ಶತಮಾನದಷ್ಟು ಹಳೆಯ ದಾಖಲೆ ಧೂಳಿಪಟ ಮಾಡಿದ ಟೇಲರ್

ಪರ್ತ್ ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ಪಡೆಯ ಸ್ಫೋಟಕ ಬ್ಯಾಟ್ಸ್ ಮನ್ ರಾಸ್ ಟೇಲರ್ ಹಲವು ವಿಶ್ವದಾಖಲೆಗಳನ್ನು ನಿರ್ಮಿಸಿದ್ದಾರೆ...
ಆಸ್ಟ್ರೇಲಿಯಾ ವಿರುದ್ಧ ದ್ವಿಶತಕ ಸಿಡಿಸಿದ ಸಂಭ್ರಮದಲ್ಲಿ ಕಿವೀಸ್ ಪಡೆಯ ರಾಸ್ ಟೇಲರ್ (ಚಿತ್ರಕೃಪೆ: ಕ್ರಿಕ್ ಇನ್ಫೋ)
ಆಸ್ಟ್ರೇಲಿಯಾ ವಿರುದ್ಧ ದ್ವಿಶತಕ ಸಿಡಿಸಿದ ಸಂಭ್ರಮದಲ್ಲಿ ಕಿವೀಸ್ ಪಡೆಯ ರಾಸ್ ಟೇಲರ್ (ಚಿತ್ರಕೃಪೆ: ಕ್ರಿಕ್ ಇನ್ಫೋ)
Updated on

ಪರ್ತ್: ಪರ್ತ್ ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ಪಡೆಯ ಸ್ಫೋಟಕ ಬ್ಯಾಟ್ಸ್ ಮನ್ ರಾಸ್ ಟೇಲರ್ ಹಲವು ವಿಶ್ವದಾಖಲೆ  ನಿರ್ಮಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ರಾಸ್ ಟೇಲರ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಹಲವು ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದಾರೆ. ಕಾಂಗರೂ ಪಡೆಯ ವಿರುದ್ಧ ಪರ್ತ್ ಕ್ರೀಡಾಂಗಣದಲ್ಲಿ ಟೇಲರ್ 374 ಎಸೆತಗಳಲ್ಲಿ 290 ರನ್ ಗಳಿಸುವ ಮೂಲಕ ದಾಖಲೆ ಬರೆದಿದ್ದಾರೆ. ಕ್ರಿಕೆಟ್ ಪಂಡಿತರ ಪ್ರಕಾರ ಇದೊಂದು ವಿಶ್ವ  ದಾಖಲೆಯಾಗಿದ್ದು, ಆಸಿಸ್ ಪಡೆಯ ವಿರುದ್ಧ ನ್ಯೂಜಿಲೆಂಡ್ ಆಟಗಾರನೊಬ್ಬ ಗಳಿಸಿದ ವೈಯುಕ್ತಿಕ ಅತ್ಯಧಿಕ ರನ್ ಗಳಿಕೆ ಇದಾಗಿದೆ ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು 2003ರಲ್ಲಿ ಪಿ ಸಾರಾ ಓವಲ್ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ಗಳಿಸಿದ್ದ 274 ರನ್ ಗಳೇ ಇಲ್ಲಿಯವರೆಗಿನ ಅತ್ಯಧಿಕ ರನ್ ಗಳಿಕೆಯಾಗಿತ್ತು.  ಇದೀಗ ಈ ದಾಖಲೆಯನ್ನು ರಾಸ್ ಟೇಲರ್ ಮುರಿದಿದ್ದಾರೆ. ಅಲ್ಲದೆ ಆಸ್ಟ್ರೇಲಿಯಾ ವಿರುದ್ಧ ಕಾಂಗರೂ ನೆಲದಲ್ಲಿ 250ಕ್ಕೂ ಅಧಿಕ ರನ್ ಗಳಿಸಿ ವಿಶ್ವದ 4ನೇ ವಿದೇಶಿ ಆಟಗಾರ ಎಂಬ ಖ್ಯಾತಿಗೂ  ಟೇಲರ್ ಪಾತ್ರರಾಗಿದ್ದಾರೆ.

111 ವರ್ಷಗಳಷ್ಟು ಹಳೆಯ ದಾಖಲೆ ಧೂಳಿಪಟ
ಇದೇ ವೇಳೆ ಟೇಲರ್ ತಮ್ಮ ದ್ವಿಶತಕದ ಮೂಲಕ 111 ವರ್ಷಗಳಷ್ಟು ಹಳೆಯ ವಿಶ್ವದಾಖಲೆಯೊಂದನ್ನು ಮುರಿದಿದ್ದು, ವಿದೇಶಿ ಆಟಗಾರನೊಬ್ಬ ಆಸ್ಟ್ರೇಲಿಯಾ ನೆಲದಲ್ಲಿ ಅದೇ ತಂಡದ ವಿರುದ್ಧ  ಗಳಿಸಿದ ವೈಯುಕ್ತಿಕ ಅತ್ಯಧಿಕ ರನ್ ಗಳಿಕೆ ದಾಖಲೆಯನ್ನೂ ಕೂಡ ಟೇಲರ್ ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ಈ ಹಿಂದೆ 1903ರಲ್ಲಿ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ತಂಡದ ಆಟಗಾರ  ಟಿಪ್ ಫಾಸ್ಟರ್ 287 ರನ್ ಗಳಿಸಿದ್ದರು. ಇದು ಈ ವರೆಗಿನ ಅತ್ಯಧಿಕ ಮೊತ್ತವಾಗಿತ್ತು. ಆದರೆ ಟೇಲರ್ 290 ರನ್ ಗಳಿಸುವ ಮೂಲಕ ಆ ಶತಮಾನದ ದಾಖಲೆಯನ್ನೂ ಕೂಡ ಮುರಿದಿದ್ದಾರೆ.

