
ಮಡಗಾಂವ್: ಪಂದ್ಯದ ದ್ವಿತೀಯಾರ್ಧದಲ್ಲಿ ಗೋಲು ದಾಖಲಿಸಿ ಮುನ್ನಡೆ ಸಾಧಿಸಿದ್ದರೂ, ನಂತರ ಎದುರಾಳಿ ತಂಡಕ್ಕೆ ಗೋಲು ದಾಖಲಿಸುವ ಅವಕಾಶ ನೀಡಿದ ಬೆಂಗಳೂರು
ಎಫ್ ಸಿ, ಐ ಲೀಗ್ ಫುಟ್ಬಾಲ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಕೇವಲ ಡ್ರಾ ಫಲಿತಾಂಶಕ್ಕೆ ತೃಪ್ತಿಪಟ್ಟಿದೆ.
ಶನಿವಾರ ಫಟೋರ್ಡಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಎಫ್ ಸಿ 1-1 ಗೋಲುಗಳ ಅಂತರದಲ್ಲಿ ಡೆಂಪೊ ಎಸ್‍ಸಿ ವಿರುದ್ಧ ಡ್ರಾ ಸಾಧಿಸಿತು.
ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳಲು ಗೆಲ್ಲಲೇಬೇಕಾದ ಒತ್ತಡದಲ್ಲಿದ್ದ ಬೆಂಗಳೂರು ಎಫ್ ಸಿ, ಕೇವಲ ಫಲಿತಾಂಶದಿಂದ 1 ಸಂಪಾದಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ 36 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಇನ್ನು 38 ಅಂಕಗಳನ್ನು ಪಡೆದಿರುವ ಮೋಹನ್ ಬಗಾನ್ ತಂಡ ಅಗ್ರಸ್ಥಾನ ಪಡೆಯಲಿದೆ.
ಪಂದ್ಯದ ಆರಂಭದಿಂದ ಉಭಯ ತಂಡಗಳು ಪರಸ್ಪರ ಜಿದ್ದಾಜಿದ್ದಿನ ಹೋರಾಟ ನಡೆಸಿದರೂ ಮೊದಲ ಅವಧಿಯಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಎರಡನೇ ಅವಧಿಯಲ್ಲಿ ಬೆಂಗಳೂರು ಎಫ್ ಸಿ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಈ ವೇಳೆ 65ನೇ ನಿಮಿಷದಲ್ಲಿ ಬಿಎಫ್ ಸಿ ತಂಡದ ಪ್ರಮುಖ ಸ್ಟ್ರೈಕರ್ ರಾಬಿನ್ ಸಿಂಗ್ ಗೋಲು ದಾಖಲಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು.
ಈ ವೇಳೆ ಬಿಎಫ್ ಸಿ ಪಾಳಯದಲ್ಲಿ ಗೆಲವಿನ ಉತ್ಸಾಹ ಮೂಡಿತ್ತು. ಆದರೆ 77ನೇ ನಿಮಿಷದಲ್ಲಿ ಮರು ಹೋರಾಟ ನಡೆಸಿದ ಡೆಂಪೊ, ಬಿಎಫ್ ಸಿ ತಂಡದ ಆಸೆಗೆ ತಣ್ಣಿರೆರಚಿತು. ಈ ವೇಳೆ ದೇಸಾಯಿ ಅವರಿಂದ ಪಾಸ್ ಪಡೆದ ರಾಯ್ ಚೆಂಡನ್ನು ಗೋಲಿನತ್ತ ಸಾಗಿಸಿದರು. ನಂತರ ಬಿಎಫ್ ಸಿ ಸಾಕಷ್ಟು ಪ್ರಯತ್ನ ನಡೆಸಿದರೂ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ.
ಈ ಪಂದ್ಯದಲ್ಲಿ ಬಿಎಫ್ ಸಿ ಡ್ರಾ ಸಾಧಿಸಿರುವ ಹಿನ್ನೆಲೆಯಲ್ಲಿ ಮೇ 31ರಂದು ಬೆಂಗಳೂರಿನಲ್ಲಿ ನಡೆಯಲಿರುವ ಮೋಹನ್ ಬಗಾನ್ ವಿರುದ್ಧದ ಅಂತಿಮ ಪಂದ್ಯದಲ್ಲಿ ಗೆಲವು ದಾಖಲಿಸಲೇಬೇಕಾದ ಅಗತ್ಯದಲ್ಲಿದೆ.
Advertisement