
ಮೀರ್ ಪುರ: ಭಾರತ ತಂಡ ಸಾಂಘಿಕ ಹೋರಾಟ ಮತ್ತು ಪ್ರಭಾವಿ ಬೌಲಿಂಗ್ ಪ್ರದರ್ಶನಕ್ಕೆ ತತ್ತರಿಸಿ ಹೋದ ಪಾಕಿಸ್ತಾನ ತಂಡ ಏಷ್ಯಾ ಕಪ್ ಟಿ20 ಸರಣಿಯ ಭಾರತದ ವಿರುದ್ಧ ಪಂದ್ಯದಲ್ಲಿ ಕೇವಲ 83 ರನ್ ಗಳಿಗೆ ಆಲ್ ಔಟ್ ಆಯಿತು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ನಿರ್ಧಾರ ಸರಿ ಎಂಬುದು ಮೊದಲ ಓವರ್ ನಲ್ಲಿ ಸ್ಪಷ್ಟವಾಗಿತ್ತು. ಮೊದಲ ಓವರ್ ಎಸೆದ ಆಶೀಶ್ ನೆಹ್ರಾ 4 ರನ್ ಗಳಿಸಿದ್ದ ಮಹಮದ್ ಹಫೀಜ್ ರನ್ನು ಔಟ್ ಮಾಡುವ ಮೂಲಕ ಪಾಕಿಸ್ತಾನದ ಪತನಕ್ಕೆ ಬುನಾದಿ ಹಾಕಿದರು. ಸರ್ಫರಾಜ್ ಅಹ್ಮದ್ ಅವರನ್ನು ಹೊರತು ಪಡಿಸಿ ಆ ಬಳಿಕ ಬಂದ ಯಾವುದೇ ಬ್ಯಾಟ್ಸಮನ್ ಭಾರತೀಯ ಬೌಲರ್ ಗಳಿಗೆ ಉತ್ತರ ನೀಡುವಲ್ಲಿ ಸಂಪೂರ್ಣ ವಿಫಲರಾದರು.
ಪಾಕಿಸ್ತಾನದ ಸರ್ಫಾರಜ್ ಅಹ್ಮದ್ ಗಳಿಸಿದ ವೈಯುಕ್ತಿಕ 25 ರನ್ ಗಳೇ ಅತ್ಯಧಿಕ ಮೊತ್ತವೆಂದರೆ ನೀವೇ ಊಹಿಸಬಹುದು ಪಾಕಿಸ್ತಾನದ ಬ್ಯಾಟಿಂಗ್ ಎಷ್ಟು ಕಳಪೆಯಾಗಿತ್ತು ಎನ್ನುವುದನ್ನು. ಬಳಿಕ ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತಾ ಹೋದ ಪಾಕಿಸ್ತಾನ ಅಂತಿಮವಾಗಿ 17.3 ಓವರ್ ಗಳಲ್ಲಿ ಕೇವಲ 83 ರನ್ ಗಳಿಗೆ ಆಲ್ ಔಟ್ ಆಯಿತು. ಖುರ್ರಮ್ ಮಝೂರ್ (10 ರನ್), ಷಾರ್ಜೀಲ್ ಖಾನ್ (7ರನ್), ಶೊಯೆಬ್ ಮಲ್ಲಿಕ್ (4ರನ್). ಉಮರ್ ಅಕ್ಮಲ್ (3 ರನ್), ಸರ್ಫರಾಜ್ ಅಹ್ಮದ್ (25 ರನ್), ಶಾಹಿದ್ ಅಫ್ರಿದಿ (2 ರನ್), ಮಹಮದ್ ಸಮಿ (8ರನ್), ಮಹಮದ್ ಆಮಿರ್ (1 ರನ್) ಯಾರೂ ಕೂಡ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಲ್ಲುವ ಪ್ರಯತ್ನವನ್ನೇ ಮಾಡಲಿಲ್ಲ.
ಭಾರತ ಕೂಡ ತನ್ನ ಬದ್ಧ ಶತ್ರು ಪಾಕಿಸ್ತಾನದ ವಿರುದ್ಧ ಪ್ರಬಲ ಬೌಲಿಂಗ್ ದಾಳಿಯನ್ನೇ ಮಾಡಿತು. ಪ್ರಮುಖವಾಗಿ ಹೊಸ ಪ್ರತಿಭೆ ಪಾಂಡ್ಯ ಅವರು ತಮ್ಮ ವೇಗದ ಮೂಲಕ ಪಾಕ್ ಬ್ಯಾಟ್ಸಮನ್ ಗಳನ್ನು ಕಂಗೆಡಿಸುವ ಮೂಲಕ 3 ಪ್ರಮುಖ ವಿಕೆಟ್ ಗಳಿಸಿದರು. ರವೀಂದ್ರ ಜಡೇಜಾ ಕೂಡ 2 ವಿಕೆಟ್ ಕಬಳಿಸಿ ಪಾಂಡ್ಯಗೆ ಉತ್ತಮ ಸಾಥ್ ನೀಡಿದರು. ಉಳಿದಂತೆ ಆಶೀಶ್ ನೆಹ್ರಾ, ಬುಮ್ರಾಹ್ ಮತ್ತು ಯುವರಾಜ್ ಸಿಂಗ್ ತಲಾ ಒಂದು ವಿಕೆಟ್ ಪಡೆಯುವ ಮೂಲಕ ಪಾಕಿಸ್ತಾನದ ಅಲ್ಪ ಮೊತ್ತಕೆ ಕಾರಣರಾದರು.
Advertisement