ಶ್ರೀನಿ ಮತ್ತೆ ರಂಗಪ್ರವೇಶ?

ಜಗಮೋಹನ್ ದಾಲ್ಮಿಯಾ ಅವರ ನಿಧನದಿಂದಾಗಿ ತೆರವಾಗಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಅಧ್ಯಕ್ಷಗಾದಿಗಾಗಿ ಚುರುಕಿನ...
ಎನ್.ಶ್ರೀನಿವಾಸನ್
ಎನ್.ಶ್ರೀನಿವಾಸನ್

ನವದೆಹಲಿ: ಜಗಮೋಹನ್ ದಾಲ್ಮಿಯಾ ಅವರ ನಿಧನದಿಂದಾಗಿ ತೆರವಾಗಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಅಧ್ಯಕ್ಷಗಾದಿಗಾಗಿ ಚುರುಕಿನ ಚಟುವಟಿಕೆ ಗರಿಗೆದರಿದ್ದು, ಐಸಿಸಿ ಅಧ್ಯಕ್ಷ ಎನ್.ಶ್ರೀನಿವಾಸನ್ ಮತ್ತೊಮ್ಮೆ ರಂಗಪ್ರವೇಶ ಮಾಡುವ ಸಾಧ್ಯತೆ ಇದೆ.

ದಾಲ್ಮಿಯಾ ನಿಧನಾನಂತರ ಬಿಸಿಸಿಐ ಇಬ್ಬಣವಾಗಿ ಒಡೆದುಹೋಗಿದ್ದು,ಮುಂದಿನ ಬಿಸಿಸಿಐ ಅಧ್ಯಕ್ಷರನ್ನಾಗಿ ಜಾರ್ಖಂಡ್‍ನ ಅಭಿಷೇಕ್ ಚೌಧರಿ ಅವರನ್ನು ನಿಯುಕ್ತಿಗೊಳಿಸಬೇಕೆಂದು ಪೂರ್ವ ವಲಯ ಪಟ್ಟು ಹಿಡಿದಿದೆ.ಶ್ರೀನಿವಾಸನ್‍ಗೆ ಅತ್ಯಂತ ನಿಷ್ಠರಾಗಿರುವ ಅಮಿತಾಬ್ ಚೌಧರಿ ಅವರನ್ನೇ ಅಧ್ಯಕ್ಷಗಾದಿಗೆ ಏರಿಸಬೇಕೆಂಬ ಕೂಗೆದ್ದಿರುವುದರಿಂದ ಚುನಾವಣೆ ನಡೆಯುವುದು ಬಹುತೇಕ ಖಚಿತವಾದಂತಾಗಿದೆ.

ಆದಾಗ್ಯೂ ಬಿಸಿಸಿಐ ಮಹಾಸಭೆಯಲ್ಲಿ ಶ್ರೀನಿವಾಸನ್ ಪಾಲ್ಗೊಳ್ಳಬೇಕೇ ಬೇಡವೇ ಎಂಬ ಅರ್ಜಿ ಸರ್ವೋಚ್ಛ ನ್ಯಾಯಾಲಯದಲ್ಲಿ ದಾಖಲಾಗಿದ್ದು, ನ್ಯಾಯಾಲಯದ ಆದೇಶ ಕೂಡ ಬಿಸಿಸಿಐ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು, ಒಂದೊಮ್ಮೆ ಚುನಾವಣೆ ನಡೆದರೆ ಶ್ರೀನಿವಾಸನ್ ಕೃಪೆ ಯಾರಿಗೆ ಒಲಿಯುತ್ತದೋ ಅವರಿಗೆ ಬಿಸಿಸಿಐ ಗದ್ದುಗೆ ನಿಶ್ಚಿತ ಎಂದೂ ಹೇಳಲಾಗುತ್ತಿದೆ.

