ವಾಂಖೆಡೆ ಘಟನೆ ಈಗ ಇತಿಹಾಸ, ಮತ್ತೆ ಕೆದಕುವುದು ಅನಗತ್ಯ: ನಿರ್ದೇಶಕ ರವಿಶಾಸ್ತ್ರಿ

ವಾಂಖೆಡೆ ವಿವಾದದ ಕುರಿತ ಪ್ರಶ್ನೆಗೆ ಸಿಡಿಮಿಡಿಗೊಂಡ ರವಿಶಾಸ್ತ್ರಿ ‘ಅದು ಈಗ ಮುಗಿದು ಹೋದ ಕಥೆ. ಅದರ ಬಗ್ಗೆ ಸಾಕಷ್ಟು ಮಾತನಾಡಿದ್ದೇನೆ. ನಾನು ನೀಡಿರುವ ಹೇಳಿಕೆಗಳಿಗೆ ಬದ್ಧನಾಗಿದ್ದೇನೆ....
ರವಿಶಾಸ್ತ್ರಿ
ರವಿಶಾಸ್ತ್ರಿ

ಮೊಹಾಲಿ: ತಮ್ಮ ನೆಲದಲ್ಲಿ ಆಡುವ ಸಂದರ್ಭದಲ್ಲಿ ಆತಿಥೇಯ ತಂಡಕ್ಕೆ ತವರು ನೆಲದ ಲಾಭ ಸಿಗಬೇಕೆಂದು ಭಾರತ ಕ್ರಿಕೆಟ್ ತಂಡದ ನಿರ್ದೇಶಕ ರವಿಶಾಸ್ತ್ರಿ ಅಭಿಪ್ರಾಯ ಪಟ್ಟಿದ್ದಾರೆ.

ಮೊಹಾಲಿಯಲ್ಲಿ ಗುರುವಾರ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯಕ್ಕಾಗಿ ಭಾರತ ಮಂಗಳವಾರ ಮೊಹಾಲಿ ಕ್ರಿಕೆಟ್ ಸಂಸ್ಥೆ (ಪಿಸಿಎ) ಮೈದಾನದಲ್ಲಿ ಅಭ್ಯಾಸ ನಡೆಸಿತು. ಈ ವೇಳೆ ಮಾತನಾಡಿದ ಶಾಸ್ತ್ರಿ, ''ತವರು ತಂಡಕ್ಕೆ ತಮ್ಮ ನೆಲದಲ್ಲಿ ಆಡುತ್ತಿರುವ ಲಾಭ ಸಿಗಬೇಕೆಂಬದು ನನ್ನ ಅಭಿಪ್ರಾಯ. ಇದೇ ಕಾರಣಕ್ಕೆ ತವರು ನೆಲದಲ್ಲಿ ಆಡುವುದನ್ನು ಎಲ್ಲಾ ತಂಡಗಳು ಬಯಸುತ್ತವೆ. ದಕ್ಷಿಣ ಆಫ್ರಿಕಾ ಅಥವಾ ಆಸ್ಟ್ರೇಲಿಯಾಗೆ ಹೋದರೆ ಅಲ್ಲಿ ಮೊದಲ ದಿನವೇ ತಿರುವು ನೀಡುವ ಪಿಚ್‌ಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ ಮೊಹಾಲಿಯ ಪಿಚ್ ಹೇಗಿದೆ ಎಂಬುದು ಕುತೂಹಲ ಕೆರಳಿಸಿದೆ,'' ಎಂದು ತಿಳಿಸಿದರು.

