ಪಾಕಿಸ್ತಾನದ ಬೌಲರ್ ಆಮೀರ್ ರನ್ನು ಶ್ಲಾಘಿಸಿದ ಕೊಹ್ಲಿ
ಮೀರ್ ಪುರ: ಏಷ್ಯಾಕಪ್ ಟಿ20 ಸರಣಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಹಲವು ಕುತೂಹಲಗಳಿಗೆ ಕಾರಣವಾಯಿತು. ಪ್ರಮುಖವಾಗಿ ಪಾಕಿಸ್ತಾನ ತಂಡದ ಬೌಲರ್ ಮಹಮದ್ ಆಮೀರ್ ರನ್ನು ಭಾರತ ತಂಡ ವಿರಾಟ್ ಕೊಹ್ಲಿ ಹೊಗಳಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತ್ತು.
ನಿನ್ನೆಯ ಪಂದ್ಯದಲ್ಲಿ ಪಾಕಿಸ್ತಾನ ತಂಡ ಭಾರತದ ಪ್ರಭಾವಿ ಬೌಲಿಂಗ್ ಗೆ ತತ್ತರಿಸಿ ಕೇವಲ 83 ರನ್ ಗಳಿಗೆ ಆಲ್ ಔಟ್ ಆಯಿತಾದರೂ, ಭಾರತಕ್ಕೆ ತಿರುಗೇಟು ನೀಡುವಲ್ಲಿ ಯಶಸ್ವಿಯಾಯಿತು. ಭಾರತ ಪಂದ್ಯವನ್ನು ಗೆಲ್ಲಿತಾದರೂ, ಮಹಮದ್ ಆಮೀರ್ ರ ಮಾರಕ ಬೌಲಿಂಗ್ ಭಾರತ ಬಲಾಢ್ಯ ಬ್ಯಾಟಿಂಗ್ ಪಡೆಯನ್ನೇ ಒಂದುಕ್ಷಣ ಅವಕ್ಕಾಗುವಂತೆ ಮಾಡಿತ್ತು. ಒಟ್ಟು ನಾಲ್ಕು ಓವರ್ ಎಸೆದೆ ಮಹಮದ್ ಆಮೀರ್ ಕೇವಲ 18 ರನ್ ನೀಡಿ ಭಾರತ ಪ್ರಮುಖ ಮೂರು ವಿಕೆಟ್ ಕಬಳಿಸಿದ್ದರು.
ಇದೇ ಕಾರಣಕ್ಕೆ ಪಂದ್ಯ ಮುಗಿದ ಬಳಿಕ ಭಾರತ ತಂಡದ ವಿರಾಟ್ ಕೊಹ್ಲಿ ಮಹಮದ್ ಆಮೀರ್ ರನ್ನು ಶ್ಲಾಘಿಸಿದರು. "ಮಹಮದ್ ಆಮೀರ್ ಅವರ ಬೌಲಿಂಗ್ ನಿಜಕ್ಕೂ ಶ್ಲಾಘನಾರ್ಹವಾಗಿತ್ತು. ಪಂದ್ಯದ ವೇಳೆಯಲ್ಲಿಯೇ ನಾನು ಅವರನ್ನು ಅಭಿನಂದಿಸಿದ್ದೆ. ಕಠಿಣ ಪರಿಸ್ಥಿತಿಯಲ್ಲಿ ಕಮ್ ಬ್ಯಾಕ್ ಮಾಡುವುದು ನಿಜಕ್ಕೂ ಸವಾಲೇ ಸರಿ. ಆಮೀರ್ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದರು. ಅವರ ಬೌಲಿಂಗ್ ನಲ್ಲಿ ಅಂತಾರಾಷ್ಟ್ರೀಯ ಬೌಲಿಂಗ್ ಗುಣಮಟ್ಟವಿತ್ತು" ಎಂದು ಕೊಹ್ಲಿ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