

ಬೆಂಗಳೂರು: ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಕ್ರಿಕೆಟಿಗನಾಗಿರದಿದ್ದರೆ ಮತ್ತೇನಾಗುತ್ತಿದ್ದರು? ಸತ್ಯವಾಗಿಯೂ ಅವರೊಬ್ಬ ವೈದ್ಯರಾಗಿರುತ್ತಿದ್ದರು!
ಹೌದು. ಹಾಗಂತ ಅವರೇ ಹೇಳಿಕೊಂಡಿದ್ದಾರೆ. ತಮ್ಮ ವೃತ್ತಿಜೀವನದ 100ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಈ ದೈತ್ಯ ಪ್ರತಿಭೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮುಖಾಮುಖಿಯಾಗಿದ್ದರು. ಇದೇ ವೇಳೆ, ಸಂಪೂರ್ಣ ಫ್ಲಾಶ್ ಬ್ಯಾಕ್ಗೆ ತೆರಳಿದ ಅವರು, ``ನನ್ನ ತಂದೆ ನನ್ನನ್ನು ಓರ್ವ ವೈದ್ಯನನ್ನಾಗಿಸುವ ಹಂಬಲ ಹೊಂದಿದ್ದರು.
ಹಾಗಾಗದಿದ್ದರೂ, ಕನಿಷ್ಠವೆಂದರೆ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆಯಬೇಕು ಎಂಬ ಆಕಾಂಕ್ಷೆಯೂ ಅವರದ್ದಾಗಿತ್ತು. ಆದರೆ, ನಾನು ಕ್ರಿಕೆಟ್ ಅನ್ನು ನನ್ನ ವೃತ್ತಿಜೀವವನ್ನಾಗಿಸಿಕೊಂಡೆ. ಆದರೆ, ಇದಕ್ಕೆ ನನ್ನ ತಂದೆ ವಿರೋಧ ವ್ಯಕ್ತಪಡಿಸಲಿಲ್ಲ. ತಾಯಿಯಿಂದಲೂ ತಕರಾರು ಬರಲಿಲ್ಲ. ಇಂದು ನಾನು ಗಳಿಸಿರುವ ಯಶಸ್ಸು, ಜನಪ್ರಿಯತೆಯಿಂದ ಅವರು ಸಂತುಷ್ಟರಾಗಿದ್ದಾರೆ. ಈ ಸಾಧನೆಗೆ ನನ್ನ ಕುಟುಂಬದ ಎಲ್ಲಾ ಸದಸ್ಯರ ಬೆಂಬಲವೇ ಕಾರಣ'' ಎಂದು ಹೇಳಿದರು. "`ಬಾಲ್ಯದಿಂದಲೂ ನಾನು ಅನೇಕ ಕ್ರೀಡೆಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೆ.ಅದಕ್ಕೆ ನನ್ನ ಇಬ್ಬರು ಅಣ್ಣಂದಿರೇ ಕಾರಣ. ಹಾಗೆ, ವಿವಿಧ ಕ್ರೀಡೆಗಳಲ್ಲಿ ಆಡಿದ್ದು ನನ್ನ ಕ್ರಿಕೆಟ್ ಕೌಶಲ್ಯಕ್ಕೆ ಪ್ರಮುಖ ಕಾರಣ. ಇದೀಗ, ಓರ್ವ ಸ್ಫೋಟಕ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆ ಪಡೆದಿದ್ದು, ಇದು ತೃಪ್ತಿ ನೀಡಿದೆ. ಮತ್ತೆ ನಾನು ಇತರ ಕ್ರೀಡೆಗಳ ಕಡೆಗೆ ಗಮನ ಕೊಡಲಾರೆ'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.