
ನವದೆಹಲಿ: ರಿಯೋ ಒಲಿಂಪಿಕ್ಸ್ 2016ರಲ್ಲಿ ಗೆಲವು ಸಾಧಿಸಿ ಭಾರತಕ್ಕೆ ಹೆಮ್ಮೆಯ ಗರಿ ತಂದುಕೊಟ್ಟಿರುವ ಪಿ.ವಿ. ಸಿಂಧು ಹಾಗೂ ಸಾಕ್ಷಿ ಮಲಿಕ್ ಅವರಿಗೆ ದೆಹಲಿ ಸರ್ಕಾರ ನಗದು ಬಹುಮಾನವನ್ನು ಶನಿವಾರ ಘೋಷಣೆ ಮಾಡಿದೆ.
ಬೆಳ್ಳಿ ಪದಕ ಗೆದ್ದ ಪಿ.ವಿ ಸಿಂಧು ಅವರಿಗೆ ರು. 2 ಕೋಟಿ ಹಾಗೂ ಕಂಚು ಪದಕ ಗೆದ್ದ ಸಾಕ್ಷಿ ಮಲಿಕ್ ಅವರಿಗೆ ರು. 1 ಕೋಟಿ ನಗದನ್ನು ಬಹುಮಾನವಾಗಿ ನೀಡಲು ದೆಹಲಿ ಸರ್ಕಾರ ನಿರ್ಧರಿಸಿದೆ.
ಈ ಕುರಿತಂತೆ ಘೋಷಣೆ ಮಾಡಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು, ನಮ್ಮ ಸಹೋದ್ಯೋಗಿಯೊಬ್ಬನ ಮಗಳು ಇಂದು ದೇಶ ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದಾಳೆ. ಡಿಟಿಸಿ (ದೆಹಲಿ ಸಾರಿಗೆ ಇಲಾಖೆ)ಯ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರೂ ತನ್ನ ಮಗಳನ್ನು ಒಲಿಂಪಿಯನ್ ಮಾಡುವಲ್ಲಿ ಸುಖ್ಬೀರ್ ಮಲಿಕ್ ಶ್ರಮವಹಿಸಿದ್ದಾರೆ.
ಸಾಕ್ಷಿ ಮಲಿಕ್ ಜೊತೆಗೆ ಆಕೆಯ ತಂದೆ ಸುಖ್ಬೀರ್ ಮಲಿಕ್ ಅವರಿಗೂ ನಾವು ಕೃತಜ್ಞತೆಗಳನ್ನು ಸಲ್ಲಿಸಬೇಕಾಗಿದೆ. ಸುಖ್ಬೀರ್ ಅವರಿಗೆ ನೇರ ಬಡ್ತಿ ನೀಡುವಂತೆ ದೆಹಲಿ ಸಾರಿಗೆ ಸಚಿವ ಸತ್ಯೇಂದರ್ ಜೈನ್ ಅವರಿಗೆ ಈ ಸಂದರ್ಭದಲ್ಲಿ ಶಿಫಾರಸ್ಸು ಮಾಡುತ್ತಿದ್ದೇನೆ. ಅಲ್ಲದೆ ಒಲಿಂಪಿಕ್ಸ್ ನಲ್ಲಿ ಗೆದ್ದು ಹೆಮ್ಮೆ ಗರಿ ತಂದುಕೊಟ್ಟಿರುವ ಬೆಳ್ಳಿ ಪದಕ ಗೆದ್ದ ಪಿ.ವಿ ಸಿಂಧು ಅವರಿಗೆ ರು. 2 ಕೋಟಿ ಹಾಗೂ ಕಂಚು ಪದಕ ಗೆದ್ದ ಸಾಕ್ಷಿ ಮಲಿಕ್ ಅವರಿಗೆ ರು. 1 ಕೋಟಿ ನಗದು ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
Advertisement