ಇಂದಿನಿಂದ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್

ಇಂಡಿಯನ್ ಬ್ಯಾಡ್ಮಿಂಟನ್ ಲೀಗ್(ಐಬಿಎಲ್) ಸ್ಥಗಿತಗೊಂಡ ಎರಡು ವರ್ಷಗಳ ನಂತರ ಮರು ನಾಮಕರಣದೊಂದಿಗೆ ಆರಂಭಗೊಳ್ಳುತ್ತಿರುವ ಪ್ರೀಮಿಯರ್....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮುಂಬಯಿ: ಇಂಡಿಯನ್ ಬ್ಯಾಡ್ಮಿಂಟನ್ ಲೀಗ್(ಐಬಿಎಲ್) ಸ್ಥಗಿತಗೊಂಡ ಎರಡು ವರ್ಷಗಳ ನಂತರ ಮರು ನಾಮಕರಣದೊಂದಿಗೆ ಆರಂಭಗೊಳ್ಳುತ್ತಿರುವ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್(ಪಿಬಿಎಲ್)ಗೆ ಶನಿವಾರ ಚಾಲನೆ ದೊರೆಯಲಿದ್ದು, ರಾಷ್ಟ್ರೀಯ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.

ಐಬಿಎಲ್ ಮತ್ತು ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ ನಡುವಿನ ಕಾನೂನು ಸಮರದ ಬಳಿಕ ಅಂತಿಮವಾಗಿ ನ್ಯಾಯಾಲಯ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ಎಂಬ ಹೊಸ ನಾಮಕರಣದೊಂದಿಗೆ ಜನವರಿ 2ರಿಂದ 17ರ ವರೆಗೆ ಪಿಬಿಎಲ್ ನಡೆಸಲು ಬಿಎಐಗೆ ಅನುವು ಮಾಡಿಕೊಟ್ಟಿದೆ.

ಬಾಲಿವುಡ್ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಮತ್ತು ಸಂಗೀತ ಸಂಯೋಜಕರಾದ ಸಲೀಮ್ ಮತ್ತು ಸುಲೈಮನ್ ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನ ನೀಡಲಿದ್ದಾರೆ. ಜಾಕ್ವೆಲಿನ್ ಬಾಲಿವುಡ್‌ನ ಪ್ರಮುಖ ಹಾಡುಗಳಿಗೆ ಹೆಜ್ಜೆ ಹಾಕಲಿದ್ದರೆ, ಸಲೀಮ್ ಮತ್ತು ಸುಲೈಮನ್ ಪಿಬಿಎಲ್‌ನ ಅಧಿಕೃತ ಹಾಡನ್ನು ಹಾಡಲಿದ್ದಾರೆ.

ವಾರಿಯರ್ಸ್ - ರಾಕೆಟ್ಸ್ ಹಣಾಹಣಿ
ಉದ್ಘಾಟನಾ ಪಂದ್ಯ, 2012ರ ಒಲಿಂಪಿಕ್ ಕಂಚಿನ ಪದಕ ವಿಜೇತೆ ಮತ್ತು 2015ರ ವಿಶ್ವ ಚಾಂಪಿಯನ್‌ಷಿಪ್ ಬೆಳ್ಳಿ ಪದಕ ವಿಜೇತ ಸೈನಾ ನೆಹ್ವಾಲ್ ನೇತೃತ್ವದ ಲಖನೌ ಮೂಲದ ಅವಧ್ ವಾರಿಯರ್ಸ್ ಮತ್ತು ಅತಿಥೇಯ ಮುಂಬಯಿ ರಾಕೆಟ್ಸ್ ನಡುವೆ ನಡೆಯಲಿದೆ.
ಪಾದದ ಗಾಯದಿಂದ ಇತ್ತೀಚೆಗೆ ಚೇತರಿಸಿಕೊಂಡಿರುವ ಸೈನಾ ನೆಹ್ವಾಲ್ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದು, ತಂಡಕ್ಕೆ ಮೊದಲ ಜಯ ತಂದಿಡುವ ಗುರಿ ಹೊಂದಿದ್ದಾರೆ. ಇವರಿಗೆ ಸಾಯಿ ಪ್ರಣೀತ್, ಸೌರಭ್ ವರ್ಮಾ ಮತ್ತು ಎಸ್.ತನಂಗ್‌ಸಾಕ್ ಬಲ ನೀಡಬಲ್ಲ ಆಟಗಾರರೆನಿಸಿದ್ದಾರೆ. ಅತ್ತ ಆತಿಥೇಯ ತಂಡದ ಪರ ಎಚ್.ಎಸ್.ಪ್ರಣೋಯ್, ಗುರು ಸಾಯಿದತ್ ಪುರುಷರ ಸಿಂಗಲ್ಸ್‌ನಲ್ಲಿ ಪ್ರಮುಖ ಆಕರ್ಷಣೆಯಾಗಿದ್ದು, ಮಹಿಳೆಯರ ಸಿಂಗಲ್ಸ್‌ನಲ್ಲಿ ರುತುವಿಕಾ ಗಾಡೆ, ಹ್ಯಾನಿ ಲಿ ಪ್ರಮುಖರಾಗಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ ಮುಂಬಯಿ, ವಾರಿಯರ್ಸ್ ಅಲ್ಲದೆ ಇತರ ಫ್ರಾಂಚೈಸಿಗಳಾದ ಡೆಲ್ಲಿ ಏಸರ್ಸ್, ಹೈದರಾಬಾದ್ ಹಂಟರ್ಸ್, ಚೆನ್ನೈ ಸ್ಮ್ಯಾಷರ್ಸ್ ಮತ್ತು ಬೆಂಗಳೂರು ಟಾಪ್ ಗನ್ಸ್ ತಂಡಗಳು ಪಾಲ್ಗೊಳ್ಳಲಿವೆ.

