
ನವದೆಹಲಿ: ಪ್ರೇಕ್ಷಕರಿಗೆ ಅಗೌರವ ತೋರಿದ ಪಾಕಿಸ್ತಾನ ಹಾಕಿ ತಂಡದ ಆಟಗಾರರು ಕ್ಷಮೆ ಯಾಚಿಸದ ಹೊರತು ಅವರಿಗೆ ಚಾಂಪಿಯನ್ಸ್ ಟ್ರೋಫಿ ಲೀಗ್ ನಲ್ಲಿ ಆಡಲು ಅವಕಾಶ ನೀಡುವುದಿಲ್ಲ ಎಂದು ಹಾಕಿ ಇಂಡಿಯಾ ಸಂಸ್ಥೆಯ ಅಧ್ಯಕ್ಷ ನರೇಂದ್ರ ಬಾತ್ರಾ ಅವರು ತಿಳಿಸಿದ್ದಾರೆ.
ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ವರ್ಷದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಆಟಗಾರರು ಮೈದಾನದಲ್ಲಿ ತೋರಿದ ದುರ್ವತನೆ ಕುರಿತು ಈ ವರೆಗೂ ಆಟಗಾರರು ಯಾವುದೇ ರೀತಿಯ ವಿಷಾಧ ವ್ಯಕ್ತಪಡಿಸಿಲ್ಲ. ನಾವು ಕೂಡ ಕ್ಷಮೆ ಯಾಚಿಸುತ್ತಾರೆಯೇ ಎಂದು ಕಾಯುತ್ತಿದ್ದೇವೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಅಂತಾರಾಷ್ಟ್ರೀಯ ಹಾಕಿ ಸಂಸ್ಥೆ ಇಬ್ಬರು ಆಟಗಾರರಿಗೆ ತಲಾ ಒಂದು ಪಂದ್ಯಗಳ ನಿಷೇಧ ಹೇರಿತ್ತು. ಹೀಗಿದ್ದು ಈ ವರೆಗೂ ಆಟಗಾರರು ಯಾವುದೇ ರೀತಿಯ ಕ್ಷಮೆ ಯಾಚಿಸಿಲ್ಲ. ಹೀಗಾಗಿ ಟೂರ್ನಿಯಲ್ಲಿ ಅವರು ಪಾಲ್ಗೊಳ್ಳುವ ಕುರಿತು ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.
ಕಳೆದ 2014ರ ಡಿಸೆಂಬರ್ ನಲ್ಲಿ ಭುವನೇಶ್ವರದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಹಾಕಿ ಲೀಗ್ ಪಂದ್ಯದ ಪೈನಲ್ ಪಂದ್ಯದಲ್ಲಿ ಅತಿಥೇಯ ಭಾರತ ತಂಡದ ವಿರುದ್ಧ ಪಾಕಿಸ್ತಾನ ರೋಚಕ ಜಯ ಸಾಧಿಸಿತ್ತು. ಪಂದ್ಯದಲ್ಲಿ ಜಯ ದಾಖಲಿಸುತ್ತಿದ್ದಂತೆಯೇ ಪ್ರೇಕ್ಷಕರತ್ತ ಓಡಿ ಬಂದ ಪಾಕಿಸ್ತಾನ ತಂಡದ ಆಟಗಾರರು ಮೈದಾನದಲ್ಲಿಯೇ ಅಸಭ್ಯವಾಗಿ ವರ್ತಿಸಿದರು. ಅಲ್ಲದೆ ಅಶ್ಲೀಲ ಪದಗಳಿಂದ ಭಾರತ ತಂಡದ ಬೆಂಬಲಿಗರನ್ನು ನಿಂದಿಸಿದರು. ಇದು ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಅಂತಾರಾಷ್ಟ್ರೀಯ ಹಾಕಿ ಸಂಸ್ಥೆ ಕೂಡ ಈ ಘಟನೆಯನ್ನು ಖಂಡಿಸಿ, ಇಬ್ಬರು ಆಟಗಾರರಿಗೆ ತಲಾ ಒಂದು ಪಂದ್ಯಗಳ ನಿಷೇಧ ಹೇರಿ ಛೀಮಾರಿ ಹಾಕಿತ್ತು.
Advertisement