
ನವದೆಹಲಿ: ಶ್ರೀಲಂಕಾ ವಿರುದ್ಧ ನಡೆದ ಟೆಸ್ಟ್ ಪಂದ್ಯವನ್ನು ಗೆಲ್ಲುವಲ್ಲಿ ಮಹತ್ತರ ಪಾತ್ರವಹಿಸಿದ ಇಶಾಂತ್ ಶರ್ಮಾ ಅವರ ಬೌಲಿಂಗ್ ಬಗ್ಗೆ ಈ ಹಿಂದೆ ಅಪಸ್ವರಗಳು ಕೇಳಿ ಬಂದಿದ್ದವು. ಕೊಲಂಬೊದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯವನ್ನಾಡಲು ಇಶಾಂತ್ ಶರ್ಮಾರನ್ನು ಆಯ್ಕೆ ಮಾಡುವ ಬಗ್ಗೆಯೂ ಸಂಶಯವಿತ್ತು.
ಇಶಾಂತ್ ಶರ್ಮಾರ ಆಕ್ರಮಣಕಾರಿ ಬೌಲಿಂಗ್ ಶೈಲಿ ಬಗ್ಗೆ ಆಗಾಗ್ಗೆ ಟೀಕೆಗಳೂ ವ್ಯಕ್ತವಾಗಿದ್ದವು. ಏತನ್ಮಧ್ಯೆ ಭಾರತದ ಮಾಜಿ ಕ್ರಿಕೆಟಿಗ ಬಿಷನ್ ಸಿಂಗ್ ಬೇಡಿ ಇಶಾಂತ್ ವರ್ತನೆ ಸಹನೀಯವಲ್ಲ ಎಂದೂ ಹೇಳಿದ್ದರು. ಆದರೆ ಇಶಾಂತ್ ಶರ್ಮಾರ ಈ ಆಕ್ರಮಣಾಕಾರಿ ಶೈಲಿಯನ್ನು ಕ್ರಿಕೆಟಿಗ ಎಸ್. ಶ್ರೀಶಾಂತ್ ಪ್ರಶಂಸಿಸಿದ್ದಾರೆ.
ಫಾಸ್ಟ್ ಬೌಲರ್‌ನ ವಂಶವಾಹಿನಿಯಲ್ಲಿಯೇ ಆಕ್ರಮಣಾಕಾರಿ ಶೈಲಿ ಮೈಗೂಡಿರುತ್ತದೆ. ಆಕ್ರಮಣಾಕಾರಿ ಶೈಲಿ ಇಲ್ಲದೇ ಇದ್ದರೆ ಅಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಿಲ್ಲ. ಆಕ್ರಮಣಾಕಾರಿ ಶೈಲಿ ಎಂದರೆ ಏನು?ಒಬ್ಬ ಫಾಸ್ಟ್ ಬೌಲರ್‌ನ ಪ್ರತಿಭೆಯನ್ನು ಹೊರ ತರುವ ಗುಣ ಅದು ಎಂದು ಸುದ್ದಿ ಮಾಧ್ಯಮವೊಂದರಲ್ಲಿ ಮಾತನಾಡಿದ ಶ್ರೀಶಾಂತ್ ಹೇಳಿದ್ದಾರೆ.
ಅದೇ ವೇಳೆ ಇಶಾಂತ್‌ನ ಹುರಿದುಂಬಿಸಿದ, 22 ವರ್ಷಗಳ ನಂತರ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ನಾಯಕ ವಿರಾಟ್ ಕೊಹ್ಲಿಯನ್ನು ಶ್ರೀಶಾಂತ್ ಪ್ರಶಂಸಿಸಿದ್ದಾರೆ.
ಇಶಾಂತ್ ಶರ್ಮಾರನ್ನು ಕೊಹ್ಲಿ ಬೆನ್ನು ತಟ್ಟುತ್ತಿರುವುದು ನೋಡಿದಾಗ ಖುಷಿಯಾಯ್ತು. ವಿರಾಟ್ ಸ್ವಭಾವತಃ ಆಕ್ರಮಣಾಕಾರಿ. ನನಗೆ ಅವರ ಶೈಲಿ ಇಷ್ಟ. ಭಾರತೀಯ ಕ್ರಿಕೆಟ್ ಮತ್ತು ವಿಶ್ವ ಕ್ರಿಕೆಟ್‌ಗೆ ಅಂಥಾ ನಾಯಕನ ಅಗತ್ಯವಿದೆ ಎಂದು ಶ್ರೀಶಾಂತ್ ಅಭಿಪ್ರಾಯಪಟ್ಟಿದ್ದಾರೆ.
Advertisement