ಬೆಂಗಳೂರು: ಪಶ್ಚಿಮ ಬಂಗಾಳ ನಾಯಕ ಮನೋಜ್ ತಿವಾರಿ ಶತಕ ಮತ್ತು ನವೀದ್ ಅಹಮದ್ ಅರ್ಧ ಶತಕದ ನೆರವಿನಿಂದ ಬಂಗಾಳ ತಂಡ ಕರ್ನಾಟಕ ವಿರುದ್ಧ ಡ್ರಾ ಸಾಧಿಸಲು ಸಫಲವಾಗಿದ್ದು, ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದ ಮೇಲೆ ಕರ್ನಾಟಕಕ್ಕೆ 3 ಅಂಕ ಲಭಿಸಿದೆ.
ಕಡೆಗೂ ಕರ್ನಾಟಕ ಬೌಲರ್ಗಳ ಕೈ ಹಿಡಿಯಲಿಲ್ಲ. ಮೊದಲ ಪಂದ್ಯದಲ್ಲಿ ಇನಿಂಗ್ಸ್ ಹಿನ್ನಡೆ ಅನುಭವಿಸಿ 1 ಅಂಕಕ್ಕೆ ತೃಪ್ತಿಪಟ್ಟುಕೊಂಡಿದ್ದ ಹಾಲಿ ಚಾಂಪಿಯನ್ ಕರ್ನಾಟಕ, ಪ್ರಸಕ್ತ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ತವರಿನಲ್ಲಿ ಗೆಲುವಿನ ಅಭಿಯಾನ ಆರಂಭಿಸುವ ಕನಸು ಈಡೇರಲಿಲ್ಲ. ಇನಿಂಗ್ಸ್ ಗೆಲುವಿನ ಲೆಕ್ಕಾಚಾರದಲ್ಲಿದ್ದ ವಿನಯ ಕುಮಾರ್ ನೇತೃತ್ವದ ಪಡೆ, ಬಂಗಾಳ ನಾಯಕ ಮನೋಜ್ ತಿವಾರಿ (103*ರನ್, 197 ಎಸೆತ, 13 ಬೌಂಡರಿ) ಹಾಗೂ ನವೀದ್ ಅಹಮದ್ (95ರನ್, 248 ಎಸೆತ, 16 ಬೌಂಡರಿ) ಶತಕ ವಂಚಿತ ಬ್ಯಾಟಿಂಗ್ನಿಂದಾಗಿ ನಿರಾಸೆಯಲ್ಲಿ ಮುಳುಗಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯಗೊಂಡ ಪಂದ್ಯದಲ್ಲಿ 2 ವಿಕೆಟ್ಗೆ 58ರನ್ಗಳಿಂದ ದಿನದಾಟ ಆರಂಭಿಸಿದ ಪ್ರವಾಸಿ ಬಂಗಾಳ ತಂಡ 4 ವಿಕೆಟ್ಗೆ 249 ರನ್ಗಳಿಸಿದ್ದ ವೇಳೆ ಮಳೆ ಸುರಿದ ಕಾರಣ ಪಂದ್ಯ ಸ್ಥಗಿತಗೊಳಿಸಲಾಯಿತು. ಭಾರಿ ಮಳೆಯಿಂದಾಗಿ ದಿನದಾಟದ ಅಂತಿಮ ಅವಧಿಯ ಸುಮಾರು 57 ನಿಮಿಷಗಳ ಆಟ ರದ್ದುಗೊಂಡಿತು. ಈ ವೇಳೆಗೆ ಕರ್ನಾಟಕದ ಮೊದಲ ಇನಿಂಗ್ಸ್ ಮುನ್ನಡೆಯ 225ರನ್ ಚುಕ್ತಾ ಮಾಡಿದ್ದ ಪ್ರವಾಸಿ ತಂಡ 24 ರನ್ಗಳ ಅಲ್ಪಮುನ್ನಡೆ ಗಳಿಸಿತ್ತು. ಮೊದಲ ಇನಿಂಗ್ಸ್ನಲ್ಲಿ ಬಂಗಾಳ 312ರನ್ಗಳಿಸಿದ್ದರೆ, ಕರ್ನಾಟಕ 9 ವಿಕೆಟ್ಗೆ 537ರನ್ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಇದರಿಂದ 2 ಪಂದ್ಯಗಳಿಂದ 4 ಅಂಕ ಸಂಪಾದಿಸಿರುವ ಕರ್ನಾಟಕ ‘ಬಿ’ ಗುಂಪಿನಲ್ಲಿ 4 ಸ್ಥಾನ ಪಡೆಯಿತು.
Advertisement