ಬೆಳ್ಳಿ ಪದಕ ಗೆದ್ದ ಸಿಂಧೂಗೆ ಖಡಕ್ ಕೋಚ್ ಆಗಿದ್ದ ಗೋಪಿಚಂದ್!

ಒಲಿಂಪಿಕ್ಸ್ ಬ್ಯಾಡ್ಮಿಂಟನ್ ನಲ್ಲಿ ಬೆಳ್ಳಿ ಪದಕ ಗೆದ್ದು ದೇಶಾದ್ಯಂತ ಪ್ರಶಂಸೆಗೆ ಕಾರಣವಾಗಿರುವ ಪಿವಿ ಸಿಂಧೂ, ಟೂರ್ನಿಗೆ ಸಿದ್ಧರಾಗಲು ಅನುಭವಿಸಿದ ಕಷ್ಟ ಅಷ್ಟಿಟಲ್ಲ.
ಪಿವಿ ಸಿಂಧೂ ಹಾಗೂ ಕೋಚ್ ಗೋಪಿಚಂದ್ (ಸಂಗ್ರಹ ಚಿತ್ರ)
ಪಿವಿ ಸಿಂಧೂ ಹಾಗೂ ಕೋಚ್ ಗೋಪಿಚಂದ್ (ಸಂಗ್ರಹ ಚಿತ್ರ)

ರಿಯೋ ಡಿ ಜನೈರೋ: ಒಲಿಂಪಿಕ್ಸ್ ಬ್ಯಾಡ್ಮಿಂಟನ್ ನಲ್ಲಿ ಬೆಳ್ಳಿ ಪದಕ ಗೆದ್ದು ದೇಶಾದ್ಯಂತ ಪ್ರಶಂಸೆಗೆ ಕಾರಣವಾಗಿರುವ ಪಿವಿ ಸಿಂಧೂ, ಟೂರ್ನಿಗೆ ಸಿದ್ಧರಾಗಲು ಅನುಭವಿಸಿದ ಕಷ್ಟ ಅಷ್ಟಿಟಲ್ಲ.

ಒಲಿಂಪಿಕ್ಸ್ ನಲ್ಲಿ ಪಿವಿ ಸಿಂಧೂ ಸಾಧನೆ ಹಿಂದೆ ಅವರ ಕೋಚ್ ಪುಲ್ಲೆಲ ಗೋಪಿಚಂದ್ ಅವರ ಪಾತ್ರ ಕೂಡ ಮಹತ್ವದ್ದಾಗಿದೆ. ಸಿಂಧೂ ಫೈನಲ್ ತಲುಪಲು ಹಾಗೂ ವಿಶ್ವದ ನಂಬರ್ ಒನ್  ಆಟಗಾರ್ತಿ ಸ್ಪೇನ್ ನ ಕ್ಯಾರೋಲಿನಾ ಮರಿನ್ ವಿರುದ್ಧ ವಿರೋಚಿತ ಹೋರಾಟ ಪ್ರದರ್ಶಿಸಲು ಅವರ ಕಠಿಣ ಪರಿಶ್ರಮ ಹಾಗೂ ಕೋಚ್ ಗೋಪಿಚಂದ್ ಅವರ ಕಠಿಣ ತರಬೇತಿ ಕೂಡ ಕಾರಣ. ಬೆಳ್ಳಿ  ಪದಕ ಪಡೆಯಲು ಪಿವಿ ಸಿಂಧೂ ಕಳೆದ 6 ತಿಂಗಳಲ್ಲಿ ಸಾಕಷ್ಟು ಕಳೆದುಕೊಂಡಿದ್ದು, ಅವರ ಈ ಸಾಧನೆಗಾಗಿ ಕೋಚ್ ಗೋಪಿಚಂದ್ ಅವರು ನೀಡಿದ ಹಿಂಸೆ ಕೂಡ ಸಾಕಷ್ಟು ಪ್ರಭಾವ ಬೀರಿದೆ ಎಂದರೆ ತಪ್ಪಾಗಲಾರದು.

