
ಜೈಪುರ: ಪ್ರಸಕ್ತ ರಣಜಿ ಋತುವಿನಲ್ಲಿ ಗೆಲುವು ಕಾಣದೇ ದುಗುಡಕ್ಕೆ ಒಳಗಾಗಿದ್ದ ಹಾಲಿ ಚ್ಯಾಂಪಿಯನ್ ಕರ್ನಾಟಕ ತಂಡ, ನಿರೀಕ್ಷೆಯಂತೆಯೇ ರಾಜಸ್ತಾನ ವಿರುದ್ಧದ ಪಂದ್ಯದಲ್ಲಿ 92 ರನ್ ಗಳ ಮನೋಜ್ಞ ಗೆಲುವು ಸಾಧಿಸಿ ಆ ಮೂಲಕ ಅಂಕಪಟ್ಟಿಯಲ್ಲಿ 3 ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.
ಇಲ್ಲಿನ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ, ಆತಿಥೇಯ ರಾಜಸ್ಥಾನವನ್ನು 92 ರನ್‌ಗಳಿಂದ ಬಗ್ಗು ಬಡಿಯಿತು. 358 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ರಾಜಸ್ಥಾನ, ರಾಜ್ಯ ಪಡೆಯ ಸಂಘಟಿತ ದಾಳಿಗೆ ತತ್ತರಿಸಿ 82.2 ಓವರ್‌ಗಳಲ್ಲಿ 265 ರನ್‌ಗಳಿಗೆ ಆಲ್‌ಔಟ್ ಆಯಿತು.
ಎ ಗುಂಪಿನಲ್ಲಿ ಅಸ್ಸಾಂ, ಬಂಗಾಳ, ವಿದರ್ಭ ಮತ್ತು ಹರಿಯಾಣ ವಿರುದ್ಧ ಡ್ರಾಗೆ ತೃಪ್ತಿಪಟ್ಟಿದ್ದ ಸತತ ಎರಡು ಬಾರಿಯ ಚಾಂಪಿಯನ್ ಕರ್ನಾಟಕ ಕೊನೆಗೂ ಗೆಲುವಿನ ಮುಖ ಕಂಡಿತು. ಈ ಜಯದೊಂದಿಗೆ ಪೂರ್ಣ 6 ಅಂಕ ಗಳಿಸಿದ ವಿನಯ್ ಕುಮಾರ್ ಪಡೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರುವ ಮೂಲಕ ನಾಕ್‌ಔಟ್ ಕನಸನ್ನು ಜೀವಂತವಾಗಿ ಉಳಿಸಿಕೊಂಡಿದೆ.
ಮೂರನೇ ದಿನದಂತ್ಯಕ್ಕೆ 3 ವಿಕೆಟ್ ಉರುಳಿಸಿ ಗೆಲುವಿನ ಗೋಪುರಕ್ಕೆ ಭದ್ರ ಅಡಿಪಾಯ ಹಾಕಿದ್ದ ಕರ್ನಾಟಕಕ್ಕೆ ಅಂತಿಮ ದಿನದಾಟದ ಆರಂಭ ಶುಭದಾಯಕವಾಗಿರಲಿಲ್ಲ. ದಿನದ ಆರಂಭದಲ್ಲಿಯೇ ವಿಕೆಟ್ ಬೇಟೆಯಾಡುವ ಚಾಂಪಿಯನ್ ತಂಡದ ಲೆಕ್ಕಾಚಾರ ಒಂದೂವರೆ ಗಂಟೆಯ ಅವಧಿಯಲ್ಲಿ ತಲೆ ಕೆಳಗಾಯಿತು. 3 ವಿಕೆಟ್‌ಗೆ 42 ರನ್‌ಗಳಿಂದ ದಿನದಾಟ ಆರಂಭಿಸಿದ ಪ್ರಣಯ್ ಶರ್ಮಾ ಹಾಗೂ ತನ್ವೀರ್ ಉಲ್ ಹಕ್ ನಾಲ್ಕನೇ ವಿಕೆಟ್‌ಗೆ 64 ರನ್ ಸೇರಿಸಿ ಕರ್ನಾಟಕ ಪಾಳೆಯದಲ್ಲಿ ಆಂತಕ ಮೂಡಿಸಿದರು.
ಅಪಾಯಕಾರಿಯಾಗಿ ಬೆಳೆಯುತ್ತಿದ್ದ ಈ ಜತೆಯಾಟವನ್ನು ಕೊನೆಗೂ ಮುರಿಯುವಲ್ಲಿ ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ ಯಶಸ್ವಿಯಾದರು. 89 ಎಸೆತಗಳನ್ನೆದುರಿಸಿದ್ದ ತನ್ವೀರ್ (19) ಅವರನ್ನು 37ನೇ ಓವರ್‌ನಲ್ಲಿ ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿದ ಬಿನ್ನಿ, ದಿನದಾಟದಲ್ಲಿ ರಾಜ್ಯಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಮುಂದಿನ ಓವರ್‌ನಲ್ಲಿ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್, ರಾಜಸ್ಥಾನ ತಂಡದ ಅಪಾಯಕಾರಿ ಬ್ಯಾಟ್ಸ್‌ಮನ್ ರಜತ್ ಭಾಟಿಯಾ (2) ಅವರನ್ನು ಪೆವಿಲಿಯನ್‌ಗಟ್ಟಿ ರಾಜ್ಯದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ನಂತರದ ಓವರ್‌ನಲ್ಲಿ ಬಿನ್ನಿ ಅವರ ಇನ್‌ಸ್ವಿಂಗ್ ಎಸೆತದ ಮುಂದೆ ಪುನೀತ್ ಯಾದವ್ (0) ಕ್ಲೀನ್‌ಬೌಲ್ಡಾದರು. ಒಂದು ಹಂತದಲ್ಲಿ 102 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ರಾಜಸ್ಥಾನ, 116 ರನ್ ತಲುವುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತು.
