ಸೈನಾ ಭಾರತದ ಏಕೈಕ ಭರವಸೆ

ವಿಶ್ವದ ನಂಬರ್ ಒನ್ ಆಟಗಾರ್ತಿ ಸೈನಾ ನೆಹ್ವಾಲ್ ತಮ್ಮ ಉತ್ತಮ ಪ್ರದರ್ಶನ ಮುಂದುವರಿಸಿದ್ದು, ಆಸ್ಟ್ರೇಲಿಯಾ ಓಪನ್ ಬ್ಯಾಡ್ಮಿಂಟನ್ ಸೂಪರ್ ಸೀರೀಸ್‍ನಲ್ಲಿ ಕ್ವಾರ್ಟರ್...
ಸೈನಾ ನೆಹ್ವಾಲ್
ಸೈನಾ ನೆಹ್ವಾಲ್

ಸಿಡ್ನಿ: ವಿಶ್ವದ ನಂಬರ್ ಒನ್ ಆಟಗಾರ್ತಿ ಸೈನಾ ನೆಹ್ವಾಲ್ ತಮ್ಮ ಉತ್ತಮ ಪ್ರದರ್ಶನ ಮುಂದುವರಿಸಿದ್ದು, ಆಸ್ಟ್ರೇಲಿಯಾ ಓಪನ್ ಬ್ಯಾಡ್ಮಿಂಟನ್ ಸೂಪರ್ ಸೀರೀಸ್‍ನಲ್ಲಿ ಕ್ವಾರ್ಟರ್ ಫೈನಲ್ ಸುತ್ತಿಗೆ ಪ್ರವೇಶಿಸಿದ್ದಾರೆ.

ಈ ಮೂಲಕ, ಟೂರ್ನಿಯಲ್ಲಿ ಸೈನಾ ಭಾರತಕ್ಕೆ ಪದಕ ತರಬಹುದಾದ ಏಕೈಕ ಆಶಾಕಿರಣವಾಗಿದ್ದಾರೆ. ಭರವಸೆಯ ಆಟಗಾರ ಕೆ.ಶ್ರೀಕಾಂತ್ 2ನೇ ಸುತ್ತಿನಲ್ಲೇ ತಮ್ಮ ಹೋರಾಟ ಅಂತ್ಯಗೊಳಿಸಿದ್ದಾರೆ. ಮಹಿಳೆಯರ ಡಬಲ್ಸ್‍ನಲ್ಲೂ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಸೋಲು ಅನುಭವಿಸಿದ್ದಾರೆ. ಮತ್ತೊಬ್ಬ ಪ್ರಮುಖ ಆಟಗಾರ್ತಿ ಪಿ.ವಿ. ಸಿಂಧು ಅವರು, ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲೇ ಸೋತು ಟೂರ್ನಿಯಿಂದ ಹೊರನಡೆದಿದ್ದಾರೆ.

ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಸೈನಾ ನೆಹ್ವಾಲ್, ತಮ್ಮ ಎದುರಾಳಿ ಚೀನಾದ ಆಟಗಾರ್ತಿ ಸನ್ ಯು ವಿರುದ್ಧ 21-19, 19-21, 21-14 ಗೇಮ್ ಗಳ ಅಂತರದಲ್ಲಿ ಗೆಲವು ದಾಖಲಿಸಿದ್ದಾರೆ. ಒಂದು ಗಂಟೆ 18 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸೈನಾ ನೆಹ್ವಾಲ್ ಹಾಗೂ ಸನ್ ಯು ಪರಸ್ಪರ ಹೋರಾಟ ನಡೆಸಿದರು. ಈ ವೇಳೆ ಉತ್ತಮ ಪ್ರಾಬಲ್ಯ ಮೆರೆದ ಸೈನಾ ಗೆಲವಿನ ನಗೆ ಬೀರಿದರು.

ಎರಡನೇ ಶ್ರೇಯಾಂಕ ಪಡೆದಿರುವ ಸೈನಾ ನೆಹ್ವಾಲ್ ತಮ್ಮ ಮುಂದಿನ ಪಂದ್ಯದಲ್ಲಿ 5ನೇ ಶ್ರೇಯಾಂಕಿತ ಆಟಗಾರ್ತಿ ಚೀನಾದ ವಾಂಗ್ ಶಿಕ್ಷಿಯನ್ ವಿರುದ್ಧ  ಸೆಣಸಲಿದ್ದಾರೆ.

ಶ್ರೀಕಾಂತ್‍ಗೆ ನಿರಾಸೆ: ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಕೆ.ಶ್ರೀಕಾಂತ್, ಚೀನಾದ ಆಟಗಾರ ಥೈನ್ ಹುವೈ ವಿರುದ್ಧ 21-18, 17-21, 13-21 ಗೇಮ್ ಗಳ ಅಂತರದಲ್ಲಿ ಸೋಲನುಭವಿಸಿದ್ದಾರೆ. ವಿಶ್ವದ 4ನೇ ರ್ಯಾಂಕಿಂಗ್‍ನ ಆಟಗಾರ ಶ್ರೀಕಾಂತ್, ತಮ್ಮ ಪಂದ್ಯದಲ್ಲಿ ಶ್ರೇಯಾಂಕ ರಹಿತ ಆಟಗಾರನ ವಿರುದ್ಧ ಸೋಲನುಭವಿಸಿರುವುದು ಅಚ್ಚರಿ ತಂದಿದೆ.

ಬುಧವಾರ ನಡೆದಿದ್ದ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಹಿರಿಯ ಆಟಗಾರ ಪರುಪಳ್ಳಿ ಕಶ್ಯಪ್ ಸೋಲನುಭವಿಸಿದ್ದರು. ಹಾಗಾಗಿ ಶ್ರೀಕಾಂತ್ ಅವರ ಮೇಲೆ ಸಾಕಷ್ಟು ಭರವಸೆ ಇತ್ತು. ಅಲ್ಲದೆ ಅರ್ಹತಾ ಸುತ್ತಿನ ಮೂಲಕ ಪ್ರಮುಖ ಸುತ್ತಿಗೆ ಪ್ರವೇಶ ಪಡೆದಿದ್ದ ಗುರುಸಾಯಿದತ್, ಮೊದಲ ಸುತ್ತಿನಲ್ಲಿ ಚೀನಾದ ಚೆನ್ ಲಾಂಗ್ ವಿರುದ್ಧ 21-15, 9-21,17-21 ಗೇಮ್ ಗಳ ಅಂತರದಲ್ಲಿ ಸೋತಿದ್ದರು. ಹಾಗಾಗಿ, ಶ್ರೀಕಾಂತ್ ಮೇಲೆ ನಿರೀಕ್ಷೆ ಹೆಚ್ಚಾಗಿತ್ತು. ಈ ಮೂಲಕ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಹೋರಾಟ ಅಂತ್ಯಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com