ಏಕೆಂದರೆ ಪಿವಿ ಸಿಂಧೂ ಒಲಿಂಪಿಕ್ಸ್ ನಲ್ಲಿ ಮಹತ್ತರ ಸಾಧನೆ ಗೈಯ್ಯಬೇಕು ಎಂಬ ಉದ್ದೇಶದಿಂದ ಕೋಚ್ ಗೋಪಿಚಂದ್ ಸಾಕಷ್ಟು ಕಠಿಣ ನಿಯಮಗಳನ್ನು ಹೇರಿದ್ದರಂತೆ. ಮೂಲತಃ  ಹೈದರಾಬಾದ್ ಮೂಲದವರಾದ ಸಿಂಧೂಗೆ ಹೈದರಾಬಾದ್ ಬಿರಿಯಾನಿ, ಚಾಕೊಲೇಟ್ ಮತ್ತು ಐಸ್ ಕ್ರೀಂ ಎಂದರೆ ಪಂಚ ಪ್ರಾಣವಂತೆ. ಆದರೆ ಕೋಚ್ ಗೋಪಿಚಂದ್ ಈ ಮೂರು ವಸ್ತುಗಳನ್ನು  ಅವರಿಂದ ದೂರವಿಟ್ಟಿದ್ದರಂತೆ. ಅಲ್ಲದೆ ಅವರ ಐಪೋನ್ ಅನ್ನು ಕೂಡ ಗೋಪಿಚಂದ್ ಕಸಿದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಸಿಂಧೂ ದೃಷ್ಟಿ ಬ್ಯಾಡ್ಮಿಂಟನ್ ನಿಂದ ಆಚೀಚೆ ಹರಿಯಬಾರದು ಎಂಬ ಉದ್ದೇಶದಿಂದ ಗೋಪಿಚಂದ್ ಅವರ ಐಫೋನ್ ಕಿತ್ತಿಟ್ಟುಕೊಂಡಿದ್ದರಂತೆ. ಕೇವಲ ತರಬೇತಿ ವೇಳೆಯಲ್ಲಷ್ಟೇ ಅಲ್ಲ,  ತರಬೇತಿ ಮುಗಿದ ಬಳಿಕವೂ ಸಿಂಧೂ ಮೇಲೆ ತೀವ್ರ ನಿಗಾ ಇರಿಸಿದ್ದ ಗೋಪಿಚಂದ್ ಕೆಲವೊಮ್ಮೆ ಅವರ ಮನೆಯ ಫ್ರಿಡ್ಜ್ ಅನ್ನೂ ಕೂಡ ಬಿಡದೇ ಶೋಧ ನಡೆಸುತ್ತಿದ್ದರಂತೆ. ಅಲ್ಲದೆ ಮನೆ ಬಿಟ್ಟು  ಹೊರಗೆ ಊಟ ಮಾಡದಂತೆ ಕಟ್ಟಪ್ಪಣೆ ಮಾಡಿದ್ದರಂತೆ. ಈ ಊಟದ ಕುರಿತಾಗಿಯೂ ಮನೆಯವರಿಗೆ ಗೋಪಿಚಂದ್ ಕೆಲ ನಿರ್ದೇಶನಗಳನ್ನು ನೀಡಿದ್ದರಂತೆ. ಸಿಂಧೂಗೆ ಯಾವುದೇ ರೀತಿಯ ಸಿಹಿ  ಪದಾರ್ಥಗಳನ್ನು ನೀಡದಂತೆ ನಿರ್ದೇಶನ ನೀಡಿದ್ದರಂತೆ.

ಆಹಾರವಿರಲಿ ಹೊರಗೆ ಸಿಂಧು ನೀರನ್ನು ಕೂಡ ಕುಡಿಯುವಂತಿರಲಿಲ್ಲವಂತೆ. ಇನ್ನೂ ಅಚ್ಚರಿಯ ಅಂಶವೆಂದರೆ ಪೋಷಕರೊಂದಿಗೆ ದೇವಾಲಯಗಳಿಗೆ ತೆರಳುತ್ತಿದ್ದ ಸಿಂಧೂ ಅಲ್ಲಿ ನೀಡುವ  ಪ್ರಸಾದವನ್ನೂ ಕೂಡ ಸೇವಿಸಬಾರದು ಎಂದು ಗೋಪಿಚಂದ್ ಹೇಳಿದ್ದರಂತೆ. ಗೋಪಿಚಂದ್ ಅವರ ಈ ಕಠಿಣ ಆದೇಶಗಳೇ ಅವರನ್ನು ಫಿಟ್ ಆಗಿಸಿ ಒಲಿಂಪಿಕ್ಸ್ ನಲ್ಲಿ ಫೈನಲ್ ವರೆಗೂ ತಂದು  ನಿಲ್ಲಿಸಿತು ಎಂದು ಹೇಳಬಹುದು.

