ಬೆಳಗಾವಿ ಪ್ಯಾಂಥರ್ಸ್ ಶುಭಾರಂಭ

ನಾಯಕ ಆರ್. ವಿನಯ್ ಕುಮಾರ್ ಅವರ ಆಲ್ರೌಂಡ್ ಆಟದ ನೆರವಿನಿಂದ ಬೆಳಗಾವಿ ಪ್ಯಾಂಥರ್ಸ್ ತಂಡ ನಾಲ್ಕನೇ ಆವೃತ್ತಿಯ ಚೊಚ್ಚಲ ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ ಶುಭಾರಂಭ ಮಾಡಿದೆ...
ಪಂದ್ಯದ ರೋಚಕ ಕ್ಷಣ (ಸಂಗ್ರಹ ಚಿತ್ರ)
ಪಂದ್ಯದ ರೋಚಕ ಕ್ಷಣ (ಸಂಗ್ರಹ ಚಿತ್ರ)

ಹುಬ್ಬಳ್ಳಿ: ನಾಯಕ ಆರ್. ವಿನಯ್ ಕುಮಾರ್ ಅವರ ಆಲ್ರೌಂಡ್ ಆಟದ ನೆರವಿನಿಂದ ಬೆಳಗಾವಿ ಪ್ಯಾಂಥರ್ಸ್ ತಂಡ ನಾಲ್ಕನೇ ಆವೃತ್ತಿಯ ಚೊಚ್ಚಲ ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ ಶುಭಾರಂಭ ಮಾಡಿದೆ.

ಗುರುವಾರ ಇಲ್ಲಿನ ರಾಜನಗರದ ಕೆಎಸ್ ಸಿಎ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕಳೆದ ಬಾರಿಯ ರನ್ನರ್ ಅಪ್ ಬೆಳಗಾವಿ ಪ್ಯಾಂಥರ್ಸ್ ತಂಡ 8 ವಿಕೆಟ್‍ಗಳ ಅಂತರದಲ್ಲಿ ಮಂಗಳೂರು ಯುನೈಟೆಡ್ ತಂಡವನ್ನು ಮಣಿಸಿತು. ಟಾಸ್ ಗೆದ್ದ ಬೆಳಗಾವಿ ಪ್ಯಾಂಥರ್ಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಮಂಗಳೂರು ಯುನೈಟೆಡ್  ತಂಡ 20  ಓವರ್ ಗಳಲ್ಲಿ 5 ವಿಕೆಟ್ ಗೆ 141 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಬೆಳಗಾವಿ ಪ್ಯಾಂಥರ್ಸ್ ಇನ್ನೂ 12 ಎಸೆತಗಳು ಬಾಕಿ ಇರುವಂತೆಯೇ, 18 ಓವರ್ ಗಳಲ್ಲಿಯೇ ಕೇವಲ 2 ವಿಕೆಟ್  ಕಳೆದುಕೊಂಡು 144 ರನ್ ದಾಖಲಿಸಿ ಜಯದ ನಗೆಬೀರಿತು.

ಮಿಂಚಿದ ವಿನಯ್: ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಬೆಳಗಾವಿ ಪ್ಯಾಂಥರ್ಸ್ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತಾದರೂ, ನಂತರ ಉತ್ತಮ ಪ್ರದರ್ಶನ ನೀಡಿ ಗೆಲುವಿನ ದಡ ಸೇರಿತು. ಮೂರನೇ ವಿಕೆಟ್‍ಗೆ ಜತೆಯಾದ ಆರ್. ವಿನಯ್ ಹಾಗೂ ಆರ್. ಜೊನಾಥನ್ 122 ರನ್ ಗಳ ಭರ್ಜರಿ ಜತೆಯಾಟ ನೀಡುವ ಮೂಲಕ ತಂಡಕ್ಕೆ ಸುನಾಯಾಸ ಜಯ ತಂದಿತ್ತರು. 50 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನೊಂದಿಗೆ ವಿನಯ್ ಅಜೇಯ 64 ರನ್ ಗಳಿಸಿದರು. ಜೊನಾಥನ್ 43 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನೊಂದಿಗೆ ಅಜೇಯ 62 ರನ್ ಗಳಿಸಿದರು. ಮಂಗಳೂರು ತಂಡದ ರೋನಿತ್ ಹಾಗೂ ಮಿತ್ರಕಾಂತ್ ತಲಾ 1 ವಿಕೆಟ್ ಪಡೆದರು.

ಅವಿನಾಶ್ ಶತಕ: ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಗೆ ಇಳಿದ ಮಂಗಳೂರು ಯುನೈಟೆಡ್ ತಂಡಕ್ಕೆ ನಿರೀಕ್ಷಿತ ಮಟ್ಟದ ಆರಂಭ ಸಿಗಲಿಲ್ಲ. ನಾಯಕ ರೋನಿತ್ ಸಬರ್ವಾಲ್ (0)  ಆರಂಭದಲ್ಲೇ ವಿಕೆಟ್ ಒಪ್ಪಿಸಿದರು. ನಂತರ ಬಂದ ಶಿಶಿರ್ ಭವಾನೆ (3) ಸಹ ಹೆಚ್ಚು ಹೊತ್ತು ಕ್ರೀಸ್‍ನಲ್ಲಿ ನಿಲ್ಲಲಿಲ್ಲ. ಸತತವಾಗಿ 2 ವಿಕೆಟ್ ಕಳೆದುಕೊಂಡ ಯುನೈಟೆಡ್ ಆರಂಭದಲ್ಲೇ ಆಘಾತ  ಎದುರಿಸಿತು. ಈ ವೇಳೆ ಮೈದಾನದಲ್ಲಿ ಜತೆಯಾದ ಕರುಣ್ ನಾಯರ್ (38) ಹಾಗೂ ಚಂದ್ರುಶೇಖರ್ ಅವಿನಾಶ್ (ಅಜೇಯ 50) ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.  ನಂತರ  ಬಂದ ರೋಹನ್ ಕದಮ್ ಕೇವಲ 3 ರನ್ ಗಳಿಸಿದರೆ, ಅರ್ಸದೀಪ್ ಸಿಂಗ್ ಬ್ರಾರ್ 36 ರನ್ ಗಳಿಸಿದರು. ಬೆಳಗಾವಿ ತಂಡದ ಪರ ಸ್ಟಾಲಿನ್  ಹೂವರ್ 2, ವಿನಯ್ ಹಾಗೂ ಹಾಗೂ ನಿತಿನ್ ಮುಲ್ಕಿ  ತಲಾ 1 ವಿಕೆಟ್ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com