
ನವದೆಹಲಿ: ಇತ್ತೀಚೆಗೆ ನಡೆದ ಕೊರಿಯಾ ಓಪನ್ ಟೂರ್ನಿಯಲ್ಲಿ ರನ್ನರ್ ಆಪ್ ಆಗುವ ಮೂಲಕ ಗಮನ ಸೆಳೆದ ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ ಅಜಯ್ ಜಯರಾಮ್, ವಿಶ್ವ ಬ್ಯಾಡ್ಮಿಂಟನ್ ರ್ಯಾಂಕಿಂಗ್‍ನಲ್ಲಿ ಬಡ್ತಿ ಪಡೆದು 25ನೇ ಸ್ಥಾನದಲ್ಲಿದ್ದಾರೆ.
ಗುರುವಾರ ಬಿಡುಗಡೆಯಾದ ವಿಶ್ವ ಬ್ಯಾಡ್ಮಿಂಟನ್ ಸಂಸ್ಥೆ ನೂತನ ರ್ಯಾಂಕಿಂಗ್‍ನಲ್ಲಿ ಅಜಯ್ 7 ಸ್ಥಾನಗಳ ಏರಿಕೆ ಕಂಡಿದ್ದಾರೆ. ಜಯರಾಮ್ ಕೊರಿಯಾ ಓಪನ್ ಟೂರ್ನಿಯ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ನಂಬರ್ ಒನ್ ಆಟಗಾರ ಚೀನಾದ ಚೆನ್ ಲಾಂಗ್ ವಿರುದ್ಧ ಪರಾಭವಗೊಂಡಿದ್ದರು. ಅಲ್ಲದೆ ರಷ್ಯಾ ಓಪನ್ ಹಾಗೂ ಮಲೇಷ್ಯಾ ಮಾಸ್ಟರ್ಸ್ ಟೂರ್ನಿಗಳೂ ಸೇರಿದಂತೆ ಎಲ್ಲಾ ಗ್ರಾಂಡ್ ಪ್ರಿಕ್ಸ್ ಟೂರ್ನಿಯಲ್ಲಿ ಅಜಯ್ ಸೆಮಿಫೈನಲ್‍ವರೆಗೂ ಸಾಗಿದ್ದರು. ಇನ್ನು ಭಾರತದ ಪ್ರಮುಖ ಆಟಗಾರರಾದ ಕೆ.ಶ್ರೀಕಾಂತ್ ಮತ್ತು ಪರುಪಳ್ಳಿ ಕಶ್ಯಪ್ ಕ್ರಮವಾಗಿ 5ನೇ ಹಾಗೂ 8ನೇ ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಎಚ್.ಎಸ್ ಪ್ರಣಯ್ ತಮ್ಮ ಸ್ಥಾನದಲ್ಲಿ ಕುಸಿತ ಕಂಡಿದ್ದು, 16ನೇ ಸ್ಥಾನಕ್ಕೆ ಇಳಿದಿದ್ದಾರೆ.
ಅಗ್ರಸ್ಥಾನದಲ್ಲೇ ಉಳಿದ ಸೈನಾ
ಮಹಿಳೆಯರ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಷಿಪ್ ರನ್ನರ್ ಅಪ್ ಸ್ಥಾನ ಪಡೆದ ಸೈನಾ ನೆಹ್ವಾಲ್ ಅಗ್ರಸ್ಥಾನದಲ್ಲೇ ಮುಂದುವರೆದಿದ್ದಾರೆ. ಇನ್ನು ಪಿವಿಸಿಂಧು 13ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಮಹಗಿಳೆಯರ ಡಬಲ್ಸ್ ಜೋಡಿ ಅಶ್ವಿನಿ ಪೊನ್ನಪ್ಪ ಮತ್ತು ಜ್ವಾಲಾ ಗುಟ್ಟಾ ತಮ್ಮ 11ನೇ ಸ್ಥಾನ ಮುಂದುವರೆದಿದ್ದಾರೆ. ಇತ್ತ ಪುರುಷರ ಡಬಲ್ಸ್ ಆಟಗಾರರಾದ ಮನು ಅತ್ರಿ ಮತ್ತು ಸುಮಿತ್ ರೆಡ್ಡಿ 19ನೇ ಸ್ಥಾನ ಪಡೆದಿದ್ದಾರೆ. ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ಯಾವುದೇ ಜೋಡಿ ಅಗ್ರ 25ರಲ್ಲಿ ಕಾಣಿಸಿಕೊಂಡಿಲ್ಲ.
Advertisement