4ನೇ ಕ್ರಮಾಂಕದಲ್ಲಿ 290 ರನ್ ಗಳಿಸಿದ ವಿಶ್ವದ ಏಕೈಕ ಬ್ಯಾಟ್ಸ್ ಮನ್

ರಾಸ್ ಟೇಲರ್ ಅವರ ಮತ್ತೊಂದು ವಿಶ್ವ ದಾಖಲೆ ಎಂದರೆ ನಾಲ್ಕನೇ ಕ್ರಮಾಂಕದಲ್ಲಿ ವೈಯುಕ್ತಿಕ ಅತ್ಯಧಿಕ 290 ರನ್ ಗಳಿಸಿದ ವಿಶ್ವದ ಏಕೈಕ್ ಬ್ಯಾಟ್ಸ್ ಮನ್ ಎಂಬ ದಾಖಲೆ ಕೂಡ ಟೇಲರ್  ಪಾಲಾಗಿದೆ. ಈ ಹಿಂದೆ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಇದೇ ನಾಲ್ಕನೇ ಕ್ರಮಾಂಕದಲ್ಲಿ ಆಡಿದ್ದ ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಲಾರಾ 277 ರನ್ ಗಳಿಸಿ ದಾಖಲೆ ಬರೆದಿದ್ದರು. ಇದು ಈ  ವರೆಗಿನ ನಾಲ್ಕನೇ ಕ್ರಮಾಂಕದಲ್ಲಿ ಆಡಿದ ಆಟಗಾರನ ವೈಯುಕ್ತಿಕ ಅತ್ಯಧಿಕ ರನ್ ಗಳಿಕೆಯಾಗಿತ್ತು. ಇದನ್ನು ಟೇಲರ್ ಅವರು ಮುರಿದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ವೈಯುಕ್ತಿಕ ಅತ್ಯಧಿಕ ರನ್ ಗಳಿಸಿದ ವಿಶ್ವದ 2ನೇ ಆಟಗಾರ
1938ರಲ್ಲಿ ಓವಲ್ ಮೈದಾನದಲ್ಲಿ ಲೆನ್ ಹಟನ್ಸ್ ಅವರು ಆಸ್ಟ್ರೇಲಿಯಾ ವಿರುದ್ಧ 364 ರನ್ ಗಳಿಸಿದ್ದರು. ಇದು ಆಸ್ಟ್ರೇಲಿಯಾ ವಿರುದ್ಧ ಅದರದೇ ನೆಲದಲ್ಲಿ ವಿದೇಶಿ ಆಟಗಾರನೊಬ್ಬ ಗಳಿಸಿದ  ವೈಯುಕ್ತಿಕ ಅತ್ಯಧಿಕ ರನ್ ಗಳಿಕೆಯಾಗಿತ್ತು. ರಾಸ್ ಟೇಲರ್ ಅವರು 2ನೇ ಟೆಸ್ಟ್ ನಲ್ಲಿ 290 ರನ್ ಗಳಿಕೆ ಮಾಡುವ ಮೂಲಕ ಈ ಪಟ್ಟಿಯಲ್ಲಿ 2ನೇ ಸ್ಥಾನಪಡೆದಿದ್ದಾರೆ.

ವೇಗದ 5000 ರನ್ ಗಳಿಕೆ ಪಟ್ಟಿಯಲ್ಲಿ 2ನೇ ಸ್ಥಾನ
ಈ ದ್ವಿಶತಕದ ಮೂಲಕ ರಾಸ್ ಟೇಲರ್ ಅವರು ತಮ್ಮ ಒಟ್ಟು ಟೆಸ್ಟ್ ರನ್ ಗಳಿಕೆಯನ್ನು 5000ಕ್ಕೆ ಏರಿಸಿಕೊಂದ್ದು, ಇದೂ ಕೂಡ ಒಂದು ದಾಖಲೆಯಾಗಿದೆ. ನ್ಯೂಜಿಲೆಂಡ್ ತಂಡದ ಪರವಾಗಿ  ವೇಗವಾಗಿ 5000 ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ರಾಸ್ ಟೇಲರ್ ಪ್ರಸ್ತುತ ಎರಡನೇ ಸ್ಥಾನದಲ್ಲಿದ್ದಾರೆ. ಈ ಐದು ಸಾವಿರ ರನ್ ಪೂರೈಸಲು ಟೇಲರ್ ಒಟ್ಟು 120 ಇನ್ನಿಂಗ್ಸ್ ಗಳನ್ನು  ತೆಗೆದುಕೊಂಡಿದ್ದರೆ, ಕ್ರೋವ್ ಅವರು 117 ಇನ್ನಿಂಗ್ಸ್ ಗಳಲ್ಲಿ 5000 ರನ್ ಪೂರೈಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com