
ಜೂರಿಚ್(ಸ್ವಿಜರ್ಲೆಂಡ್): ಜಗತ್ತಿನ ಪ್ರತಿಷ್ಠಿತ ಕ್ರೀಡಾ ಸಂಸ್ಥೆಗಳಲ್ಲೊಂದಾದ ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ(ಫಿಫಾ) ಮೇಲೆ ಈಗ ಭ್ರಷ್ಟಾಚಾರದ ಕರಿನೆರಳು ಆವರಿಸಿದೆ.
ಲ್ಯಾಟಿನ್ ಅಮೆರಿಕದಲ್ಲಿ ನಡೆದ ಸೂಪರ್ ಸಾಕರ್ ಫುಟ್ಬಾಲ್ ಪಂದ್ಯಾವಳಿಗಳಿಗೆ ಸಂಬಂಧಿಸಿದಂತೆ 1990ರಿಂದ ಈವರೆಗೆ ಸುಮಾರು ರು. 639 ಕೋಟಿಯಷ್ಟು (100 ಮಿಲಿಯನ್ ಅಮೆರಿಕನ್ ಡಾಲರ್) ಅವ್ಯವಹಾರ ನಡೆಸಿರುವ ಆರೋಪಗಳು ಕೇಳಿಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ಬುಧವಾರ ಸುಮಾರು ಆರು ಮಂದಿ ಫಿಫಾ ಅಧಿಕಾರಿಗಳ ಬಂಧನವಾಗಿದೆ. ಎಫ್ ಬಿಐ ತನಿಖಾ ವರದಿಯ ಆಧಾರದ ಮೇಲೆ ಅಮೆರಿಕ ಸರ್ಕಾರದ ಮನವಿಯಂತೆ, ಫಿಫಾ ಅಧಿಕಾರಿಗಳನ್ನು ಬಂಧಿಸಲಾಗಿದೆ ಎಂದು ಸ್ವಿಡ್ಜರ್ಲೆಂಡ್ ಅಧಿಕಾರಿಗಳು ತಿಳಿಸಿದ್ದಾರೆಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಏನಿದು ಪ್ರಕರಣ ?
ಲ್ಯಾಟಿನ್ ಅಮೆರಿಕದಲ್ಲಿ 1990ರಿಂದ ಈವರೆಗೆ ನಡೆದಿದ್ದ ಸೂಪರ್ ಸಾಕರ್ ಪಂದ್ಯಾವಳಿಗಳಿಗೆ ಸಂಬಂಧಿಸಿದಂತೆ ಪ್ರಾಯೋಜಕತ್ವ, ಪ್ರಚಾರ, ನೇರಪ್ರಸಾರ ಹಕ್ಕುಗಳ ಮಾರಾಟ ಮುಂತಾದ ಹಲವಾರು ಪ್ರಕ್ರಿಯೆಗಳಲ್ಲಿ ಫಿಫಾ ಅಧಿಕಾರಿಗಳು ಭಾರಿ ಪ್ರಮಾಣದ ಲಂಚ ಹಾಗೂ ಕಿಕ್‍ಬ್ಯಾಕ್ ಗಳನ್ನು ಪಡೆದಿರುವ ಆರೋಪವಿದೆ. ಇದಲ್ಲದೆ, 2018 ಹಾಗೂ 2022ರ ಫಿಫಾ ವಿಶ್ವಕಪ್ ಪಂದ್ಯಾವಳಿಗಳ ಆತಿಥ್ಯವನ್ನು ಕ್ರಮವಾಗಿ ರಷ್ಯಾ ಹಾಗೂ ಕತಾರ್‍ಗೆ ನೀಡಲಾಗಿದ್ದು, ಇದರ ಹಿಂದೆಯೂ ದೊಡ್ಡ ಪ್ರಮಾಣದ ಹಣದ ಲಾಬಿ ನಡೆಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಇವುಗಳ ಬಗ್ಗೆ ಅಮೆರಿಕದ ತನಿಖಾ ಸಂಸ್ಥೆ ಎಫ್ ಬಿಐ ತನಿಖೆ ನಡೆಸಿ, ಅಮೆರಿಕ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಅದರಲ್ಲಿ ಸುಮಾರು 14 ವ್ಯಕ್ತಿಗಳನ್ನು ದೋಷಿಗಳೆಂದು ಹೆಸರಿಸಲಾಗದೆ. ಇವರಲ್ಲಿ ಕೆಲವರು ಫಿಫಾ ಅಧಿಕಾರಿಗಳಾಗಿದ್ದಾರೆ, ಮತ್ತೆ ಕೆಲವರು ಮಾಜಿ ಅಧಿಕಾರಿಗಳು.
