
ರಿಯೋ ಡಿ ಜನೈರೋ: ರಿಯೋ ಒಲಿಂಪಿಕ್ಸ್ ನಲ್ಲಿ ಭಾರತೀಯ ಅಥ್ಲೀಟ್ ಗಳ ವೈಫಲ್ಯ ಮುಂದುವರೆದಿದ್ದು, ದೀಪಾ ಕರ್ಮಾಕರ್ ಬಳಿಕ ಮಹಿಳೆಯ 3000 ಮೀ ಸ್ಟೀಪಲ್ ಚೇಸ್ ನಲ್ಲಿ ಫೈನಲ್ ತಲುಪಿ ಭರವಸೆ ಮೂಡಿಸಿದ್ದ ಲಲಿತಾ ಬಾಬರ್ ಕೂಡ ಫೈನಲ್ ನಲ್ಲಿ ಪದಕಗಳಿಸುವಲ್ಲಿ ವಿಫಲರಾಗಿದ್ದಾರೆ.
ಸೋಮವಾರ ನಡೆದ ಮಹಿಳೆಯರ 3000 ಮೀ. ಸ್ಟೀಪಲ್ ಚೇಸ್ ರೇಸ್ ನಲ್ಲಿ ಲಲಿತಾ ಬಾಬರ್ 9 ನಿಮಿಷ 22.74 ಸೆಕೆಂಡ್ ಗಳಲ್ಲಿ ಗುರಿ ತಲುಪಿ 10 ನೇ ಸ್ಥಾನಕ್ಕೆ ತೃಪ್ತಿ ಪಟ್ಟರು. ಈ ಹಿಂದೆ ಶನಿವಾರ ನಡೆದ ಅರ್ಹತಾ ಸುತ್ತಿನಲ್ಲಿ ಓಡಿದ್ದ ಲಲಿತಾ ಬಾಬರ್ 9 ನಿಮಿಷ 19.76 ಸೆಕೆಂಡ್ ಗಳಲ್ಲಿ ಓಟ ಮುಗಿಸಿ ಭರವಸೆ ಮೂಡಿಸಿದ್ದರು. ಆದರೆ ಫೈನಲ್ ನಲ್ಲಿ ಅದಕ್ಕಿಂತ 3 ಸೆಕೆಂಡ್ ಅಧಿಕ ಸಮಯ ತೆಗೆದುಕೊಳ್ಳುವ ಮೂಲಕ 10ನೆಯವರಾಗಿ ಗುರಿ ಮುಟ್ಟಿದರು.
ಇನ್ನು ಕೇವಲ 8 ನಿಮಿಷ 59.75 ಸೆಕೆಂಡ್ ಗಳಲ್ಲಿ ರೇಸ್ ಪೂರ್ಣಗೊಳಿಸಿದ ಬಹ್ರೇನ್ ಮೂಲದ ರೂತ್ ಜೆಬೆತ್ ಅವರು ಚಿನ್ನದ ಪದಕ ಗಳಿಸಿದರೆ, 9 ನಿಮಿಷ 07.12 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿದ ಕೀನ್ಯಾದ ಹೈವಿನ್ ಕೀಯೆಂಗ್ ಜೆಪ್ಕೋಮೋಯ್ ಅವರು ಬೆಳ್ಳಿ ಮತ್ತು 9 ನಿಮಿಷ 7.63 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿದ ಅಮೆರಿಕದ ಎಮ್ಮಾ ಕೋಬರ್ನ್ ಅವರು ಕಂಚಿನ ಪದಕ ಗಳಿಸಿದರು.
ಪಂದ್ಯ ಸೋತರೂ ಕ್ರೀಡಾ ಪ್ರೇಮಿಗಳ ಮನಗೆದ್ದ ಲಲಿತಾ
ಫೈನಲ್ ಪಂದ್ಯದಲ್ಲಿ ಪದಕ ಗಳಿಸುವಲ್ಲಿ ಭಾರತೀಯ ಅಥ್ಲೀಟ್ ಲಲಿತಾ ಬಾಬರ್ ವಿಫಲರಾದರೂ ಕ್ರೀಡಾ ಪ್ರೇಮಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತ ಫೈನಲ್ ತಲುಪುವುದೇ ಅನುಮಾನ ಎಂಬಂತಿದ್ದ ಪರಿಸ್ಥಿತಿಯಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನದ ಮೂಲಕ ಭಾರತವನ್ನು ಫೈನಲ್ ಗೇರಿಸಿದ್ದ ಲಲಿತಾ ಬಾಬರ್ ದಾಖಲೆ ಸಮಯದಲ್ಲಿ ಓಟವನ್ನು ಪೂರ್ಣಗೊಳಿಸುವ ಮೂಲಕ ಮಾಜಿ ಭಾರತೀಯ ಅಥ್ಲೀಟ್ ಪಿಟಿ ಉಷಾ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಈ ಹಿಂದೆ 1984ರಲ್ಲಿ ಲಾಸ್ ಎಂಜಲೀಸ್ ನಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಪಿಟಿ ಉಷಾ 400 ಮೀ ಹರ್ಡಲ್ಸ್ ಸ್ಪರ್ಧೆಯಲ್ಲಿ 4ನೇ ಸ್ಥಾನಗಳಿಸಿದ್ದರು.
Advertisement