ಫೈನಲ್ ಬಳಿಕ ಸಿಂಧುಗೆ ಐಫೋನ್, ಐಸ್ ಕ್ರೀಮ್ ನೀಡಿದ ಕೋಚ್

ಇದೀಗ ರಿಯೊ ಒಲಿಪಿಂಕ್ಸ್ ಫೈನಲ್ ಪಂದ್ಯ ಮುಕ್ತಾಯವಾಗಿದ್ದು, ಸಿಂಧು ಬೆಳ್ಳಿ ಪದಕದೊಂದಿಗೆ ಭಾರತದ ಖ್ಯಾತಿಯನ್ನು ಆಗಸದೆತ್ತರಕ್ಕೆ ಏರಿಸಿದ್ದಾರೆ. ಆ ಮೂಲಕ ತಮ್ಮ 4 ತಿಂಗಳ ಕಠಿಣ  ಅಭ್ಯಾಸಕ್ಕೆ ಕೋಚ್ ಗೋಪಿಚಂದ್ ತೆರೆ ಎಳೆದಿದ್ದು, ಸಿಂಧೂ ಐಸ್ ಕ್ರೀಂ ತಿನ್ನಬಹುದು, ಅವರು ಐಫೋನ್ ವಾಪಸ್ ನೀಡುತ್ತೇನೆ ಎಂದು ಗೋಪಿಚಂದ್ ಘೋಷಿಸಿದ್ದಾರೆ.

"ಕಳೆದ ಮೂರು ತಿಂಗಳಿನಿಂದ ಸಿಂಧು ತಮ್ಮ ಫೋನ್ ಬಳಸಿಲ್ಲ. ನಾನು ಆಕೆಯ ಫೋನ್‍ನ್ನು ವಾಪಸ್ ಕೊಡುತ್ತೇನೆ. ಇದು ನಾನು ಮಾಡುವ ಮೊದಲ ಕೆಲಸ. ಇನ್ನು ಸಿಂಧುಗೆ ಸಿಹಿಮೊಸರು  ಎಂದರೆ ತುಂಬಾ ಇಷ್ಟ. ಆದರೆ ಇಲ್ಲಿಗೆ ಬಂದ ಬಳಿಕ ಅಂದರೆ ಕಳೆದ 12-13 ದಿನಗಳ ಹಿಂದೆ ಅದನ್ನು ತಿನ್ನಬಾರದೆಂದು ನಾನು ತಿಳಿಸಿದ್ದೆ. ಮೊಸರಷ್ಟೇ ಅಲ್ಲ ಐಸ್ ಕ್ರೀಂ ಕೂಡ ತಿನ್ನಬಾರದೆಂದೂ  ಹೇಳಿದ್ದೆ. ಈಗ ಸಿಂಧು ತನಗೇನು ಇಷ್ಟವೊ ಅದನ್ನೆಲ್ಲಾ ತಿನ್ನಬಹುದು ಎಂದು ಗೋಪಿಚಂದ್ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಸಿಂಧೂ ಪರಿಶ್ರಮ ಮತ್ತು ತರಬೇತಿ ಕುರಿತು ಮಾತನಾಡಿರುವ ಗೋಪಿಚಂದ್, "ಸಿಂಧು ಗೆಲುವಿನ ಹಿಂದೆ ಕಠಿಣ ಪರಿಶ್ರಮವಿದ್ದು, ಆಕೆ ಈ ಹಂತಕ್ಕೆ ತಲುಪಲು ತುಂಬಾ ತ್ಯಾಗ ಮಾಡಿದ್ದಾಳೆ. ಆಕೆ  ಈ ಕ್ಷಣವನ್ನು ಸಂಭ್ರಮಿಸಲಿ. ಆಕೆಯ ಸಾಧನೆಯಿಂದಾಗಿ ನಾನು ತುಂಬಾ ಖುಷಿಯಾಗಿದ್ದೇನೆ. ಈಗಷ್ಟೇ ಸಿಂಧೂ 21ರ ಹರೆಯಕ್ಕೆ ಕಾಲಿಟ್ಟಿದ್ದು, ಆಕೆ ಇನ್ನೂ ಚಿಕ್ಕವಳು. ಆಕೆ ಸಾಧಿಸಬೇಕಿರುವುದು  ಸಾಕಷ್ಟಿದೆ. ಆಕೆಯ ವೃತ್ತಿ ಬದುಕಿನಲ್ಲಿ ಕಳೆದವಾರ ನಿಜಕ್ಕೂ ಅದ್ಬುತವಾಗಿತ್ತು. ಕಳೆದವಾರ ಆಕೆ ನೀಡಿದ್ದ ಅದ್ಬುತ ಪ್ರದರ್ಶನವೇ ಆಕೆಯನ್ನು ಇಂದು ಈ ಸ್ಥಾನದಲ್ಲಿ ತಂದು ನಿಲ್ಲಿಸಿದೆ. ಚಿನ್ನ  ಗೆಲ್ಲಲಿಲ್ಲ ಎಂಬ ಕೊರಗು ಬೇಡ, ದೇಶಕ್ಕಾಗಿ ನೀನು ಪದಕ ಗೆದ್ದಿರುವೆ ಎಂದು ಸಿಂಧು ಗೆ ಹೇಳಿದ್ದೇನೆ" ಎಂದು ಅವರು ಹೇಳಿದರು.