ಚುನಾವಣೆ ಹೊಸ್ತಿಲಲ್ಲೇ ಕಂಟಕ
ಇದೇ ಶುಕ್ರವಾರ ನಡೆಯಬೇಕಿದ್ದ ಫಿಫಾ ವಾರ್ಷಿಕ ಸಭೆಯಲ್ಲಿ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಬೇಕಿತ್ತು. ಅಧ್ಯಕ್ಷ ಸೆಪ್ ಬ್ಲಾಟರ್ ಅವರ ಅಧಿಕಾರಾವಧಿ ಇದೇ ವರ್ಷ ಕೊನೆಗೊಳ್ಳಲಿರುವ ಹಿನ್ನೆಲೆಯಲ್ಲಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿತ್ತು. ಇದರ ಜತೆಗೆ, 2002 ರಿಂದ ಈವರೆಗೆ 3 ನಾಲ್ಕು ಅವಧಿಯವರೆಗೆ ಅಧ್ಯಕ್ಷರಾಗಿ ಮುಂದುವರಿದಿರುವ ಸೆಪ್ ಬ್ಲಾಟರ್ ಅವರೇ ಮತ್ತೊಂದು ಅವಧಿಗೆ ಚುನಾವಣೆಗೆ ನಿಲ್ಲಲು ಸಿದ್ಧರಾಗಿದ್ದರು. ಇದು ಅವರ ವಿರೋಧಿಗಳಿಗೆ ಸವಾಲಾಗಿತ್ತು. ಹಾಗಾಗಿ, ಶುಕ್ರವಾರ ನಡೆಯಬೇಕಿದ್ದ ಅಧ್ಯಕ್ಷೀಯ ಚುನಾವಣೆ ತೀವ್ರ ತುರುಸಿನ ಸ್ಪರ್ಧೆಯಾಗಿ ಮಾರ್ಪಡುವ ಸಂಭವವಿತ್ತು.
ಸ್ಪಷ್ಟನೆ
ಫಿಫಾ ಅಧಿಕಾರಿಗಳ ಬಂಧನವಾದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿರುವ ಫಿಫಾದ ವಕ್ತಾರ ಗ್ರೆಗೊರಿಯೊ, ಹಾಲಿ ಅಧ್ಯಕ್ಷ ಬ್ಲಾಟರ್ ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ. 2018, 2022ರ ಫಿಫಾ ವಿಶ್ವಕಪ್ ಪಂದ್ಯಾವಳಿಗಳಿಗೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ. ಪೂರ್ವ ನಿರ್ಧಾರದಂತೆ ಅಧ್ಯಕ್ಷಗಿರಿಗೆ ಚುನಾವಣೆ ನಡೆಯುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಬಂಧಿತರ್ಯಾರು?
ಬಂಧಿತರಾಗಿರುವ ಫಿಫಾ ಅಧಿಕಾರಿಗಳ ಪೈಕಿ, ಸಂಸ್ಥೆಯ ಉಪಾಧ್ಯಕ್ಷರಾದ ಜೆಫ್ರಿ ವೆಬ್, ಯೂಜಿನಿಯೊ ಫಿಗುರೆಡೂ, ಕಾರ್ಯಕಾರಣಿ ಸದಸ್ಯರಾದ ಎಡುರಾಡೊ ಲಿ, ಜ್ಯಾಕ್ ವಾರ್ನರ್, ನಿಕೋಲಸ್ ಲಿಯೋಸ್, ಅಭಿವೃದ್ಧಿ ಅಧಿಕಾರಿ ಜುಲಿಯೊ ರೊಕಾ, ಫಿಫಾದ ಅಂಗಸಂಸ್ಥೆಯಾದ ಕಾನ್‍ಕಕಾಫ್ ನ ಅಧ್ಯಕ್ಷ ಕೋಸ್ಟಾಸ್ ಟಕ್ಕಾಸ್, ವೆನಿಂಜುವೆಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ರಾಫೆಲ್, ಆಯೋಜನಾ ಸಮಿತಿ ಅಧ್ಯಕ್ಷ ಜೋಸ್ ಮಾರಿಯಾ ಮರಿನ್, ಮಾರ್ಕೆಟಿಂಗ್ ವಿಭಾಗದ ಅಲೆಜಾಂಡ್ರೊ ಬುರ್ಜಾಕೊ, ಆರೋನ್ ಡೇವಿಡ್ಸನ್, ಹುಗೋ ಹಾಗೂ ಮ್ಯಾಯರಾಯಿನೊ ಜಿಂಕಿಸ್ ಅವರು ಬಂಧನಕ್ಕೊಳಗಾಗಿದ್ದಾರೆ.
Advertisement