ದಾಖಲೆ ನಿರ್ಮಾಣಕ್ಕೆ ಅಡಿಲೇಡ್ ಸಜ್ಜು: ಇಂದು ಐತಿಹಾಸಿಕ ಮೊದಲ ಹಗಲು-ರಾತ್ರಿ ಟೆಸ್ಟ್

ಶತಮಾನಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಸಾಂಪ್ರದಾಯಿಕ ಟೆಸ್ಟ್ ಕ್ರಿಕೆಟ್‍ಗೆ ಶುಕ್ರವಾರ ಹೊಸದೊಂದು ಭಾಷ್ಯ ಬರೆಯಲು ಆತಿಥೇಯ ಆಸ್ಟ್ರೇಲಿಯಾ ಹಾಗೂ ಪ್ರವಾಸಿ ನ್ಯೂಜಿಲೆಂಡ್ ಅಣಿಯಾಗಿವೆ...
ದಾಖಲೆ ನಿರ್ಮಾಣಕ್ಕೆ ಸನ್ನದ್ಧವಾಗಿರುವ ಅಡಿಲೇಡ್ ಮೈದಾನ (ಸಂಗ್ರಹ ಚಿತ್ರ)
ದಾಖಲೆ ನಿರ್ಮಾಣಕ್ಕೆ ಸನ್ನದ್ಧವಾಗಿರುವ ಅಡಿಲೇಡ್ ಮೈದಾನ (ಸಂಗ್ರಹ ಚಿತ್ರ)

ಅಡಿಲೇಡ್: ಶತಮಾನಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಸಾಂಪ್ರದಾಯಿಕ ಟೆಸ್ಟ್ ಕ್ರಿಕೆಟ್‍ಗೆ ಶುಕ್ರವಾರ ಹೊಸದೊಂದು ಭಾಷ್ಯ ಬರೆಯಲು ಆತಿಥೇಯ ಆಸ್ಟ್ರೇಲಿಯಾ ಹಾಗೂ ಪ್ರವಾಸಿ  ನ್ಯೂಜಿಲೆಂಡ್ ಅಣಿಯಾಗಿವೆ.

138 ವರ್ಷಗಳ ಟೆಸ್ಟ್ ಕ್ರಿಕೆಟ್‍ನಲ್ಲೇ ಮೊಟ್ಟ ಮೊದಲ ಬಾರಿಗೆ ಹೊನಲು ಬೆಳಕಿನ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಈ ಚರಿತ್ರಾರ್ಹ ಪಂದ್ಯಕ್ಕೆ ಅಡಿಲೇಡ್ ಸಾಕ್ಷಿಯಾಗಿದೆ. ಈಗಾಗಲೇ ಈ ಟೆಸ್ಟ್  ಪಂದ್ಯಕ್ಕೆ ಭಾರತದ ಮಾಜಿ ನಾಯಕ ಕಪಿಲ್‍ದೇವ್, ವಿವಿಎಸ್ ಲಕ್ಷ್ಣಣ್ ಹಾಗೂ ವಿರಾಟ್ ಕೊಹ್ಲಿ ಬೆಂಬಲ ವ್ಯಕ್ತಪಡಿಸಿದ್ದು, ವಿಶ್ವದ ಪ್ರಮುಖ ಕ್ರಿಕೆಟಿಗರೂ ಪಂದ್ಯದ ಬಗ್ಗೆ ಕುತೂಹಲ ವ್ಯಕ್ತಪಡಿಸಿದ್ದಾರೆ.

``ಅಡಿಲೇಡ್ ಪಿಚ್ ಸಾಮಾನ್ಯವಾಗಿ ಸ್ವಿಂಗ್‍ಗೆ ಹೆಚ್ಚು ಸಹಕಾರಿಯಾಗಿದೆ. ಆದರೆ, ಹೊನಲು ಬೆಳಕಿನಡಿಯಲ್ಲಿ ಈ ಸ್ವಿಂಗ್ ಕೊಂಚ ಹೆಚ್ಚಾಗಿಯೇ ಇರಲಿದೆ'' ಎಂದು ತಿಳಿಸಿದರು. ಅಲ್ಲದೆ,  ``ನಸುಗೆಂಪು ಚೆಂಡಿನಲ್ಲಿ ಆಡಲಿದ್ದೇವೆಂಬ ವಿಚಾರವೇ ನನ್ನಲ್ಲಿ ಭಾರಿ ರೋಮಾಂಚನ ಉಂಟು ಮಾಡಿದೆ. ಈ ಬಣ್ಣದ ಚೆಂಡುಗಳು ಬ್ಯಾಟ್ಸಮನ್ ಬೇಗನೇ ಗೋಚರಿಸದೇ ಭಾರಿ  ಗಲಿಬಿಲಿಗೊಳಿಸುವುದರಿಂದ ಬೌಲರ್ ಸ್ನೇಹಿಯಾಗಿ ಇದು ಕಾರ್ಯನಿರ್ವಹಿಸುವ ವಿಶ್ವಾಸವಿದೆ'' ಎಂದು ಸ್ಟಾರ್ಕ್ ಪ್ರತಿಕ್ರಿಯಿಸಿದ್ದಾರೆ.