"ಸಿಂಧುಗೆ ಮರಿನ್ ನಿಜಕ್ಕೂ ಪ್ರಬಲ ಸ್ಪರ್ಧಿಯಾಗಿದ್ದರು. ಪಂದ್ಯದ ಎಲ್ಲ 10 ವಿಭಾಗಗಳಲ್ಲಿಯೂ ಮರಿನ್ ಅದ್ಬುತ ಪ್ರದರ್ಶನ ನೀಡಿದರು. ಸಿಂಧೂ ಕೂಡ ಮರಿನ್ ಗೆ ಉತ್ತಮ ಸ್ಪರ್ಧೆ ಒಡ್ಡಿದರು.  ಇಂದಿನ ಸೋಲಿನಿಂದ ಸಿಂಧೂ ಒಂದು ಪಾಠ ಕಲಿತಿದ್ದಾಳೆ. ಇದೇ ಹುಮ್ಮಸಿನಲ್ಲಿ ಭವಿಷ್ಯದಲ್ಲಿ ಆಕೆ ಖಂಡಿತಾ ಕಮ್ ಬ್ಯಾಕ್ ಮಾಡುತ್ತಾಳೆ" ಎಂದು ಗೋಪಿಚಂದ್ ಹೇಳಿದರು.

ಪ್ರಧಾನಿ ಮೋದಿ ಟ್ವೀಟ್, ಪ್ರೋತ್ಸಾಹಕ್ಕೆ ಧನ್ಯವಾದ ಹೇಳಿದ ಕೋಚ್
ಇದೇ ವೇಳೆ ರಿಯೊ ಒಲಿಂಪಿಕ್ಸ್ ನಲ್ಲಿ ಈ ಸಾಧನೆ ಗೈಯ್ಯಲು ಕಾರಣರಾದ ಅಭಿಮಾನಿಗಳಿಗೆ ಕೋಚ್ ಗೋಪಿಚಂದ್ ಧನ್ಯವಾದ ಹೇಳಿದ್ದಾರೆ. ಅಂತೆಯೇ ಪ್ರಧಾನಿಯವರ ಟ್ವೀಟ್  ಬಗ್ಗೆ  ಉತ್ತರಿಸಿದ ಗೋಪಿಚಂದ್, ಪ್ರಧಾನಿ ನರೇಂದ್ರ ಮೋದಿ ಅವರ ಟ್ವೀಟ್ ಗೆ ಉತ್ತರಿಸಲು ನನ್ನ ಕೈಯಲ್ಲೀಗ ಫೋನ್ ಇಲ್ಲ. ಆದರೆ ಆ ಟ್ವೀಟ್  ಇನ್ನಷ್ಟು ಸಾಧನೆಗೆ ಪ್ರೋತ್ಸಾಹ ನೀಡುತ್ತದೆ. ಎಲ್ಲರೂ  ತಮ್ಮಿಂದಾದ ಪ್ರಯತ್ನವನ್ನು ಮಾಡಿದ್ದಾರೆ. ಅದರಲ್ಲಿ ಕೆಲವರು ಮಾತ್ರ ಗೆಲ್ಲುತ್ತಾರೆ. ಈ ಗೆಲುವಿನ ಕ್ಷಣದಲ್ಲಿ ಭಾರತ ಸರಕಾರ ಮತ್ತು ಎಸ್ಎಐ ಸಂಸ್ಥೆಗೆ ನಾನು ಧನ್ಯವಾದ ಹೇಳಲು ಇಚ್ಛಿಸುತ್ತೇನೆ  ಎಂದು ಗೋಪಿಚಂದ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com