚಿನ ತನಿಖೆಗಾಗಿ ಗುಜರಾತ್‍ನ ಅಹಮದಾಬಾದ್‍ಗೆ
ಕರೆದೊಯ್ಯಲು ನ್ಯಾಯಾಲಯ ಇಡಿ ಅಧಿಕಾರಿಗಳಿಗೆ ಅನುಮತಿ ನೀಡಿದೆ.
Advertisement