ಕೊಲ್ಕತ್ತಾ: ಶುಕ್ರವಾರ ಶುರುವಾದ ಹತ್ತೊಂಭತ್ತು ವರ್ಷದೊಳಗಿನವರ ತ್ರಿಕೋನ ಸರಣಿಯಲ್ಲಿ ಪ್ರವಾಸಿ ಬಾಂಗ್ಲಾದೇಶ ವಿರುದ್ಧ 82 ರನ್‍ಗಳ ಭರ್ಜರಿ ಗೆಲುವು ಸಾಧಿಸಿದ್ದ ಆತಿಥೇಯ ಭಾರತ, ಶನಿವಾರ ನಡೆದ ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು 33 ರನ್‍ಗಳಿಂದ ಮಣಿಸಿ ಅದರೊಂದಿಗೆ ಪಂದ್ಯಾವಳಿಯಲ್ಲಿ ಸತತ ಎರಡನೇ ಗೆಲುವು ಪಡೆಯಿತು. ಇಲ್ಲಿನ ಜಾಧವ್‍ಪುರ ವಿವಿ ಆವರಣದಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 237 ರನ್ ಗುರಿ ಪಡೆದಿದ್ದ ಅಫ್ಘಾನಿಸ್ತಾನ 47.3 ಓವರ್ ಗಳಲ್ಲಿ 203 ರನ್‍ಗಳಿಗೆ ಆಲೌಟ್ ಆಯಿತು. ಮೊದಲು ಬ್ಯಾಟ್ ಮಾಡಿದ ಭಾರತ, ಆರಂಭಿಕ ರಿಶಭ್ ಪಂತ್ (87: 88 ಎಸೆತ, 10 ಬೌಂಡರಿ, 2 ಸಿಕ್ಸರ್) ಅವರ ಭರ್ಜರಿ ಅರ್ಧಶತಕದ ನೆರವಿನೊಂದಿಗೆ ನಿಗದಿತ 50 ಓವರ್‍ಗಳಲ್ಲಿ 236ರನ್‍ಗಳಿಗೆ ಆಲೌಟ್ ಆಯಿತು.