ಮೊದಲ ಅವಧಿಯಲ್ಲಿ 3 ವಿಕೆಟ್ ಪಡೆದು ಸುಲಭ ಗೆಲುವನ್ನು ಎದುರು ನೋಡುತ್ತಿದ್ದ ಚಾಂಪಿಯನ್ನರ ಹಾದಿಗೆ ಆರಂಭಿಕ ಬ್ಯಾಟ್ಸ್‌ಮನ್ ಪ್ರಣಯ್ ಶರ್ಮಾ ಹಾಗೂ ವಿಕೆಟ್ ಕೀಪರ್ ದಿಶಾಂತ್ ಯಾಜ್ಞಿಕ್ ತಡೆಯಾಗಿ ನಿಂತರು. ರಾಜ್ಯದ ಕ್ಷೇತ್ರರಕ್ಷಕರು ಕೈಚೆಲ್ಲಿದ ಕೆಲ ಕ್ಯಾಚ್‌ಗಳನ್ನು ಬಳಸಿಕೊಂಡ ಈ ಜೋಡಿ 7ನೇ ವಿಕೆಟ್‌ಗೆ 98 ರನ್ ಸೇರಿಸಿತು. ಈ ಜತೆಯಾಟ ಬೆಳೆಯುತ್ತಿದ್ದಾಗ ಕರ್ನಾಟಕದ ಪಾಳೆಯದಲ್ಲಿ ಕೊಂಚ ಆತಂಕ ಮನೆ ಮಾಡಿತ್ತು. ಈ ಸಾಲಿನಲ್ಲಿ ಮೊದಲ ಗೆಲುವಿನ ಕನಸು ಕಾಣುತ್ತಿದ್ದ ರಾಜ್ಯ ತಂಡದ ಆಟಗಾರರನ್ನು ಪ್ರಣಯ್ ಹಾಗೂ ದಿಶಾಂತ್ ಇನ್ನಿಲ್ಲದಂತೆ ಕಾಡಿದರು.
ಕರ್ನಾಟಕದ ಗೆಲುವಿಗೆ ಅಡ್ಡಗಾಲಾಗಿ ನಿಂತಿದ್ದ ಪ್ರಣಯ್-ದಿಶಾಂತ್ ಜೋಡಿಯನ್ನು 65ನೇ ಓವರ್‌ನಲ್ಲಿ ಮಧ್ಯಮ ವೇಗಿ ಡೇವಿಡ್ ಮಥಾಯಿಸ್ ಮುರಿಯುತ್ತಿದ್ದಂತೆ ವಿನಯ್ ಪಡೆಯ ಆಟಗಾರರು ದೊಡ್ಡ ನಿಟ್ಟುಸಿರುಬಿಟ್ಟರು. ಶತಕ ಗಳಿಸಿದ ಪ್ರಣಯ್ ಶರ್ಮಾ (114), ಡೇವಿಡ್ ಎಸೆತವನ್ನು ಕೆಣಕಿ, ಗಲ್ಲಿಯಲ್ಲಿ ಸಮರ್ಥ್‌ಗೆ ಕ್ಯಾಚ್ ನೀಡಿ ಔಟಾದರು. ಆದರೆ ಮತ್ತೊಂದು ತುದಿಯಲ್ಲಿ ದಿಶಾಂತ್ (ಔಟಾಗದೆ 71) ಹೋರಾಟ ಮುಂದುವರಿಸಿದರೂ, ಸಹ ಆಟಗಾರರಿಂದ ಬೆಂಬಲ ಸಿಗಲಿಲ್ಲ. 83ನೇ ಓವರ್‌ನಲ್ಲಿ ಎಡಗೈ ಸ್ಪಿನ್ನರ್ ಜೆ.ಸುಚಿತ್, ಆತಿಥೇಯರ ಕೊನೆಯ ಆಟಗಾರ ಅನಿಕೇತ್ ಚೌಧರಿ (7) ಅವರನ್ನು ಎಲ್ಬಿಡಬ್ಲ್ಯು ಬಲೆಗೆ ಕೆಡವುತ್ತಿದ್ದಂತೆ ರಾಜ್ಯ ತಂಡದ ಜಯಭೇರಿ ಮೊಳಗಿತು. ಚಹಾ ವಿರಾಮಕ್ಕೂ ಮೊದಲೇ ಗೆಲುವು ಸಾಧಿಸಿದ ವಿನಯ್ ಪಡೆ, ಪ್ರಸಕ್ತ ಸಾಲಿನ ಡ್ರಾ ಸರಮಾಲೆಗೆ ಅಂತ್ಯ ಹಾಡುವಲ್ಲಿ ಯಶಸ್ವಿಯಾಯಿತು. ಕರ್ನಾಟಕ ಪರ ಡೇವಿಡ್ ಮಥಿಯಾಸ್ 3 ವಿಕೆಟ್ ಪಡೆದರೇ ಎಸ್. ಅರವಿಂದ್ ಸ್ಟುವರ್ಟ್ ಬಿನ್ನಿ ಶ್ರೇಯಸ್ ಗೋಪಾಲ್ ತಲಾ 2 ಮತ್ತು ಸುಚಿತ್ 1 ವಿಕೆಟ್ ಪಡೆದರು.
Advertisement