ಪಾರದರ್ಶಕತೆಗೆ ಶಶಾಂಕ್ ಒತ್ತು?

ತೀವ್ರ ಕುತೂಹಲ ಕೆರಳಿಸಿರುವ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ)ಯ 85ನೇ ವಾರ್ಷಿಕ ಮಹಾಸಭೆ ಸೋಮವಾರ ನಡೆಯಲಿದ್ದು, ಮಂಡಳಿಯ ನೂತನ ಅಧ್ಯಕ್ಷ...
ಶಶಾಂಕ್ ಮನೋಹರ್
ಶಶಾಂಕ್ ಮನೋಹರ್
ಮುಂಬೈ: ತೀವ್ರ ಕುತೂಹಲ ಕೆರಳಿಸಿರುವ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ)ಯ 85ನೇ ವಾರ್ಷಿಕ ಮಹಾಸಭೆ ಸೋಮವಾರ ನಡೆಯಲಿದ್ದು, ಮಂಡಳಿಯ ನೂತನ ಅಧ್ಯಕ್ಷ ಶಶಾಂಕ್ ಮನೋಹರ್ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. 
ಇತ್ತೀಚೆಗೆ, ಬಿಸಿಸಿಐ ಅಧ್ಯಕ್ಷ ಗಾದಿಗೇರುವ ವೇಳೆ ತಾವು ನೀಡಿದ್ದ ಆಡಳಿತ ಸುಧಾರಣಾ ಆಶ್ವಾಸನೆಗಳನ್ನು ಹಂತಹಂತವಾಗಿ ಅವರು ಈಡೇರಿಸುತ್ತಾ ಬಂದಿದ್ದು, ವಾರ್ಷಿಕ ಮಹಾಸಭೆಯಲ್ಲಿ ಮತ್ತಷ್ಟು ಸುಧಾರಣಾ ನೀತಿಗಳನ್ನು ಚರ್ಚಿಸಿ ಜಾರಿಗೊಳಿಸಲಿದ್ದಾರೆಂದು ನಿರೀಕ್ಷಿಸಲಾಗಿದೆ. ಇವುಗಳಲ್ಲಿ, ಬಿಸಿಸಿಐ ಆಂತರಿಕ ವ್ಯವಹಾರಗಳ ಮೇಲೆ ನಿಗಾ ವಹಿಸಲು ಆಂಬುಡ್ಸ್‍ಮನ್ ರಚನೆ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ)ಯ ಮುಖ್ಯಸ್ಥರ ಹುದ್ದೆಯಲ್ಲಿ ಎನ್. ಶ್ರೀನಿವಾಸನ್ ಅವರ ಭವಿಷ್ಯ ವಿಚಾರಗಳು ಪ್ರಮುಖವಾದವು. ಈ ನಿಟ್ಟಿನಲ್ಲಿ ಓಂಬುಡ್ಸ್‍ಮನ್ ಅಸ್ತಿತ್ವಕ್ಕೆ ಹೆಚ್ಚು ಮಹತ್ವ ಸಿಗಲಿದೆ. ಒಂದೊಮ್ಮೆ ಇದಕ್ಕೆ ವಾರ್ಷಿಕ ಮಹಾಸಭೆಯಲ್ಲಿ ಹಸಿರು ನಿಶಾನೆ ದೊರೆತರೆ, ಸ್ವಹಿತಾಸಕ್ತಿ ಸಂಘರ್ಷ, ಅಧಿನಿಯಮಗಳಲ್ಲಿ ದೊಡ್ಡ ಬದಲಾವಣೆಯೂ ಆಗಲಿದೆ. 
ಬಿನ್ನಿ ಸ್ಥಾನದ ಬಗ್ಗೆಯೂ ಚರ್ಚೆ: ಮಹಾಸಭೆಯಲ್ಲಿ, ಬಿಸಿಸಿಐ ಆಯ್ಕೆ ಮಂಡಳಿ ಸದಸ್ಯರಾಗಿರುವ ಕರ್ನಾಟಕದ ರೋಜರ್ ಬಿನ್ನಿಯವರ ಸದಸ್ಯತ್ವದ ಬಗ್ಗೆ ಚರ್ಚೆಯಾಗಲಿದೆ. ಪುತ್ರ ಸ್ಟುವರ್ಟ್ ಬಿನ್ನಿ, ರಾಷ್ಟ್ರೀಯ ತಂಡದಲ್ಲಿ ಆಡುವುದರಿಂದ ರೋಜರ್ ಈಗ ಸ್ವಹಿತಾಸಕ್ತಿ ಸಂಘರ್ಷದಲ್ಲಿ ಸಿಲುಕಿದ್ದಾರೆ. ಹಾಗಾಗಿ, ರೋಜರ್ ಬಿನ್ನಿಯವರು ಆಯ್ಕೆ ಸಮಿತಿಯಲ್ಲಿ ಮುಂದುವರಿಯಬೇಕೇ ಎಂಬುದೂ ಚರ್ಚೆಯಾಗಲಿದೆ. 
ಐಸಿಸಿ ಮುಖ್ಯಸ್ಥರ ಹುದ್ದೆಯಲ್ಲಿರುವ, ಎನ್. ಶ್ರೀನಿವಾಸನ್‍ರನ್ನು ಆ ಸ್ಥಾನದಲ್ಲಿ ಮುಂದುವರಿಸುವ ಬಗ್ಗೆಯೂ ಚರ್ಚೆ ನಡೆಯಲಿದ್ದು, ಸಾಕಷ್ಟು ಕುತೂಹಲ ಸೃಷ್ಟಿಸಿದೆ. ಶ್ರೀನಿಯವರನ್ನು ಆ ಸ್ಥಾನದಿಂದ ತೆರವುಗೊಳಿಸಲು ನಿರ್ಧರಿಸಿದರೆ, ಆ ಸ್ಥಾನಕ್ಕೆ ಶಶಾಂಕ್ ಮನೋಹರ್ ನಾಮಾಂಕಿತಗೊಳ್ಳುವ ಸಾಧ್ಯತೆಗಳಿವೆ. ಸಭೆಯಲ್ಲಿ, ನೂತನ ಐಪಿಎಲ್ ಆಡಳಿತ ಮಂಡಳಿ, ಉಪ ಸಮಿತಿಗಳನ್ನು ಪುನರಾಚಿಸಿ, ಮುಂದಿನ ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಬದಲಿಗೆ ಯಾವ ತಂಡಗಳನ್ನು ಆಡಿಸಬೇಕೆಂಬುದ ಬಗ್ಗೆ ಚರ್ಚೆಗಳಾಗಲಿವೆ.
ಸಮಿತಿಗಳ ಪುನಾರಚನೆ: ಸೋಮವಾರದ ಸಭೆಯಲ್ಲಿ, ರಾಷ್ಟ್ರೀಯ ಹಿರಿಯರ, ಕಿರಿಯರ ಹಾಗೂ ಮಹಿಳೆಯರ ಆಯ್ಕೆ ಸಮಿತಿಗಳನ್ನು ಪುನರಾಚಿಸುವ ಸಾಧ್ಯತೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com