
ಕೋಲ್ಕತಾ: ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ತಂಡವನ್ನು ದಕ್ಷವಾಗಿ ಮುನ್ನಡೆಸಿ ಕಪ್ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಸಚಿನ್ ತೆಂಡೂಲ್ಕರ್ ಹಾಡಿ ಹೊಗಳಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಒಬ್ಬ ನಾಯಕನಾಗಿ ಬೆಳೆದಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾಗಿನ ರೋಹಿತ್ ಗೂ, ಈ ವರ್ಷ ಆ ತಂಡವನ್ನು ಮುನ್ನಡೆಸಿದ ರೋಹಿತ್ ಗೂ ಸಾಕಷ್ಟು ವ್ಯತ್ಯಾಸಗಳಿವೆ. ಎಂದಿರುವ ಸಚಿನ್ ಇಂದು ರೋಹಿತ್ ಒಬ್ಬ ದಕ್ಷ ನಾಯಕನಾಗಿದ್ದಾರೆ. ದೃಢ ಆತ್ಮ ವಿಶ್ವಾಸ ಹೊಂದಿದವರಾಗಿದ್ದಾರೆ. ಈ ಹಂತಕ್ಕೆ ಬಂದು ನಿಲ್ಲಲು ಅವರು ಸಾಕಷ್ಟು ಏರಿಳಿತಗಳನ್ನು ಕಂಡಿದ್ದು, ಹಲವಾರು ಸವಾಲುಗಳನ್ನು ಎದುರಿಸಿದ್ದಾರೆ. ಯಾವುದೇ ಆಟಗಾರನಾಗಲಿ ಆತ ಸವಾಲುಗಳನ್ನು ಎದುರಿಸಿ ಅವುಗಳನ್ನು ಮೆಟ್ಟಿ ನಿಂತಾಗಲಷ್ಟೇ ಆತನೊಬ್ಬ ಸಮಚಿತ್ತದ ಕ್ರಿಕೆಟಿಗನಾಗಲು ಸಾಧ್ಯ ಎಂದಿದ್ದಾರೆ.
ಡ್ರೆಸ್ಸಿಂಗ್ ರೂಮಿನಲ್ಲಿ ಮಾಡಲಾಗುವ ಯಾವುದೇ ಕಾರ್ಯತಂತ್ರಗಳನ್ನು ಸಮರ್ಥವಾಗಿ ಅನುಷ್ಠಾನಗೊಳಿಸುವುದು ನಾಯಕನ ಕಾರ್ಯಕ್ಷಮತೆಗೆ ಬಿಟ್ಟ ವಿಚಾರ ಎಂದ ತೆಂಡೂಲ್ಕರ್, ಈ ನಿಟ್ಟಿನಲ್ಲಿ ರೋಹಿತ್ ಒಬ್ಬ ಒಳ್ಳೆಯ ನಾಯಕ ಎಂದರು. ತಂಡದ ಸಭೆಗಳಲ್ಲಾಗಲೀ, ಡ್ರೆಸ್ಸಿಂಗ್ ರೂಮ್ ಗಳಲ್ಲಾಗಲೀ ನಾವು ಯಾವ ನಿರ್ಧಾರಗಳನ್ನು ಕೈಗೊಂಡರೂ ಆ ನಿರ್ಧಾರಗಳನ್ನು ಚಾಚೂ ತಪ್ಪದೇ ರೋಹಿತ್ ಮೈದಾನದಲ್ಲಿ ಅನುಷ್ಠಾನಗೊಳಿಸುತ್ತಿದ್ದರು. ಇದು ರೋಹಿತ್ ಅವರ ಸಮರ್ಥ ನಾಯಕತ್ವಕ್ಕೆ ಸಾಕ್ಷಿ ಎಂದು ಅವರು ತಿಳಿಸಿದ್ದಾರೆ.
ಟೂರ್ನಿಯ ಆರಂಭದಲ್ಲಿ ಸತತ ನಾಲ್ಕು ಪಂದ್ಯಗಳನ್ನು ಸೋತರೂ ಕಪ್ ಗೆಲ್ಲುವಲ್ಲಿ ಯಶಸ್ವಿಸಾಗಿದ್ದರ ಬಗ್ಗೆ ಮಾತನಾಡಿದ ಅವರು, ಯಾವುದೇ ಟೂರ್ನಿಯನ್ನಾಗಲೀ ಯಾವ ರೀತಿ ಆರಂಭಿಸಿದ್ದೇವೆ ಎನ್ನುವುದು ಮುಖ್ಯವಲ್ಲ ಎಂದರು.
Advertisement