ಬಾಂಗ್ಲಾಕ್ಕೆ ತಿರುಗೇಟು ನೀಡಲು ಅಣಿಯಾದ ಭಾರತ

ಮುಂಬರುವ ದ.ಆಫ್ರಿಕಾ ವಿರುದ್ಧದ ಮಹತ್ವದ ಸರಣಿಗೆ ಸೂಕ್ತ ರೀತಿಯ ತಯಾರಿ ಎಂಬಂತೆ ಪರಿಗಣಿಸಲಾಗಿರುವ ಪ್ರವಾಸಿ ಬಾಂಗ್ಲಾದೇಶ 'ಎ' ತಂಡದ ವಿರುದ್ಧದ...
ಭಾರತ ಎ ತಂಡ
ಭಾರತ ಎ ತಂಡ
ಬೆಂಗಳೂರು: ಮುಂಬರುವ ದ.ಆಫ್ರಿಕಾ ವಿರುದ್ಧದ ಮಹತ್ವದ ಸರಣಿಗೆ ಸೂಕ್ತ ರೀತಿಯ ತಯಾರಿ ಎಂಬಂತೆ ಪರಿಗಣಿಸಲಾಗಿರುವ ಪ್ರವಾಸಿ ಬಾಂಗ್ಲಾದೇಶ 'ಎ' ತಂಡದ ವಿರುದ್ಧದ ಮೂರು ಅನಧಿಕೃತ ಏಕದಿನ ಸರಣಿಗೆ ಬುಧವಾರ ಚಾಲನೆ ಸಿಗಲಿದ್ದು, ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಮಾರ್ಗದರ್ಶನದ ಆತಿಥೇಯ ಭಾರತ 'ಎ' ತಂಡ ಶುಭಾರಂಭದ ಗುರಿ ಹೊತ್ತಿದೆ. 
ಜತೆಗೆ ಮೂರು ತಿಂಗಳ ಹಿಂದೆ ಇದೇ ಬಾಂಗ್ಲಾದೇಶ ಎದುರು ಅನುಭವಿಸಿದ 1-2 ಟೆಸ್ಟ್ ತಿರುಗೇಟು ನೀಡಲೂ ಸಂಕಲ್ಪ ತೊಟ್ಟಿದೆ. ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಏಕದಿನ ಸರಣಿಯನ್ನು ಜಯಿಸುವ ಮೂಲಕ ಹರಿಣಗಳ ವಿರುದ್ಧದ ಪಂದ್ಯಾವಳಿಗೆ ಭಾರತ ತಕ್ಕ ಸಿದ್ಧತೆ ಮಾಡಿಕೊಳ್ಳಬೇಕಿದೆ. ಈ ದಿಸೆಯಲ್ಲಿ ಕರ್ನಾಟಕದ ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆ, ಕರುಣ್ ನಾಯರ್ ಅಲ್ಲದೆ, ರಾಷ್ಟ್ರೀಯ ತಂಡದ ಎಡಗೈ ಆಟಗಾರ ಸುರೇಶ್ ರೈನಾ, ಧವಳ್ ಕುಲಕರ್ಣಿ ಹಾಗೂ ಕರಣ್ ಶರ್ಮಾ ಕೂಡ ಈ ಸರಣಿಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಅಜಿಂಕ್ಯ ರಹಾನೆ ಸಾರಥ್ಯದಲ್ಲಿ ಜಿಂಬಾಬ್ವೆ ಪ್ರವಾಸ ಕೈಗೊಂಡಿದ್ದ ಭಾರತದ ಪರ ಜಾಧವ್ ಹಾಗೂ ಮನೀಶ್ ಪಾಂಡೆ ಉತ್ತಮ ಪ್ರದರ್ಶನ ನೀಡಿದ್ದರು. ಈ ಈರ್ವರೂ ದ.ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆಯಾಗಿರುವ 30 ಸಂಭವನೀಯ ಆಟಗಾರರಲ್ಲಿ ಇದ್ದಾರೆ. ಬುಧವಾರದ ಪಂದ್ಯದಲ್ಲಿ ಸುರೇಶ್ ರೈನಾ ಎಲ್ಲರ ಗಮನ ಸೆಳೆದಿದ್ದಾರೆ. ಏಕೆಂದರೆ, ಸರಿಸುಮಾರು 3 ತಿಂಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‍ಗೆ ಮರಳಿದ್ದಾರೆ. ಇದೇ ಬಾಂಗ್ಲಾದೇಶ ಪ್ರವಾಸದಲ್ಲಿ ದಯನೀಯ ಸೋಲನುಭವಿಸಿದ ಬಳಿಕ ನಡೆಯುತ್ತಿರುವ ಪ್ರಮುಖ ಪಂದ್ಯಾವಳಿಯಲ್ಲಿ ರೈನಾ ಆಡುತ್ತಿದ್ದಾರೆ. ಈ ಮಧ್ಯೆ ತಂಡವನ್ನು ಮುನ್ನಡೆಸುತ್ತಿರುವ ಉನ್ಮುಕ್ತ್ ಚಾಂದ್ ಬಾಂಗ್ಲಾದೇಶ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಭರವಸೆಯಲ್ಲಿದ್ದಾರೆ. 
ಚೆನ್ನೈನಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಅಭೂತಪೂರ್ವ ಪ್ರದರ್ಶನದೊಂದಿಗೆ ಸರಣಿಯನ್ನು ಗೆದ್ದ ಚಾಂದ್ ಬಳಗ, ಇದೀಗ ಬಾಂಗ್ಲಾದೇಶ ವಿರುದ್ಧವೂ ಸರಣಿ ಗೆಲ್ಲುವ ಛಲ ತೊಟ್ಟಿದೆ. ಅದರಲ್ಲೂ ಕರ್ನಾಟಕದ ಮಯಾಂಕ್ ಅಗರ್ವಾಲ್ ದ.ಆಫ್ರಿಕಾ ಹಾಗೂ ಆಸ್ಟ್ರೇಲಿಯಾ 'ಎ' ತಂಡದ ವಿರುದ್ಧ ಎರಡು ಭರ್ಜರಿ ಶತಕಗಳೊಂದಿಗೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಇನ್ನು ಮೊಮಿನಲ್ ಹಕ್ ಸಾರಥ್ಯದ ಪ್ರವಾಸಿ ತಂಡದಲ್ಲಿ ನಾಸಿರ್ ಹುಸೇನ್, ಶಬ್ಬೀರ್ ರೆಹಮಾನ್, ಸೌಮ್ಯ ಸರ್ಕಾರ್‍ರಂಥ ಪ್ರಮುಖ ಆಟಗಾರರಿದ್ದು, ಆತಿಥೇಯ ತಂಡದ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಭರವಸೆಯಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com