
ರ್ಯಾಪರ್ ಡ್ರೇಕ್ ಎಂಬ ಹೆಸರು ನೆನಪಿದ್ದರೆ, ಮರೆತುಬಿಡಿ. ಯಾಕೆಂದರೆ ಈತನದು ಐರನ್‍ಲೆಗ್ ಎಂದು ಬಲ್ಲವರೆಲ್ಲ ಮಾತಾಡಿಕೊಳ್ಳುತ್ತಾರೆ. ಮೊನ್ನೆ ಮೊನ್ನೆ ಸೆರೆನಾ ವಿಲಿಯಮ್ಸ್ ಯುಎಸ್ ಓಪನ್ ಟೆನಿಸ್ ಮಹಿಳಾ ಸೆಮಿಫೈನಲ್ ಪಂದ್ಯಾಟದಲ್ಲಿ ಸೋತಳಲ್ಲ, ಅದಕ್ಕೆ ಕಾರಣ ಈತನೇ ಅಂತೆ. ಅಂದರೆ ಈತನೇನೂ ಈಕೆಯ ಕಾಲು ಮುರಿದಿಲ್ಲ. ಈತ ಮನಸಾರೆ ಅವಳ ಗೆಲುವನ್ನೇ ಹಾರೈಸಿದ್ದಾನೆ.
ಡ್ರೇಕ್‍ಗೂ ಸೆರೆನಾಗೂ ಹಲವು ವರ್ಷಗಳ ಗಾಢ ಗೆಳೆತನವಿದೆ. ಇಬ್ಬರ ಗೆಳೆತನದ ನಡುವೆ ಪ್ರೇಮದ ಪಲ್ಲವಿ ಕುಡಿಯೊಡೆದಿದೆ ಎಂಬ ಸುದ್ದಿಯೂ ಇದೆ. ತನ್ನ ಗೆಳತಿಯ ಪಂದ್ಯಾಟ ನೋಡಲು ಈತನೂ ಬಂದಿದ್ದ. ಸೆರೆನಾಳ ಬಿರುಸಿನ ಸರ್ವ್‍ಗಳಿಗೆ ಅಷ್ಟೇ ತೀವ್ರ ಪ್ರೊತ್ಸಾಹ
ಕೊಟ್ಟಿದ್ದ. ಆದರೇನು ಮಾಡುತ್ತೀರಿ! ಈತ ಬೆಂಬಲಿಸಿದ ತಂಡಗಳೇ ಮಣ್ಣು ಮುಕ್ಕಿ ಹೋಗುವ ದಾಖಲೆ ಈತನ ಹೆಸರಿನಲ್ಲಿದೆ!
ಇದನ್ನು ಆಧುನಿಕ ಮೂಢನಂಬಿಕೆ ಎಂದು ತಳ್ಳಿಹಾಕುತ್ತೀರೋ, ನಂಬುತ್ತೀರೋ ನಿಮಗೇ ಬಿಟ್ಟದ್ದು. ಈತ ಈ ಹಿಂದೆ ಯಾವ ಪಂದ್ಯಗಳಿಗೆ
ಹೋಗಿ ಯಾವ ತಂಡಗಳಿಗೆ `ಚಿಯರ್' ಹೇಳಿದ್ದಾನೋ ಆ ತಂಡಗಳೆಲ್ಲ ದಯನೀಯವಾಗಿ ಸೋತಿವೆ. ಕೆಲವು ಸಂಶೋಧಕರು ಇಂಥ ಘಟನೆಗಳ
ಪಟ್ಟಿಯನ್ನೇ ಕೊಟ್ಟಿದ್ದಾರೆ. ಉದಾಹರಣೆಗೆ, 2013ರಲ್ಲಿ ಈತ ಟೊರಾಂಟೊ ರ್ಯಾಪ್ಟರ್ಸ್ ತಂಡದ ರಾಯಭಾರಿಯಾಗಿ ಹೋಗಿದ್ದ. ತಂಡ ಸೋತಿತ್ತು.
ಇನ್ನೊಂದು ತಮಾಷೆಯ ಸಂಗತಿಯಲ್ಲಿ, ಕೆಂಟುಕಿ ಯೂನಿವರ್ಸಿಟಿಯ ಬಾಸ್ಕೆಟ್‍ಬಾಲ್ ತಂಡ `ನಮ್ಮ ಜೊತೆ ಬರಬೇಡ' ಎಂದು ಲಿಖಿತ ನೋಟಿಸ್ ನೀಡಿತ್ತು. ಹೀಗಾಗಿ ಡ್ರೇಕ್ ಯಾರಿಗೂ ಬೇಡದ ಆಗಿಹೋಗಿದ್ದಾನೆ. ರಾಬೆರ್ಟಾ ವಿನ್ಸಿಯ ಮುಂದೆ ಸೋಲುವ ಮೂಲಕ ಸೆರೆನಾ 33 ಪಂದ್ಯಗಳಲ್ಲಿ ಯುಎಸ್ ಓಪನ್ ಗೆಲ್ಲುವ, 27 ಗ್ರ್ಯಾನ್ ಸ್ಲಾಮ್ ಗೆಲ್ಲುವ ದಾಖಲೆಯ ಕನಸು ಮುರಿದಿದೆ. ಟ್ವಿಟ್ಟರ್‍ನಲ್ಲಿ ಈಕೆಯ ಕೆಲ ಅಭಿಮಾನಿಗಳು `ಡ್ರೇಕ್‍ನನ್ನು ಗಲ್ಲಿಗೆ ಹಾಕಿ' ಎಂದಿದ್ದಾರೆ. ಡ್ರೇಕ್ ಒಬ್ಬನೇ ಇಂಥ ನಿಂದನೆಗೆ ಈಡಾದವನಲ್ಲ. ಈ ಹಿಂದೆ ನಮ್ಮ ಅನುಷ್ಕಾ ಶರ್ಮಾಳನ್ನೂ ಕೂಡ ಈ ನಿಷ್ಕಾರಣ ನಿಂದೆ ಕಾಡಿದ್ದುಂಟು. ಕಳೆದ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ತಂಡ ಸೋತಾಗ, ಆ ಸೋಲಿನ ಹೊಣೆಯನ್ನು ಆತನ ಪ್ರೇಯಸಿ, ಸ್ಟೇಡಿಯಂನಲ್ಲಿ ಉತ್ಸಾಹದ ಬುಗ್ಗೆಯಾಗಿ ಚಿಮ್ಮುತ್ತಿದ್ದ ಅನುಷ್ಕಾ ತಲೆಗೆ ಕಟ್ಟಲಾಗಿತ್ತು. ಕಾಲಕ್ಕೆ ತಕ್ಕಂತೆ ನಂಬಿಕೆಗಳು ಬದಲಾಗುತ್ತವೆ, ಮೂಢನಂಬಿಕೆಗಳೂ.
Advertisement