ಪಿ.ವಿ ಸಿಂಧು
ಕ್ರೀಡೆ
ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್: ಕ್ವಾರ್ಟರ್ ಫೈನಲ್ ಗೆ ಭಾರತ
ಏಷಿಯಾ ಟೀಂ ಚಾಂಪಿಯನ್ ಶಿಪ್ ನ ಮಹಿಳೆಯರ ಹಾಗೂ ಪುರುಷರ ವಿಭಾಗಗಳೆರಡರಲ್ಲೂ ಪಾರಮ್ಯ ಮೆರೆದಿರುವ ಭಾರತ, ಎದುರಾಳಿ ಸಿಂಗಾಪುರವನ್ನು 5-0...
ಹೈದರಾಬಾದ್: ಏಷಿಯಾ ಟೀಂ ಚಾಂಪಿಯನ್ ಶಿಪ್ ನ ಮಹಿಳೆಯರ ಹಾಗೂ ಪುರುಷರ ವಿಭಾಗಗಳೆರಡರಲ್ಲೂ ಪಾರಮ್ಯ ಮೆರೆದಿರುವ ಭಾರತ, ಎದುರಾಳಿ ಸಿಂಗಾಪುರವನ್ನು 5-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡುವ ಮೂಲಕ ಕ್ವಾರ್ಟರ್ ಫೈನಲ್ ಗೆ ಲಗ್ಗೆ ಇಟ್ಟಿದೆ.
ಈ ಹಿಂದಿನ ಸುತ್ತಿನಲ್ಲಿ ಗ್ರೂಪ್ ಎ ನ ಬಲಿಷ್ಠ ತಂಡವಾದ ಚೀನಾದೆದುರು ಮಂಡಿಯೂರಿದ್ದ ಪುರುಷರ ತಂಡಕ್ಕೆ ಈ ಗೆಲುವು ಆತ್ಮವಿಶ್ವಾಸ ಹೆಚ್ಚಿಸಿದೆ. ಇದೇ ರೀತಿ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಅನುಪಸ್ಥಿತಿಯಲ್ಲಿ ಜಪಾನ್ ಎದುರು ಪರಾಜಯ ಅನುಭವಿಸಿದ್ದ ಮಹಿಳೆಯರ ತಂಡದಲ್ಲಿ ಹೊಸ ಚೈತನ್ಯ ತುಂಬಿದೆ.
ಮೊದಲನೇ ಡಬಲ್ಸ್ ಪಂದ್ಯದಲ್ಲಿ ಆಕರ್ಷಕ ಪ್ರದರ್ಶನ ನೀಡಿದ ಭಾರತದ ಮನು ಅತ್ರಿ-ಸುಮೀತ್ ರೆಡ್ಡಿ ಜೋಡಿ ಸಿಂಗಾಪುರದ ಯಾಂಗ್ ಕೈ ಟೆರ್ರಿ -ಕೀನ್ ಹೀನ್ ಜೋಡಿಯನ್ನು 21 -15, 21 -14 ನೇರಸೆಟ್ ಗಳ ಅಂತರದಲ್ಲಿ ಹಿಮ್ಮೆಟ್ಟುವ ಮೂಲಕ ಭಾರತದ ಕ್ವಾರ್ಟರ್ ಫೈನಲ್ ಪ್ರವೇಶ ಖಾತ್ರಿ ಪಡಿಸಿದರು,
ಮಹಿಳೆಯರ ವಿಭಾಗದ ಮೊದಲನೇ ಸಿಂಗಲ್ಸ್ ಪಂದ್ಯದಲ್ಲಿ ಬಿಡಬ್ಲ್ಯೂಎಫ್ ನ 12ನೇ ಶ್ರೇಯಾಂಕಿತ ಭಾರತದ ಪಿ.ವಿ ಸಿಂಧು ಸಿಂಗಾಪುರದ ಕ್ಸಿಯೂ ಲಿಯಾಂಗ್ ವಿರುದ್ಧ 21-17, 21-11 ಅಂತರದ ಗೆಲುವು ಸಾಧಿಸಿದರು. ಮೊದಲ ಗೇಮ್ ನಲ್ಲಿ 42ನೇ ಶ್ರೇಯಾಂಕಿತ ಸಿಂಗಾಪುರದ ಆಟಗಾರ್ತಿ ಉತ್ತಮ ಪ್ರದರ್ಶನ ನೀಡಿದರು ಸಿಂಧು ಮುನ್ನಡೆ ಗಳಿಸುವುದನ್ನು ತಪ್ಪಿಸಲು ಆಗಲಿಲ್ಲ. ಎರಡನೇ ಗೇಮ್ ನಲ್ಲಿ ತನ್ನ ಎಂದಿನ ಪ್ರಬಲ ಹೊಡೆತಗಳ ಮೂಲಕ ಅಂಕ ಪೇರಿಸುತ್ತಾ ಸಾಗಿದ ಸಿಂಧು ಎದುರಾಳಿ ಆಟಗಾರ್ತಿಯನ್ನು ಚೇತರಿಸಿಕೊಳ್ಳಲು ಅವಕಾಶ ನೀಡಲಿಲ್ಲ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