ಮುಂಬೈ ಕ್ರಿಕೆಟ್ ಸಂಸ್ಥೆಯ ಮುಖ್ಯಸ್ಥ ಹಾಗೂ ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರೂ ಹಾಗೂ ಪ್ರಭಾವಿ ರಾಜಕಾರಣಿಗಳೂ ಆಗಿರುವ ರಾಜೀವ್ ಶುಕ್ಲಾ ಹಾಗೂ ಶರದ್ ಪವಾರ್ ಕೂಡ ಬಿಸಿಸಿಐ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದರೂ, ಈ ಇಬ್ಬರಿಗೆ ಪೂರಕ ಬೆಂಬಲ ವ್ಯಕ್ತವಾಗುವುದು ಅಷ್ಟು ಸುಲಭ ಸಾಧ್ಯವಲ್ಲ ಎನ್ನಲಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಬಂಗಾಳ, ಅಸ್ಸಾಂ, ಜಾರ್ಖಂಡ್, ಒಡಿಶಾ, ತ್ರಿಪುರ ಮತ್ತು ರಾಷ್ಟ್ರೀಯ ಕ್ರಿಕೆಟ್ ಕ್ಲಬ್ (ಎನ್ ಸಿಸಿ) ಸೇರಿದ ಪೂರ್ವ ವಲಯದ ಒಟ್ಟು ಆರು ಮತಗಳನ್ನು ಸೆಳೆಯುವಲ್ಲಿ ಇವರು ವಿಫಲರಾಗಿದ್ದಾರೆ. ಏಕೆಂದರೆ, ಈ ಆರೂ ಸಂಸ್ಥೆಗಳು ಶ್ರೀನಿವಾಸನ್ ಅವರ ಕಟ್ಟಾ ಬೆಂಬಲಿಗರಾಗಿರುವುದರಿಂದ ಅಭಿಷೇಕ್ ಚೌಧರಿ ಆಯ್ಕೆ ಸರಾಗವಾಗಲಿದೆ ಎಂಬ ಮಾತೂ ಕೇಳಿಬಂದಿದೆ. ಒಂದೊಮ್ಮೆ ಶುಕ್ಲಾ ಹಾಗೂ ಪವಾರ್ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಮುಂದಾದದ್ದೇ ಆದರೆ, ಚುನಾವಣೆ ನಡೆಯದೆ ಗತ್ಯಂತರವಿಲ್ಲ. ಹಾಗಾದಾಗ ಅವಿರೋಧ ಆಯ್ಕೆ ನಡೆಯುವುದು ಸಾಧ್ಯವಿಲ್ಲದಾಗುತ್ತದೆ. ಐಸಿಸಿ ಹಾಗೂ ಬಿಸಿಸಿಐನ ಮಾಜಿ ಅಧ್ಯಕ್ಷರಾಗಿ ಈಗಾಗಲೇ ಸಾಕಷ್ಟು ಪಳಗಿರುವ ಎನ್ ಸಿಪಿ ಮುಖಂಡ ಶರದ್ ಪವಾರ್ ಕನಿಷ್ಠ ಪಕ್ಷ ತನಗೆ 16 ಮತಗಳು  ಖಚಿತವೆಂದು ಕಂಡುಬರುವುದಲ್ಲದೆ ಸರ್ಕಾರದ ಬೆಂಬಲವೂ ಅಗತ್ಯವಾಗಿದೆ.

``ಕಳೆದೆರಡು ದಿನಗಳಿಂದ ಪೂರ್ವ ವಲಯದ ಅ„ಕಾರಿಗಳು ನಿರಂತರ ಸಂಪರ್ಕದಲ್ಲಿದ್ದು ಪರಸ್ಪರ ಬಿಸಿಸಿಐ ಅಧ್ಯಕ್ಷ ಸ್ಥಾನದ ಬಗ್ಗೆ ಸಾಕಷ್ಟು ಚರ್ಚಿಸಿದ್ದು, ಅದರಂತೆ 2017ರವರೆಗೂ ಪೂರ್ವ ವಲಯದ ಅಭ್ಯರ್ಥಿಯೇ ಬಿಸಿಸಿಐ ಅಧ್ಯಕ್ಷರಾಗಿರಬೇಕೆಂದು ನಿರ್ಧರಿಸಿದ್ದಾರೆ. ಅದರಂತೆ ಪೂರ್ವ ವಲಯವೆಲ್ಲಾ ಅಭಿಷೇಕ್ ಚೌಧರಿ ಅವರನ್ನೇ ತಮ್ಮ ಅಭ್ಯರ್ಥಿಯನ್ನಾಗಿ ಆರಿಸಿಕೊಂಡಿದೆ'' ಎಂದು ಪೂರ್ವ ವಲಯದ ಬಿಸಿಸಿಐನ ಮುಖ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