ವಾಂಖೆಡೆ ವಿವಾದದ ಕುರಿತ ಪ್ರಶ್ನೆಗೆ ಸಿಡಿಮಿಡಿಗೊಂಡ ಅವರು, ‘ಅದು ಈಗ ಮುಗಿದು ಹೋದ ಕಥೆ. ಅದರ ಬಗ್ಗೆ ಸಾಕಷ್ಟು ಮಾತನಾಡಿದ್ದೇನೆ. ನಾನು ನೀಡಿರುವ ಹೇಳಿಕೆಗಳಿಗೆ ಬದ್ಧನಾಗಿದ್ದೇನೆ. ಅದರ ಬಗ್ಗೆ ಮತ್ತೆ ಈಗ ಮಾತನಾಡುವುದು ಬೇಡ’ ಎಂದರು. ‘ನಾನು ಇವತ್ತಷ್ಟೇ ಇಲ್ಲಿಗೆ ಬಂದಿದ್ದೇನೆ. ಪಿಚ್ ನೋಡಿಲ್ಲ. ಆದ್ದರಿಂದ ಹೆಚ್ಚು ಗೊತ್ತಿಲ್ಲ. ನೀವು (ಪತ್ರಕರ್ತರು) ನೋಡಿರಬಹುದಲ್ಲ. ನೀವೇ ಹೇಳಿ’ ಎಂದರು.

ತಂಡದಲ್ಲಿ ಐವರು ಅಥವಾ ನಾಲ್ವರು ಬೌಲರ್‌ಗಳನ್ನು ಆಡಿಸುವುದಕ್ಕೆ ಹೆಚ್ಚು ಪ್ರಾಧಾನ್ಯತೆ ಇಲ್ಲ. ಪಂದ್ಯದ ದಿನ ಪಿಚ್‌ ಪರಿಸ್ಥಿತಿ ಮತ್ತು ವಾತಾವರಣವನ್ನು ನೋಡಿ ನಿರ್ಧಾರ ಮಾಡುತ್ತೇವೆ. ಒಟ್ಟಿನಲ್ಲಿ ಇಡೀ ಪಂದ್ಯದಲ್ಲಿ 20 ವಿಕೆಟ್‌ಗಳನ್ನು ಪಡೆಯುವ ಬೌಲರ್‌ಗಳನ್ನು ಕಣಕ್ಕಿಳಿಸುತ್ತೇವೆ’ ಎಂದು ಮಾಜಿ ಎಡಗೈ ಸ್ಪಿನ್ನರ್ ರವಿಶಾಸ್ತ್ರಿ ಹೇಳಿದರು.

ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ ರವಿಶಾಸ್ತ್ರಿ, ''ದೀರ್ಘಕಾಲದ ಅವಧಿಗೆ ಕೊಹ್ಲಿ ಟೆಸ್ಟ್ ತಂಡದ ನಾಯಕರಾಗಿರಲಿದ್ದಾರೆ. ಈಗ ಅವರು ಉತ್ತಮ ಹಾದಿಯಲ್ಲಿ ಸಾಗುತ್ತಿದ್ದಾರೆ. ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ ಜಯಿಸಿದ್ದು, ಆಟಗಾರರ ಪಾಲಿಗೆ ಅದೊಂದು ಸವಾಲಿನ ಸರಣಿಯಾಗಿತ್ತು. ಆ ಸರಣಿಯಿಂದ ಕೊಹ್ಲಿ ಸಹಿತ ಎಲ್ಲಾ ಆಟಗಾರರು ಸಾಕಷ್ಟು ಕಲಿತಿದ್ದಾರೆ,'' ಎಂದರು.

''ಭಾರತದ ಯುವ ತಂಡ ವಿಶ್ವದ ಶ್ರೇಷ್ಠ ಮತ್ತು ನಂ.1 ತಂಡದ ವಿರುದ್ಧ ಆಡುತ್ತಿದೆ. ಬಲಿಷ್ಠ ತಂಡದ ವಿರುದ್ಧ ಆಡುತ್ತಿರುವುದು ನಿಜಕ್ಕೂ ಉತ್ತಮ ಅನುಭವ. ಇದರಿಂದ ನಮ್ಮ ಆಟಗಾರರು ಸಾಕಷ್ಟು ಕಲಿಯಲಿದ್ದಾರೆ,'' ಎಂದು ಶಾಸ್ತ್ರಿ ಇದೇ ವೇಳೆ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com