ಟ್ರಂಪ್ ಮ್ಯಾಚ್ ಕುತೂಹಲ

ಪಿಬಿಎಲ್‌ನಲ್ಲಿ 'ಟ್ರಂಪ್ ಮ್ಯಾಚ್' ಎಂಬ ಹೊಸ ನಿಯಮ ಜಾರಿಗೊಳಿಸಲಾಗಿದೆ. ಇದು ಆಟಗಾರರ ಮತ್ತು ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದು, ಮೊದಲ ಪಂದ್ಯದಲ್ಲಿ ಇದರ ಲಾಭ ಯಾವ ತಂಡಕ್ಕೆ ಎಂಬ ಕುತೂಹಲಗಳು ತೀವ್ರಗೊಂಡಿವೆ. ತಂಡವೊಂದು ಆಡುವ ಐದು ಪಂದ್ಯಗಳಲ್ಲಿ ಒಂದನ್ನು ಟ್ರಂಪ್ ಮ್ಯಾಚ್ ಆಗಿ ಆಯ್ಕೆ ಮಾಡಿಕೊಳ್ಳಬೇಕಿದೆ. ಟ್ರಂಪ್ ಮ್ಯಾಚ್ ವಿಜೇತರು ಎರಡು ಬೋನಸ್ ಅಂಕ ಗಳಿಸಲಿದ್ದರೆ, ಸೋತ ತಂಡ ಋಣಾತ್ಮಕ ಅಂಕ ಪಡೆಯಲಿದೆ. ಹೀಗಾಗಿ ಟ್ರಂಪ್ ಮ್ಯಾಚ್ ಇತ್ತಂಡಗಳಿಗೆ ನಿರ್ಣಾಯಕವಾಗಲಿದೆ.

ಮಲೇಷ್ಯಾದ ಅನುಭವಿ ಆಟಗಾರ ಲೀ ಚಾಂಗ್ ವೀ ಮತ್ತು ಭಾರತದ ಪರುಪಳ್ಳಿ ಕಶ್ಯಪ್ ಹೈದರಾಬಾದ್ ತಂಡದ ಪರ ಆಡಲಿದ್ದರೆ, ಎರಡು ಬಾರಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಜಯಿಸಿರುವ ಪಿ.ವಿ. ಸಿಂಧೂ ಚೆನ್ನೈ ಸ್ಮ್ಯಾಷರ್ಸ್ ಪರ ಕಣಕ್ಕಿಳಿಯಲಿದ್ದಾರೆ. ಭಾರತದ ಉದಯೋನ್ಮುಖ ಆಟಗಾರ ಕಿಡಂಬಿ ಶ್ರೀಕಾಂತ್ ಮತ್ತು ಅಶ್ವಿನಿ ಪೊನ್ನಪ್ಪ ಬೆಂಗಳೂರು ಟಾಪ್ ಗನ್ಸ್‌ಗೆ ಬಲ ತುಂಬಲಿದ್ದಾರೆ.

ತಂಡಗಳು- ಸ್ಟಾರ್ ಆಟಗಾರರು
ಮುಂಬಯಿ ರಾಕೆಟ್ಸ್- ಎಚ್.ಎಸ್. ಪ್ರಣೋಯ್
ಅವಧ್ ವಾರಿಯರ್ಸ್ -ಸೈನಾ ನೆಹ್ವಾಲ್
ಬೆಂಗಳೂರು ಟಾಪ್‌ಗನ್ಸ್ -ಕಿಡಂಬಿ ಶ್ರೀಕಾಂತ್
ಹೈದರಾಬಾದ್ ಹಂಟರ್ಸ್ - ಲೀ ಚಾಂಗ್ ವೀ
ಚೆನ್ನೈ ಸ್ಯ್ಮಾಷರ್ಸ್ -ಪಿ.ವಿ.ಸಿಂಧೂ
ಡೆಲ್ಲಿ ಏಸರ್ಸ್ - ಅಜಯ್ ಜಯರಾಮ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com