``ಅಭಿಷೇಕ್ ಚೌಧರಿ ಐಪಿಎಸ್ ಅಧಿಕಾರಿಯಾಗಿದ್ದವರು. ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆ (ಜೆಎಸ್‍ಸಿಎ)ಯನ್ನು ನಿರ್ವಹಿಸಿರುವ ಅವರು, ಸರ್ವಸದಸ್ಯರ ಸಭೆಯಲ್ಲಿ ಭಾಗವಹಿಸಿ ಸಾಕಷ್ಟು ಅನುಭವಿಸಿದ್ದಾರೆ. ಕನಿಷ್ಟ ನಾಲ್ಕು ಪೂರ್ವ ವಲಯಗಳು ಅವರ ಬೆನ್ನಿಗಿವೆ.2017ರವರೆಗೂ ನಮ್ಮ ಸ್ಪರ್ಧೆಯಿದ್ದು, ಕನಿಷ್ಟ ಪೂರ್ವ ವಲಯದ ಅಭ್ಯರ್ಥಿಯೇ ಬಿಸಿಸಿಐಗಾದಿಗೇರಬೇಕು.ಹಾಗೊಂದು ವೇಳೆ ಆಗದೆ ಹೋದರೆ, ಚುನಾವಣೆ
ನಡೆಯುವುದನ್ನು ತಪ್ಪಿಸಲಾಗದು. ಪವಾರ್ ಪ್ರಬಲ ಸ್ಪರ್ಧಿ ಎನಿಸಿದರೂ, ಕೋಲ್ಕತಾ ಕ್ರಿಕೆಟ್ ಮಂಡಳಿ (ಸಿಎಬಿ) ಹಾಗೂ ದಾಲ್ಮಿಯಾ ಕ್ಲಬ್ ನಂತಿರುವ ಎನ್ ಸಿಸಿ ಅವರನ್ನು ಬೆಂಬಲಿಸುವುದಿಲ್ಲ ಎಂದು ಈ ಅಧಿಕಾರಿ ತಿಳಿಸಿದ್ದಾರೆ.

ಗದ್ದುಗೆಗಾಗಿ ರಾಜಕೀಯ ಆಟ ಶುರು:
ಸದ್ಯಕ್ಕೆ ಬಿಸಿಸಿಐ ಅಧ್ಯಕ್ಷ  ಸ್ಥಾನಕ್ಕೆ ಸಾಕಷ್ಟು ಪೈಪೋಟಿ ನಡೆಯುತ್ತಿದ್ದು, ರಾಜಕೀಯ ಆಟವೂ ಶುರುವಾಗಿದೆ.ಮಾಜಿ ಅಧ್ಯಕ್ಷರಾದ ಶರದ್ ಪವಾರ್ ಹಾಗೂ ಶ್ರೀನಿವಾಸನ್ ಹೆಚ್ಚು ಪ್ರಭಾವಶಾಲಿಯಾಗಿದ್ದರೂ, ಕೇಂದ್ರದಲ್ಲಿ ಅಧಿಕಾರ ಹೊಂದಿರುವ ಬಿಜೆಪಿ ಬೆಂಬಲ ಯಾರಿಗೆ ಸಿಗಲಿದೆ ಎಂಬುದೂ ನಿರ್ಣಾಯಕವೆನಿಸಿದೆ. ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಬಿಜೆಪಿಯ ಲೋಕಸಭಾ ಸದಸ್ಯರಾಗಿದ್ದಾರೆ. ಪವಾರ್ ಹಾಗೂ ಶ್ರೀನಿ ಬಣಕ್ಕೆ ಉತ್ತಮ ಬೆಂಬಲ ಇದೆಯಾದರೂ ಬಿಜೆಪಿ ಯಾರಿಗೆ ಪ್ರೋತ್ಸಾಹ ನೀಡಲಿದೆ ಎಂಬುದು ಪ್ರಮುಖವಾಗಲಿದೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ. ಇನ್ನು ಐಪಿಎಲ್ ಮುಖ್ಯಸ್ಥ, ಕಾಂಗ್ರೆಸ್ ಸಂಸದ ರಾಜೀವ್ ಶುಕ್ಲಾ ಕೂಡ ರೇಸ್‍ನಲ್ಲಿದ್ದಾರೆ. ಹೀಗಾಗಿ ಪವಾರ್ ಮತ್ತು ಶುಕ್ಲಾ ನಡುವಣದ ಪೈಪೋಟಿಯಲ್ಲಿ ಎನ್.ಶ್ರೀನಿವಾಸನ್ ಲಾಭ ಪಡೆಯುವ ಅವಕಾಶಗಳೂ ಸಾಕಷ್ಟಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com