ಇನ್ನು ಮೂರು ಪಂದ್ಯ ಸರಣಿಯ ಮೊದಲ ಪಂದ್ಯದಲ್ಲಿ 208 ರನ್‍ಗಳ ಭರ್ಜರಿ ಗೆಲುವು ಸಾಧಿಸಿರುವ ಆಸ್ಟ್ರೇಲಿಯಾ ಇದೀಗ ಸರಣಿ ಮೇಲೆ ಕಣ್ಣಿಟ್ಟಿದೆ. ಪರ್ತ್ ಟೆಸ್ಟ್ ಡ್ರಾ ಕಂಡಿದೆ. ಎರಡೂ ಟೆಸ್ಟ್  ಪಂದ್ಯಗಳಲ್ಲಿ ಅಮೋಘ ಶತಕ ದಾಖಲಿಸಿರುವ ಡೇವಿಡ್ ವಾರ್ನರ್ ಮತ್ತೊಮ್ಮೆ ಕಿವೀಗಳನ್ನು ಕಾಡಲು ಅಣಿಯಾಗಿದ್ದಾರೆ. ಇನ್ನು ಕೊನೆಯ ಪಂದ್ಯದಲ್ಲಿ ಗೆಲುವು ಸಾಧಿಸಿ ಸರಣಿಯನ್ನು ಸಮ  ಮಾಡಿಕೊಳ್ಳಲು ಬ್ರೆಂಡನ್ ಮೆಕಲಮ್ ಸಾರಥ್ಯದ ನ್ಯೂಜಿಲೆಂಡ್ ತಂತ್ರ ಹೆಣೆದಿದೆ.

ಆದಾಗ್ಯೂ ಪ್ರಮುಖ ವೇಗಿ ಮಿಚೆಲ್ ಜಾನ್ಸನ್ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಹೇಳಿರುವುದು ಆಸ್ಟ್ರೇಲಿಯಾದ ಬೌಲಿಂಗ್ ವಿಭಾಗವನ್ನು ಒಂದಷ್ಟು ಚಿಂತೆಗೆ ಹಚ್ಚಿದೆ. ಆದರೆ, ಮಿಚೆಲ್ ಸ್ಟಾರ್ಕ್ ಅವರ ಕೊರತೆಯನ್ನು ಸಮರ್ಥವಾಗಿ ತುಂಬುವ ವಿಶ್ವಾಸದಲ್ಲಿದ್ದಾರೆ. ಇತ್ತ ಎರಡನೇ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಕೇನ್ ವಿಲಿಯಮ್ಸನ್ ಆಸ್ಟ್ರೇಲಿಯಾ ವಿರುದ್ಧ ಮತ್ತೆ ತಿರುಗೇಟು ನೀಡಲು ಸಿದ್ಧವಾಗಿದ್ದಾರೆ.

ಮುಗಿಬಿದ್ದ ಪ್ರೇಕ್ಷಕರು

ಚೊಚ್ಚಲ ಹೊನಲು ಬೆಳಕಿನ ಟೆಸ್ಟ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಮುಂಗಡ ಬುಕಿಂಗ್‍ಗಾಗಿ ಕ್ರಿಕೆಟ್ ಪ್ರೇಮಿಗಳು ಅಡಿಲೇಡ್ ಕ್ರೀಡಾಂಗಣದ ಸಿಬ್ಬಂದಿಯನ್ನು ಸಂಪರ್ಕಿಸುತ್ತಿದ್ದು, ಪಂದ್ಯದ  ಮೊದಲ ದಿನವೇ ಸುಮಾರು 40 ಸಾವಿರ ಪ್ರೇಕ್ಷಕರು ಸಾಕ್ಷಿಯಾಗಲಿದ್ದಾರೆಂದು ಅಂದಾಜಿಸಲಾಗಿದೆ. ಇದೇ ಅಡಿಲೇಡ್ ನಲ್ಲಿ 2008ರಲ್ಲಿ ಈ ತಂಡಗಳು ಟೆಸ್ಟ್ ಪಂದ್ಯವೊಂದರಲ್ಲಿ  ಮುಖಾಮುಖಿಯಾಗಿದ್ದಾಗ  ಮೊದಲ ದಿನ ಹಾಜರಿದ್ದ ಪ್ರೇಕ್ಷಕರ ಸಂಖ್ಯೆ 16 ಸಾವಿರವಷ್ಟೇ!

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com